Viral News: ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು- ಉದ್ಯಮಿಯ ಹೇಳಿಕೆಗೆ ನೆಟ್ಟಿಗರಿಂದ ಭಾರೀ ಆಕ್ರೋಶ
Working Hours: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಎಐ ಸ್ಟಾರ್ಟ್ಅಪ್ ಗ್ರೆಪ್ಟೈಲ್‌ನ ಭಾರತೀಯ ಮೂಲದ ಸಿಇಒ ದಕ್ಷ ಗುಪ್ತಾ, ದಿನಕ್ಕೆ 12 ರಿಂದ 14 ಗಂಟೆಗಳ ಕಾಲ, ವಾರದಲ್ಲಿ ಆರು ದಿನ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಈ ಮೂಲಕ ಮತ್ತೆ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

-

ಸ್ಯಾನ್ ಫ್ರಾನ್ಸಿಸ್ಕೋ: ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿಯವರು ಯುವ ಭಾರತೀಯರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಲ್ಲದೆ ವಿಶ್ವದ ನಂಬರ್ 1 ಸಿರಿವಂತ ಉದ್ಯಮಿ ಎಲಾನ್ ಮಸ್ಕ್, ವಾರಕ್ಕೆ 80 ಗಂಟೆಗಳ ಕೆಲಸ ಮಾಡಬೇಕು ಎಂಬ ಹೇಳಿಕೆ ನೀಡಿದ್ದರು. ಈ ವಿಚಾರದ ಚರ್ಚೆಯು ಇನ್ನೂ ಬಹಳ ಭಿನ್ನಾಭಿಪ್ರಾಯವನ್ನು ಹೊಂದಿದೆ. ಬಹುತೇಕರು ಇದನ್ನು ವಿರೋಧಿಸಿದ್ದರು. ಇದೀಗ, 23 ವರ್ಷದ ಭಾರತೀಯ ಮೂಲದ ಉದ್ಯಮಿಯೊಬ್ಬರು ಈಗ ಇದೇ ರೀತಿಯ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದಾರೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಎಐ ಸ್ಟಾರ್ಟ್ಅಪ್ ಗ್ರೆಪ್ಟೈಲ್‌ನ ಭಾರತೀಯ ಮೂಲದ ಸಿಇಒ ದಕ್ಷ ಗುಪ್ತಾ, ಮಹತ್ವಾಕಾಂಕ್ಷೆಯ ಟೆಕ್ ಉದ್ಯೋಗಿಗಳಿಗೆ ದೀರ್ಘಾವಧಿಯ ಕೆಲಸವು ರೂಢಿಯಾಗಿದೆ ಎಂದು ಹೇಳಿದರು. ಅವರು ದಿನಕ್ಕೆ 12 ರಿಂದ 14 ಗಂಟೆಗಳ ಕಾಲ, ವಾರದಲ್ಲಿ ಆರು ದಿನ ಕೆಲಸ ಮಾಡಲು ಸೂಚಿಸಿದರು. ಈಗಿನ ವಾತಾವರಣವೆಂದರೆ ಮದ್ಯಪಾನ, ಮಾದಕ ದ್ರವ್ಯ ಸೇವನೆ ಮಾಡುವುದು ಬೇಡ. ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ, ವಾರದಲ್ಲಿ ಆರು ದಿನ ಕೆಲಸ ಮಾಡಬೇಕು ಎಂದು ಹೇಳಿದರು.
ಗುಪ್ತಾ ಅವರ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ. ಶಾಶ್ವತ ಮಾನಸಿಕ ಆರೋಗ್ಯ ಅಪಾಯಗಳನ್ನು ಮಾಡಬಹುದಾದ ಜೀವನಶೈಲಿಯನ್ನು ಟೀಕಿಸಿದ್ದಾರೆ. ಒಂದು ದಿನ ನೀವು ಸಾಕಷ್ಟು ಹಣದೊಂದಿಗೆ ಕೆಲಸದಿಂದ ನಿವೃತ್ತರಾಗುತ್ತೀರಿ. ಈ ವೇಳೆಗೆ ನಿಮಗೆ ಸ್ನೇಹಿತರಿಲ್ಲ ಎಂದು ಅರಿತುಕೊಳ್ಳುತ್ತೀರಿ. ನೀವು ಗಳಿಸಿದ ಹಣವನ್ನು ಸರಿಯಾಗಿ ಆನಂದಿಸಲು ಸಾಧ್ಯವಾಗುವುದಿಲ್ಲ. ಆ ವೇಳೆಗೆ ನಿಮಗೆ ತುಂಬಾ ವಯಸ್ಸಾಗಿರುತ್ತದೆ ಎಂದು ಬಳಕೆದಾರರೊಬ್ಬರು ಹೇಳಿದರು. ವ್ಯಕ್ತಿಯೊಬ್ಬ ಯಾವಾಗಲೂ ಕೆಲಸ ಮಾಡುತ್ತಿದ್ದರೆ, ಮದುವೆಯಾಗಲು ಸಂಗಾತಿಯನ್ನು ಹೇಗೆ ಹುಡುಕುತ್ತಾರೆ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Viral Video: ಬ್ಯಾಂಕ್ ಮ್ಯಾನೇಜರ್ ಮೇಲೆ ಮುಸುಕುಧಾರಿಗಳಿಂದ ಹಲ್ಲೆ
ಒಬ್ಬ ಉದ್ಯೋಗಿಗೆ ಈ ರೀತಿಯ ಜೀವನವು ಖಿನ್ನತೆಯನ್ನುಂಟುಮಾಡುತ್ತದೆ. ಅದು ಅವರ ಮಾನಸಿಕ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ ಎಂದು ಮಗದೊಬ್ಬ ಬಳಕೆದಾರ ಟೀಕಿಸಿದರು. ಹೆಚ್ಚಿನ ವೇತನ ಎಂದರೆ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುವುದು ಎಂದು ಹೇಳಿದ್ದಾರೆ.
ಟೀಕೆಗಳ ಹೊರತಾಗಿಯೂ, ಈ ರೀತಿ ಕೆಲಸ ನಿರ್ವಹಿಸುವುದರಿಂದ ಉತ್ತಮ ಪ್ರಯೋಜನವಿದೆ ಎಂದು ಗುಪ್ತಾ ಹೇಳಿದ್ದಾರೆ. ಈ ಬಗ್ಗೆ ವಿವರವನ್ನು ಹಂಚಿಕೊಂಡ ಅವರು, ಒಬ್ಬ ಕಿರಿಯ ಉದ್ಯೋಗಿ ವಾರ್ಷಿಕವಾಗಿ $ 140,000 ರಿಂದ $ 180,000 (ರೂ. 1.2–1.5 ಕೋಟಿ) ಮೂಲ ವೇತನವನ್ನು ನಿರೀಕ್ಷಿಸಬಹುದು. ಜೊತೆಗೆ ವರ್ಷಕ್ಕೆ $130,000–$180,000 ಮೌಲ್ಯದ ಈಕ್ವಿಟಿಯನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದಾರೆ. ಏಳು ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವ ವೃತ್ತಿಪರರಿಗೆ, ವೇತನವು $240,000 (ರೂ. 2.1 ಕೋಟಿ) ರಿಂದ $ 270,000 (ರೂ. 2.3 ಕೋಟಿ) ವರೆಗೆ ಇರುತ್ತದೆ ಎಂದು ತಿಳಿಸಿದ್ದಾರೆ.