ನವದೆಹಲಿ: ಜಾಗತಿಕ ಯುದ್ಧ ಮತ್ತು ಮಹಾ ಸಂಘರ್ಷಗಳ ನಡುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸ್ಥಾಪಿಸಲು ವಿಶ್ವಸಂಸ್ಥೆ (UN) ಸಂಪೂರ್ಣ ವಿಫಲವಾಗಿದೆ ಎಂದು ಇರಾನ್ ತೀವ್ರ ಆಕ್ರೋಶ ಹೊರಹಾಕಿದೆ. ಈ ಬಾರಿ ಕೇವಲ ಸಭೆ-ಸಮಾರಂಭಗಳಲ್ಲಿ ಹೇಳಿಕೆ ನೀಡುವ (Viral News) ಬದಲು, ಭಾರತೀಯ ಚಿತ್ರರಂಗದ ಸರ್ವಕಾಲಿಕ ಶ್ರೇಷ್ಠ ಸಿನಿಮಾ 'ಶೋಲೆ'(Sholay) ಯ ಅತ್ಯಂತ ಜನಪ್ರಿಯ 'ಠಾಕೂರ್' ಪಾತ್ರದ ಮೀಮ್ ಬಳಸಿಕೊಂಡು ಟ್ರೋಲ್ ಮಾಡಿದೆ.
ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯು ತನ್ನ ಅಧಿಕೃತ ಏಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ಮೀಮ್‌ನಲ್ಲಿ, ʼಪುಸ್ತಕಗಳ ಮೇಲಷ್ಟೇ ಅಸಂಖ್ಯಾತ ಕೈಗಳನ್ನು ಹೊಂದಿರುವ ಸೂಪರ್‌ಹೀರೋ ತರ ಕಾಣುವ ವಿಶ್ವಸಂಸ್ಥೆ, ವಾಸ್ತವದಲ್ಲಿ ಶೋಲೆ ವಿಲನ್ ಗಬ್ಬರ್ ಸಿಂಗ್‌ನಿಂತೆ ಎರಡೂ ಕೈಗಳನ್ನು ಕಳೆದುಕೊಂಡು ಅಸಹಾಯಕನಾಗಿ ನಿಲ್ಲುವ ಶೋಲೆ ಸಿನಿಮಾದ 'ಠಾಕೂರ್' ನಂತಾಗಿದೆ" ಎಂದು ಲೇವಡಿ ಮಾಡಿದೆ. ಭಾರತೀಯರ ಪಾಪ್ ಸಂಸ್ಕೃತಿಯನ್ನು ಬಳಸಿ ವಿಶ್ವಸಂಸ್ಥೆಯ ಅಸಹಾಯಕತೆಯನ್ನು ಬಿಂಬಿಸಿದ ಇರಾನ್‌ನ ಈ ಮೀಮ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡ್ತಿದೆ.
ಮೀಮ್‌ನಲ್ಲಿ ಏನಿದೆ?
ಇರಾನ್ ಹಂಚಿಕೊಂಡಿರುವ ಮೀಮ್‌ನಲ್ಲಿ ಎರಡು ಚಿತ್ರಗಳಿದ್ದು, ಒಂದು ʼಪಠ್ಯ ಪುಸ್ತಕಗಳ ಪ್ರಕಾರ ವಿಶ್ವಸಂಸ್ಥೆʼ ಇನ್ನೊಂದು ʼವಾಸ್ತವದಲ್ಲಿ ವಿಶ್ವಸಂಸ್ಥೆʼ ಎಂದು ಇದೆ. ʼಪಠ್ಯ ಪುಸ್ತಕಗಳ ಪ್ರಕಾರ ವಿಶ್ವಸಂಸ್ಥೆʼ ಈ ಶೀರ್ಷಿಕೆಯಡಿ ಹಾಲಿವುಡ್‌ನ ಮ್ಯಾಟೆಂಟ್ ಅಥವಾ ಸೂಪರ್ ಹೀರೋ ʼ
ʼಡಾಕ್ಟರ್ ಸ್ಟ್ರೇಂಜ್ʼ ಹಲವು ಕೈಗಳುನ್ನು ಹೊಂದಿರುವ ಪ್ರಭಾವಶಾಲಿ ವ್ಯಕ್ತಿಯ ಚಿತ್ರವನ್ನು ಪ್ರದರ್ಶಿಸಲಾಗಿದೆ. ಅಂದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ಸಂಘರ್ಷವಾದರೂ ತಡೆಯಲು ವಿಶ್ವಸಂಸ್ಥೆಗೆ ಅಸಂಖ್ಯಾತ ಕೈಗಳ ಶಕ್ತಿ ಹಾಗೂ ಅಧಿಕಾರ ಇದೆ ಎಂದು ಈ ಚಿತ್ರ ಬಿಂಬಿಸುತ್ತದೆ.
ಇನ್ನೊಂದು ಚಿತ್ರದಲ್ಲಿ ʼವಾಸ್ತವದಲ್ಲಿ ವಿಶ್ವಸಂಸ್ಥೆʼ ಎಂಬ ಶೀರ್ಷಿಕೆಯಡಿ ಭಾರತೀಯ ಚಿತ್ರರಂಗದ ಸರ್ವಕಾಲಿಕ ಜನಪ್ರಿಯ ಚಿತ್ರ ʼಶೋಲೆʼಯಲ್ಲಿ ಸಂಜೀವ್ ಕುಮಾರ್ ನಟಿಸಿದ್ದ ʼಠಾಕೊರ್ ಬಲದೇವ್ ಸಿಂಗ್ʼ ಪಾತ್ರದ ಚಿತ್ರವನ್ನು ಹಾಕಲಾಗಿದೆ. ವಿಲನ್ ಗಬ್ಬರ್ ಸಿಂಗ್‌ನಿಂದ ಎರಡೂ ಕೈಗಳನ್ನು ಕಳೆದುಕೊಂಡು ಕೈಗಳೆ ಇಲ್ಲದಂತೆ ಅಸಹಾಯಕನಾಗಿ ನಿಲ್ಲುವ ಠಾಕೂರ್ ಪಾತ್ರವನ್ನು ವಿಶ್ವಸಂಸ್ಥೆಗೆ ಹೋಲಿಸಲಾಗಿದೆ. ಅಂದರೆ, ವಿಶ್ವಸಂಸ್ಥೆಯು ಪುಸ್ತಕದ ಮೇಲೆ ಜಗತ್ತನ್ನೇ ನಿಯಂತ್ರಿಸುವಷ್ಟು ಪ್ರಬಲವಾಗಿ ಕಂಡರೂ, ನಿಜವಾದ ಸಂಘರ್ಷಗಳು ನಡೆದಾಗ ಅದು ಕೈಗಳೇ ಇಲ್ಲದ 'ಠಾಕೂರ್' ನಂತೆ ಅಸಹಾಯಕವಾಗಿ ನಿಲ್ಲುತ್ತದೆ ಎಂದು ಇರಾನ್ ವ್ಯಂಗ್ಯವಾಡಿದೆ.
ಟ್ರೋಲ್‌ಗೆ ಕಾರಣವೇನು?
ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ತೀವ್ರ ಮಿಲಿಟರಿ ಸಂಘರ್ಷದ ವೇಳೆ ವಿಶ್ವಸಂಸ್ಥೆಯು ತಟಸ್ಥವಾಗಿದೆ ಹಾಗೂ ಅಮೆರಿಕದ ನಿಯಮ ಉಲ್ಲಂಘನೆಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಇರಾನ್‌ನ ಪ್ರಮುಖ ಆರೋಪವಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವೇಳೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಈ ಮೀಮ್ ಪೋಸ್ಟ್ ಮಾಡಲಾಗಿದೆ.
Atheist Krishna Death: ಫೋಟೋಶಾಪ್ ಮೀಮ್ ಮೂಲಕ ಮೋದಿಯನ್ನೂ ನಗಿಸಿದ್ದ ನಾಸ್ತಿಕ ಕೃಷ್ಣ ಇನ್ನಿಲ್ಲ
ಭಾರತದ ಜನಪ್ರಿಯ ಪಾಪ್ ಸಂಸ್ಕೃತಿ ಮತ್ತು ಬಾಲಿವುಡ್ ಚಿತ್ರದ ದೃಶ್ಯವನ್ನು ಬಳಸಿ ರಾಯಭಾರ ಮಟ್ಟದ ವಿಷಯವನ್ನು ಸರಳವಾಗಿ ವಿವರಿಸಿದ ಇರಾನ್ ರಾಯಭಾರ ಕಚೇರಿಯ 'ಡಿಪ್ಲೊಮಸಿ' ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ʼʼವಿಶ್ವಸಂಸ್ಥೆಯ ಇಂದಿನ ನೈಜ ಸ್ಥಿತಿಯನ್ನು ಹೇಳಲು ಇದಕ್ಕಿಂತ ಸೂಕ್ತವಾದ ಉದಾಹರಣೆ ಇನ್ನೊಂದಿಲ್ಲʼʼ ಎಂದು ಹಲವರು ಕಮೆಂಟ್ ಮಾಡಿದ್ದಾರೆ. "ಪಶ್ಚಿಮ ದೇಶಗಳ ಹೊರತಾಗಿ ಏಷ್ಯಾದ ಈ 'ಶೋಲೆ' ಉದಾಹರಣೆ ಬೇರೆ ದೇಶದವರಿಗೆ ಅರ್ಥವಾಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಭಾರತೀಯರಿಗೆ ಪಕ್ಕಾ ಕನೆಕ್ಟ್ ಆಗಿದೆ," ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಇದೇ ರೀತಿ ಇರಾನ್ ಈ ಹಿಂದೆಯೂ ಕೂಡಾ ಅಕ್ಷಯ್ ಕುಮಾರ್ ಅವರ ನಟನೆಯ ಮೀಮ್‌ಗಳನ್ನು ಬಳಸಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ರೋಲ್ ಮಾಡಿ ಸುದ್ದಿ ಮಾಡಿತ್ತು.