ಚಂಡೀಗಢ, ಜ. 21: ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್ (viral post) ಆಸ್ಪತ್ರೆ ಸಿಬ್ಬಂದಿಯ ಕರ್ತವ್ಯನಿಷ್ಠೆ ಹಾಗೂ ಜವಾಬ್ದಾರಿ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ. ಜತೆಗೆ ಕಳವಳಕ್ಕೂ ಕಾರಣವಾಗಿದೆ. ರೋಗಿಗಳಿಗೆ ಏನಾದರೂ ಆದರೆ ತಮಗೇನು ಎಂಬಂತೆ ವರ್ತಿಸಿದ ಆಸ್ಪತ್ರೆ ಸಿಬ್ಬಂದಿ ತನ್ನ ಪಾಡಿಗೆ ಲೂಡೋ ಆಡುವುದರಲ್ಲಿ ನಿರತಳಾಗಿದ್ದಾಳೆ. ಪಂಜಾಬ್‌ನ (Punjab) ಸಾರ್ವಜನಿಕ ಆರೋಗ್ಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಸಾವಿರಾರು ರೋಗಿಗಳಿಗೆ ಒಂದೇ ರಕ್ತದೊತ್ತಡ ಯಂತ್ರವನ್ನು ಬಳಸಲಾಗುತ್ತಿದೆ ಮತ್ತು ಅದಕ್ಕೆ ನಿಯೋಜಿಸಲಾದ ಸಿಬ್ಬಂದಿ ಕರ್ತವ್ಯದ ಸಮಯದಲ್ಲಿ ಮೊಬೈಲ್ ಗೇಮ್ ಆಡುವಲ್ಲಿ ನಿರತಳಾಗಿದ್ದಳು ಎಂದು ಪೋಸ್ಟ್‌ನಲ್ಲಿ ಆರೋಪಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಸ್ಫೋಟಗೊಂಡಿರುವ ಪೋಸ್ಟ್‌ನಲ್ಲಿ ಘಟನೆಯನ್ನು ವಿವರಿಸಲಾಗಿದೆ. ಇದು ಪಂಜಾಬ್‌ನ ಸಾರ್ವಜನಿಕ ಆರೋಗ್ಯ ಸೇವೆಯ ಸ್ಥಿತಿಯ ಬಗ್ಗೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಮಾಲಕನ ಮೃತದೇಹದ ಪಕ್ಕದಲ್ಲೇ ಕಾದು ಕುಳಿತ ಶ್ವಾನ
ಈ ಪೋಸ್ಟ್ ಅನ್ನು ರಟ್ಟನ್ ಧಿಲ್ಲೋನ್ ಹಂಚಿಕೊಂಡಿದ್ದಾರೆ. ಅವರು ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿರುವ ಒಂದೇ ಒಂದು ಬಿಪಿ ಪರೀಕ್ಷಿಸುವ ಯಂತ್ರವನ್ನು ಗಮನಿಸಿದರು. ಅಪಾರ ಸಂಖ್ಯೆಯ ರೋಗಿಗಳನ್ನು ಅದರಲ್ಲಿ ಪರೀಕ್ಷಿಸಲಾಗುತ್ತದೆ. ಈ ಘಟನೆ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ.
ʼʼಇದು ಪಂಜಾಬ್‌ನ ಆರೋಗ್ಯ ಕ್ಷೇತ್ರದ ವಾಸ್ತವ. ಇಂದು ಒಂದು ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅಲ್ಲಿ ಒಂದೇ ಬಿಪಿ ಯಂತ್ರವು ಸಾವಿರಾರು ರೋಗಿಗಳಿಗೆ ಸೇವೆ ಸಲ್ಲಿಸುತ್ತಿತ್ತು. ಅದಕ್ಕೆ ನಿಯೋಜಿಸಲಾದ ಸಿಬ್ಬಂದಿ ಮಾತ್ರ ಲೂಡೋ ಆಟ ಆಡುವುದರಲ್ಲಿ ನಿರತರಾಗಿದ್ದರುʼʼ ಎಂದು ಧಿಲ್ಲೋನ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇಲ್ಲಿದೆ ಪೋಸ್ಟ್:
ʼʼಸಿಬ್ಬಂದಿಯ ಆಟ ಮುಗಿಯಲು ನಾನು 10 ನಿಮಿಷ ಕಾಯಬೇಕಾಯಿತು. ಸರಿಯಾಗಿ ಪರೀಕ್ಷಿಸಿ, ಹೆಚ್ಚು ಸಮಯ ತೆಗೆದುಕೊಳ್ಳಬೇಡಿ ಎಂದು ಒತ್ತಾಯಿಸಿದರೂ, ಆಕೆ ನನ್ನ ಬಿಪಿ ಪರಿಶೀಲಿಸುತ್ತ ಆಟವಾಡುವುದನ್ನು ಮುಂದುವರೆಸಿದಳುʼʼ ಎಂದು ಬೇಸರದಿಂದ ಹೇಳಿದ್ದಾರೆ. ʼʼಮೇಲ್ವಿಚಾರಣೆ ಇಲ್ಲ. ಕರ್ತವ್ಯನಿಷ್ಠೆಯೂ ಇಲ್ಲ. ಇದು ಪಂಜಾಬ್‌ನಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯ ಸ್ಥಿತಿʼʼ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ತ್ವರಿತವಾಗಿ ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ಅನೇಕರು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. ಬಹುಷಃ ಅವಳಿಗೆ ಬಿಪಿ ಜಾಸ್ತಿಯಿದ್ದಿರಬೇಕು ಎಂದು ಒಬ್ಬ ಬಳಕೆದಾರರು ಲೇವಡಿ ಮಾಡಿದ್ದಾರೆ. ಇನ್ನೂ 2–3 ಜನ ಇರಬೇಕು ಅಲ್ವಾ? ಲುಡೋ ಪಾರ್ಟ್ನರ್ಸ್. ಗ್ರೂಪ್ ಗೇಮ್ ಇದೆಯಲ್ವಾ ಎಂದು ಮತ್ತೊಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ. ಇಂಥವರು ಸರ್ಕಾರಿ ಆಸ್ಪತ್ರೆಯಲ್ಲಿ ಏಕೆ ಸೇವೆ ಸಲ್ಲಿಸುತ್ತಾರೆ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಲೇ ಪಂಜಾಬ್ ಆರೋಗ್ಯ ಸಚಿವ ಡಾ. ಬಲ್ಬೀರ್ ಸಿಂಗ್ ಅವರ ಗಮನ ಸೆಳೆಯಿತು. ಅವರು ಸಾರ್ವಜನಿಕವಾಗಿ, ದಯವಿಟ್ಟು ಘಟನೆಯ ವಿವರಗಳನ್ನು ನನಗೆ ಮೆಸೇಜ್ ಮಾಡಿ. ಘಟನೆಯ ಬಗ್ಗೆ ಸಂಪೂರ್ಣ ತನಿಖೆಯ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.