ಬಿಟ್ ಹೋಗ್ಬೇಡ ನನ್ನ; ಆತ್ಮಹತ್ಯೆ ಮಾಡಿಕೊಂಡ ಮಾಲಕನ ಮೃತದೇಹದ ಪಕ್ಕದಲ್ಲೇ ಕಾದು ಕುಳಿತ ಶ್ವಾನ
ಮಧ್ಯ ಪ್ರದೇಶದ ಶಿವಪುರಿಯಲ್ಲಿ ತನ್ನ ಮಾಲಕನ ಆತ್ಮಹತ್ಯೆಯ ಬಳಿಕವೂ ಸಾಕು ನಾಯಿ ಇಡೀ ರಾತ್ರಿ ಮೃತದೇಹದ ಪಕ್ಕದಲ್ಲೇ ಕಾವಲು ಕಾದ ಮನಕಲುಕುವ ಘಟನೆ ನಡೆದಿದೆ. ಶವ ಯಾತ್ರೆಯಲ್ಲೂ ಹೆಜ್ಜೆ ಹಾಕಿ ಅಂತ್ಯ ಸಂಸ್ಕಾರ ಮುಗಿಯುವವರೆಗೂ ನಿಂತಿದೆ. ಈ ಘಟನೆಯ ದೃಶ್ಯ ವೈರಲ್ ಆಗಿದ್ದು, ಶ್ವಾನದ ನಿಷ್ಠೆ ಕಂದು ನೆಟ್ಟಿಗರು ಕಣ್ಣೀರಾಗಿದ್ದಾರೆ.
ಶವಯಾತ್ರೆಯಲ್ಲೂ ಭಾಗಿಯಾದ ನಾಯಿ -
ಭೋಪಾಲ್, ಜ. 21: ಮಧ್ಯ ಪ್ರದೇಶ (Madhya Pradesh)ದ ಶಿವಪುರಿ (Shivpuri)ಯಲ್ಲಿ ದುಃಖದಿಂದ ಮೌನ ಆವರಿಸಿದ್ದ ಸಂದರ್ಭದಲ್ಲಿ ಶ್ವಾನವೊಂದರ ನಿಷ್ಠೆ ಎಲ್ಲರ ಗಮನ ಸೆಳೆದಿದೆ. ಹಳ್ಳಿಯೊಂದರಲ್ಲಿ ತನ್ನ ಮಾಲಕ ಮೃತಪಟ್ಟ ಬಳಿಕವೂ ಆತನನ್ನು ಬಿಟ್ಟು ಹೋಗಲು ನಿರಾಕರಿಸಿದ ಸಾಕು ನಾಯಿ, ಇಡೀ ರಾತ್ರಿ ಅಲ್ಲಿಯೇ ಕುಳಿತು ಕಾವಲು ಕಾದಿದೆ. ಅಷ್ಟೇ ಅಲ್ಲ ಶವ ಯಾತ್ರೆಯಲ್ಲೂ ಜತೆಗೆ ನಡೆದು, ಅಂತ್ಯಸಂಸ್ಕಾರ ಮುಗಿಯುವವರೆಗೂ ಅಲ್ಲಿಯೇ ಶಾಂತವಾಗಿ ಕುಳಿತ ದೃಶ್ಯ ಎಲ್ಲರ ಮನ ಕಲಕುವಂತೆ ಮಾಡಿದೆ.
ಹೌದು, 40 ವರ್ಷದ ಜಗದೀಶ್ ಪ್ರಜಾಪತಿ (Jagdish Prajapati) ಸೋಮವಾರ (ಜನವರಿ 19) ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕುಟುಂಬಸ್ಥರು ಸ್ಥಳಕ್ಕಾಗಮಿಸಿ ನೋಡಿದಾಗ ಈ ಸಾಕು ನಾಯಿ ತನ್ನ ಮಾಲಕನನ್ನು ಕಾಪಾಡುವಂತೆ ಜಗದೀಶ್ ಅವರ ಮೃತದೇಹದ ಪಕ್ಕದಲ್ಲೇ ಕುಳಿತಿದ್ದುದು ಕಂಡು ಬಂದಿದೆ. ಇಡೀ ರಾತ್ರಿ ನಾಯಿ ಅಲ್ಲಿಯೇ ಕಾದು ಕುಳಿತ್ತಿತ್ತು.
ವಿಡಿಯೊ ಇಲ್ಲಿದೆ:
Shivpuri: Pet dog chases owner's body for 4km before taking the tractor ride to crematorium, attends his funeral, refrains from eating anything#MadhyaPradesh | #MPNews | #FreePressMP pic.twitter.com/frkSyvF2a3
— Free Press Madhya Pradesh (@FreePressMP) January 21, 2026
ಮರುದಿನ ಬೆಳಗ್ಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕರೇರಾಕ್ಕೆ ಕರೆದೊಯ್ಯುವಾಗ ಶ್ವಾನವು ಟ್ರ್ಯಾಕ್ಟರ್-ಟ್ರಾಲಿಯ ಹಿಂದೆ ಸುಮಾರು ನಾಲ್ಕು ಕಿಲೋ ಮೀಟರ್‌ಗಳಷ್ಟು ಓಡಿದ್ದು, ಗ್ರಾಮಸ್ಥರೆಲ್ಲರೂ ಇದನ್ನು ನೋಡಿ ಅಚ್ಚರಿಗೊಂಡರು. ನಾಯಿಯ ಆ ಮೂಕ ರೋದನೆ ನೋಡಲಾಗದೇ ಕುಟುಂಬಸ್ಥರು ಅದನ್ನೂ ಟ್ರಾಲಿಯಲ್ಲಿ ಕೂರಿಸಿಕೊಂಡರು. ಮರಣೋತ್ತರ ಪರೀಕ್ಷಾ ಕೇಂದ್ರದಲ್ಲೂ ಹತ್ತಿರದಲ್ಲೇ ಕಾದು ಕುಳಿತಿದ್ದ ಶ್ವಾನವು, ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ, ಮೃತದೇಹದೊಂದಿಗೆ ಗ್ರಾಮಕ್ಕೆ ಮರಳಿತು.
ಮರವೇರಿ ಹಾಯಾಗಿ ಕುಳಿತ ಹುಲಿ; AI ವಿಡಿಯೊ ಎಂದ ನೆಟ್ಟಿಗರು
ಚಿತಾಗರದಲ್ಲೂ ಊಟ, ನೀರನ್ನೂ ಸ್ವೀಕರಿಸದೇ ಚಿತೆಯ ಪಕ್ಕದಲ್ಲೇ ಕುಳಿತಿದ್ದ ಶ್ವಾನವನ್ನು ದೂರ ಕಳಿಸಲು ಮಾಡಿದ ಎಲ್ಲ ಪ್ರಯತ್ನಗಳನ್ನು ವಿಫಲವಾದವು. ಹಿರಿಯ ಪೊಲೀಸ್ ಸಿಬ್ಬಂದಿಗೂ ಈ ಪ್ರಾಣಿಯ ಸ್ವಾಮಿ ನಿಷ್ಠೆ ಆಶ್ಚರ್ಯ ಮೂಡಿಸಿತು. ನಂತರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಆ ಸಾಕು ನಾಯಿಯ ನಿಷ್ಠೆಯನ್ನು ಪ್ರಶಂಸಿಸುವ ವಿಡಿಯೊವೊಂದನ್ನು ಮಾಡಿ ಬಿಡುಗಡೆ ಮಾಡಿದ್ದಾರೆ. ಇದೀಗ ಆ ವಿಡಿಯೊ ವೈರಲ್ ಆಗಿದ್ದು, ಹಳ್ಳಿಯ ಗಡಿಗಳನ್ನು ದಾಟಿ ಅನೇಕ ಹೃದಯಗಳನ್ನು ಸ್ಪರ್ಶಿಸಿದೆ.
ಜಗದೀಶ್ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇದೀಗ ಜನರ ಮನಸ್ಸಿನಲ್ಲಿ ಉಳಿದಿರುವುದು ಕಾನೂನು ಪ್ರಕ್ರಿಯೆಯಲ್ಲ, ಸ್ಮರಣೆ. ಪ್ರೀತಿ ಎಂದರೆ ಮಾತು-ಪದಗಳಿಂದ ಅಳೆಯುವ ಈ ಜಗತ್ತಿನಲ್ಲಿ, ಆ ಶ್ವಾನ ಅದನ್ನು ತನ್ನ ನಿಷ್ಠಯಿಂದ ತೋರಿಸಿದೆ. ತನ್ನ ಮಾಲಕ ಇನ್ನು ಬಾರದ ಲೋಕಕ್ಕೆ ತೆರಳಿದ್ದಾನೆ ಎಂಬುವುದನ್ನು ಅದು ಅರ್ಥ ಮಾಡಿಕೊಂಡಿತೋ ಇಲ್ಲವೋ ಗೊತ್ತಿಲ್ಲ. ಆದರೆ ತನ್ನ ಮಾಲಕನ ಪ್ರೀತಿ ಇನ್ನು ಸಿಗುವುದಿಲ್ಲ ಎಂಬುವುದನ್ನು ಅದು ಚೆನ್ನಾಗಿ ಅರಿತಿತ್ತು. ಚಿತೆಯಲ್ಲಿನ ಬೆಂಕಿ ತಣ್ಣಗಾಗುವವರೆಗೂ ಶ್ವಾನವು ಅಲ್ಲಿಯೇ ಕುಳಿತಿದ್ದು, ಎಲ್ಲರನ್ನು ಮೂಕ ವಿಸ್ಮಿತರನ್ನಾಗಿ ಮಾಡಿತು.