ಹರಿಯಾಣ, ಏ. 07: ಪ್ರಯಾಗರಾಜ್‌ನ ಮಹಾಕುಂಭದ (Maha kumbh) ವೇಳೆ 'ಐಐಟಿ ಬಾಬಾʼ ಎಂದೇ ಪ್ರಸಿದ್ಧರಾದ ಅಭಯ್ ಸಿಂಗ್, ಇದೀಗ ಆಧ್ಯಾತ್ಮದಿಂದ ಗೃಹಸ್ಥಾಶ್ರಮದ (marriage) ಹಾದಿ ಹಿಡಿದಿದ್ದಾರೆ. ಬೆಂಗಳೂರು ಮೂಲದ ಇಂಜಿನಿಯರ್ ಜೊತೆ ವಿವಾಹವಾಗಿದ್ದಾರೆ. IIT ಬಾಂಬೆ ಪದವೀಧರ ಅಭಯ್ ಸಿಂಗ್, ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ವಿವಾಹವಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷದ ಮಹಾಕುಂಭಮೇಳದಲ್ಲಿ ಇವರು ಐಐಟಿ ಬಾಬಾ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು.
ಅಭಯ್ ಸಿಂಗ್ ಅವರು ಇಂಜಿನಿಯರಿಂಗ್ ಪದವೀಧರೆಯಾದ ಪ್ರೀತಿಕಾ ಎಂಬವರನ್ನು ಮದುವೆಯಾಗಿದ್ದಾರೆ. ಈ ಮದುವೆಯು ಹಿಮಾಚಲ ಪ್ರದೇಶದ ಅಘಂಜರ್ ಮಹಾದೇವ ದೇವಾಲಯದಲ್ಲಿ ಶಿವರಾತ್ರಿಯಂದು ಶಾಸ್ತ್ರೋಕ್ತವಾಗಿ ನಡೆದಿದ್ದು, ಫೆಬ್ರವರಿ 19 ರಂದು ಇವರು ಕೋರ್ಟ್ ಮ್ಯಾರೇಜ್ ಕೂಡ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ವಿಷಯ ಸಾರ್ವಜನಿಕವಾಗಿ ತಿಳಿದುಬಂದಿದೆ.
ಸೋಮವಾರದಂದು ಅಭಯ್ ಸಿಂಗ್ ತಮ್ಮ ಹೊಸ ವಧುವಿನೊಂದಿಗೆ ಹರಿಯಾಣದ ಝಜ್ಜರ್ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮಕ್ಕೆ ಮರಳಿದರು. ಈ ಸಂದರ್ಭದಲ್ಲೂ ಅವರು ತಮ್ಮ ಎಂದಿನ ಕೇಸರಿ ವಸ್ತ್ರಧಾರಿಗಳಾಗಿಯೇ ಕಾಣಿಸಿಕೊಂಡರು. ಬ್ಯಾಂಕ್‌ನಲ್ಲಿ ಕೆವೈಸಿ (KYC) ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತು ಪೋಷಕರ ಆಶೀರ್ವಾದ ಪಡೆಯಲು ಊರಿಗೆ ಬಂದಿರುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಮ್ಮ ಬಾಂಧವ್ಯ ವರ್ಷಗಳಷ್ಟು ಹಳೆಯದು. ಗೆಳೆತನದಿಂದ ಆರಂಭವಾಗಿ ನಂತರ ದಾಂಪತ್ಯದತ್ತ ತಿರುಗಿತು. ಅಭಯ್ ಸರಳ ಸಜ್ಜನ ವ್ಯಕ್ತಿ ಎಂದು ಪ್ರೀತಿಕಾ ಈ ವೇಳೆ ತಿಳಿಸಿದ್ದಾರೆ.
IIT Baba: ಸುಳ್ಳಾದ ಐಐಟಿ ಬಾಬಾ ಭವಿಷ್ಯ; ನೀನೊಬ್ಬ ಡೋಂಗಿ ಬಾಬಾ ಎಂದ ನೆಟ್ಟಿಗರು
ಯಾರು ಈ ಐಐಟಿ ಬಾಬಾ?
ಅಭಯ್ ಸಿಂಗ್ (ಅಭಯ್ ಗ್ರೆವಾಲ್) ಮೂಲತಃ ಹರಿಯಾಣದವರು. ಇವರ ಜೀವನದ ಪಯಣ ಕುತೂಹಲಕಾರಿಯಾಗಿದೆ. ಇವರು ಪ್ರತಿಷ್ಠಿತ ಐಐಟಿ ಬಾಂಬೆಯಿಂದ ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ ಕಲೆ ಮತ್ತು ವಿನ್ಯಾಸದ ಕಡೆಗೆ ಆಸಕ್ತಿ ಬೆಳೆಸಿಕೊಂಡು 'ಮಾಸ್ಟರ್ಸ್ ಇನ್ ಡಿಸೈನ್' ಪೂರ್ಣಗೊಳಿಸಿದರು. ಕೆನಡಾದಲ್ಲಿ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದ ಇವರು, ವಾರ್ಷಿಕ ₹36 ಲಕ್ಷ ಸಂಬಳ ಪಡೆಯುತ್ತಿದ್ದರು.
ಕೆನಡಾದಲ್ಲಿದ್ದಾಗ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಜೀವನದ ಅರ್ಥವನ್ನು ಹುಡುಕುತ್ತಾ ಹೋಗಿ, ಅಂತಿಮವಾಗಿ ಕಾರ್ಪೊರೇಟ್ ಜೀವನವನ್ನು ತ್ಯಜಿಸಿ ಆಧ್ಯಾತ್ಮದ ಕಡೆಗೆ ಮುಖ ಮಾಡಿದರು. 2025ರ ಮಹಾಕುಂಭ ಮೇಳದಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ನಂತರ ಇವರು ಜನಪ್ರಿಯರಾದರು. ಸನ್ಯಾಸಿಯ ವೇಷದಲ್ಲಿದ್ದ ವ್ಯಕ್ತಿ ತಾನು IIT ಪದವೀಧರ ಎಂದು ಹೇಳಿದಾಗ ಸಂದರ್ಶಕರು ಅಚ್ಚರಿಗೊಂಡಿದ್ದರು. ಅಂದಿನಿಂದ ಇವರು ಐಐಟಿ ಬಾಬಾ ಎಂದೇ ಖ್ಯಾತರಾದರು.
ಹಿಂದೆ ನೀಡಿದ ಸಂದರ್ಶನವೊಂದರಲ್ಲಿ, ಅಭಯ್ ಸಿಂಗ್, ತಮ್ಮ ಪೋಷಕರ ನಡುವಿನ ಕಲಹಗಳನ್ನು ನೋಡಿ ಮದುವೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುವುದಾಗಿ ಹೇಳಿದ್ದರು. ಭಾರತದಲ್ಲಿದ್ದಾಗ ನಾಲ್ಕು ವರ್ಷಗಳ ಕಾಲ ಪ್ರೇಮ ಸಂಬಂಧದಲ್ಲಿದ್ದರೂ, ಅವರು ವಿವಾಹವಾಗಿರಲಿಲ್ಲ. ಅಲ್ಲದೆ, ಕೆಲವು ಕಾಲ ಅವರು ಕುಟುಂಬದಿಂದ ದೂರವಾಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅವರ ತಂದೆ ಮತ್ತು ತಾಯಿ ಶೀಲಾ ದೇವಿ ಅವರು ತಮ್ಮ ಮಗ ಸಂಸಾರ ಜೀವನಕ್ಕೆ ಮರಳಿದ್ದಕ್ಕೆ ಮತ್ತು ಸೊಸೆಯನ್ನು ಮನೆಗೆ ಸ್ವಾಗತಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
IIT Baba: ನನ್ನ ಬಳಿ ಇದ್ದುದು ಡ್ರಗ್ಸ್ ಅಲ್ಲ, ದೇವರ ಪ್ರಸಾದ: ಐಐಟಿ ಬಾಬಾನಿಂದ ಸಮರ್ಥನೆ