ಜೈಪುರ, ಫೆ. 16: ರಾಜಸ್ಥಾನದ (Rajasthan) ರಾಜಧಾನಿ ಜೈಪುರ (Jaipur)ದಲ್ಲಿ ಅತ್ಯಂತ ವಿಚಿತ್ರ ವಾಹನ ಕಳ್ಳತನದ (vehicle theft) ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಕಳ್ಳರು ಅತೀ ವೇಗವಾಗಿ, ಯಾರಿಗೂ ತಿಳಿಯದಂತೆ ಕಳ್ಳತನ ಮಾಡಿ ಪರಾರಿಯಾಗುತ್ತಾರೆ. ಆದರೆ ಈ ಕಳ್ಳ ಮಾತ್ರ ಬಹಳ ನಿರಾಳವಾಗಿ, ತನ್ನದೇ ಆದ ಶೈಲಿಯಲ್ಲಿ ಕೃತ್ಯ ಎಸಗಿದ್ದಾನೆ. ಈ ಕಳ್ಳತನದ ದೃಶ್ಯ ಸಿಸಿಟಿವಿ (CCTV) ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣ (Social Media)ಗಳಲ್ಲಿ ಭಾರಿ ವೈರಲ್ ಆಗುತ್ತದೆ.
ಏನಿದು ಪ್ರಕರಣ?
ಈ ಘಟನೆಯು ಭಾನುವಾರ (ಫೆಬ್ರವರಿ 15) ಬೆಳಗ್ಗೆ ಸುಮಾರು 11 ಗಂಟೆಗೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ವ್ಯಕ್ತಿಯೊಬ್ಬ ಕೈಯಲ್ಲಿ ಬಿಸಿ ಬಿಸಿಯಾದ ಸಮೋಸ ಹಿಡಿದುಕೊಂಡು ನಡೆದುಕೊಂಡು ಬಂದಿದ್ದಾನೆ. ಅವನ ನಡವಳಿಕೆಯಲ್ಲಿ ಯಾವುದೇ ಭಯವಾಗಲಿ ಅಥವಾ ಗಾಬರಿಯಾಗಲಿ ಇರಲಿಲ್ಲ. ಬದಲಿಗೆ, ತಾನು ಕದಿಯಬೇಕೆಂದು ನಿರ್ಧರಿಸಿದ್ದ ಬೈಕ್‌ನ ಹತ್ತಿರ ನಿಂತು ಸುಮಾರು ಮೂರು ನಿಮಿಷಗಳ ಕಾಲ ಅತ್ಯಂತ ಶಾಂತವಾಗಿ ಸಮೋಸ ಸವಿದಿದ್ದಾನೆ.
ಈ ಕಳ್ಳನ ಆತ್ಮವಿಶ್ವಾಸ ಎಷ್ಟಿತ್ತೆಂದರೆ, ಸಮೋಸ ತಿನ್ನುತ್ತಿರುವಾಗಲೇ ಅಲ್ಲಿ ಸ್ವಚ್ಛತೆ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಜತೆ ಬಹಳ ಸಹಜವಾಗಿ ಮಾತನಾಡಿ ಸಮಾಲೋಚನೆ ನಡೆಸಿದ್ದಾನೆ. ಅದನ್ನು ನೋಡಿದ ಯಾರಿಗೂ ಇವನು ಬೈಕ್ ಕಳ್ಳ ಎಂದು ಕಿಂಚಿತ್ತೂ ಅನುಮಾನ ಬರಲಿಲ್ಲ.
ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!
ಸಮೋಸವನ್ನು ಸಂಪೂರ್ಣವಾಗಿ ಸವಿದ ನಂತರವೇ ಅವನು ತನ್ನ ಅಸಲಿ ಕೆಲಸಕ್ಕೆ ಮುಂದಾಗಿದ್ದಾನೆ. ಸಮೋಸ ತಿಂದು ಮುಗಿಸಿದ ಮೇಲೆ ಒಮ್ಮೆ ಸುತ್ತಮುತ್ತ ಯಾರಾದರೂ ನೋಡುತ್ತಿದ್ದಾರೆಯೇ ಎಂದು ಗಮನಿಸಿದ್ದಾನೆ. ನಂತರ ಆಕಾಶದ ಕಡೆಗೆ ಒಮ್ಮೆ ನೋಡಿ, ದೇವರಿಗೆ ಕೈಮುಗಿಯುವಂತೆ ಅಥವಾ ನೆನೆಯುವಂತೆ ಹಾವಭಾವ ತೋರಿ, ಆರಾಮವಾಗಿ ಬೈಕ್ ಮೇಲೆ ಕುಳಿತು, ಸ್ಟಾರ್ಟ್ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಈ ಘಟನೆಯು ಜೈಪುರದ ಸಾಂಗಾನೇರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬೈಕ್ ಮಾಲೀಕರು ಸಾಮಾನು ಖರೀದಿಸಲು ಅಂಗಡಿಗೆ ಹೋದ ಸಮಯದಲ್ಲಿ ಈ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಬೈಕ್ ಕಾಣೆಯಾದ ನಂತರ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.