ಡೆಹ್ರಾಡೂನ್, ಮೇ 30: ಮನೆಯವರ ವಿರೋಧ ಕಟ್ಟಿಕೊಂಡು ಪರಸ್ಪರ ಪ್ರೀತಿಸುವ ಯುವಕ-ಯುವತಿಯರು ಮನೆಬಿಟ್ಟು ಓಡಿ ಹೋಗುವುದನ್ನು ಸಾಕಷ್ಟು ಕೇಳಿದ್ದೇವೆ. ಬೇರೊಂದು ಊರಿಗೆ ಹೋಗಿ ಬದುಕು ಕಟ್ಟಿಕೊಂಡವರೂ ಇದ್ದಾರೆ. ಆದರೆ ಈ ರೀತಿ ʼಓಡಿ ಹೋಗುವುದುʼ ಮನುಷ್ಯರಿಗೆ ಮಾತ್ರ ಸೀಮಿತವಲ್ಲ ಎಂದರೆ ನಂಬುತ್ತೀರಾ? ಹೌದು, ಪ್ರಾಣಿ ಪ್ರಪಂಚದಲ್ಲೂ ಇಂತಹ ಘಟನೆಗಳು ಸಂಭವಿಸುತ್ತವೆ. ನಿಮಗೆ ನಂಬಲು ಕಷ್ಟ ಅಂತ ಗೊತ್ತು. ಅದಕ್ಕೆ ಇತ್ತೀಚೆಗೆ ನಡೆದ ಅಂತಹ ತಾಜಾ ಘಟನೆಯೊಂದರ ವಿವರ ನಾವಿತ್ತು ನಿಮಗೆ ನೀಡುತ್ತಿದ್ದೇವೆ (Viral News). ಸಾಕಾನೆಗಳು ಕಾಡಾನೆಗಳೊಂದಿಗೆ ಕಾಡಿನೊಳಗೆ ಓಡಿ ಹೋದ ಅಪರೂಪದ ಗಜ ಪ್ರೇಮ ಪ್ರಸಂಗದ ವಿವರ ಇಲ್ಲಿದೆ.
ಉತ್ತರಾಖಂಡದಲ್ಲಿ ಈ ಘಟನೆ ನಡೆದಿದೆ. ಕರ್ನಾಟಕದಿಂದ ತೆರಳಿದ 2 ಸಾಕಾನೆಗಳು ಕಾಡಾನೆ ಹಿಂಡಿನೊಂದಿಗೆ ಪರಾರಿಯಾಗಿದ್ದು, ಸದ್ಯ ಈ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದೆ. ಆನೆಗಳ ಈ ಲವ್ ಸ್ಟೋರಿ ಕೇಳಿದವರೆಲ್ಲ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಆಂಧ್ರಕ್ಕೆ ರಾಜ್ಯದ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ಸಿಎಂ
ಘಟನೆ ವಿವರ
ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ವಿದ್ಯಾಮಾನ ಜರುಗಿದೆ. ಕಾಡು ಗಸ್ತು ತಿರುಗುವ ಉದ್ದೇಶದಿಂದ ಇಲ್ಲಿಗೆ ಕರ್ನಾಟಕದಿಂದ 2 ಹೆಣ್ಣಾನೆಗಳನ್ನು ಕರೆತರಲಾಗಿತ್ತು. ಇದೀಗ ಇವು ಸಮಯ ನೋಡಿಕೊಂಡು ಕಾಡಾನೆಗಳೊಂದಿಗೆ ಜಾಗ ಖಾಲಿ ಮಾಡಿದ್ದು, ಅರಣ್ಯಾಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಅವುಗಳ ಜಾಡು ಹಿಡಿದು ಇದೀಗ ಅಧಿಕಾರಿಗಳು ಕಾಡು ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಈ ʼಕಿಲೇಡಿʼ ಆನೆಗಳ ಸಹವಾಸ ಸಾಕಪ್ಪ ಎಂದು ನಿಟ್ಟುಸಿರು ಬಿಡುವಂತಾಗಿದೆ.
2017ರಲ್ಲಿ ನಮ್ಮ ರಾಜ್ಯದ ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ತುಂಗಾ ಮತ್ತು ಕಪಿಲಾ ಎನ್ನುವ 2 ಕುಮ್ಕಿ ಹೆಣ್ಣಾನೆಗಳನ್ನು ಉತ್ತರಾಖಂಡಕ್ಕೆ ಕರೆದೊಯ್ಯಲಾಯಿತು. ಕಾಡಾನೆಗಳನ್ನು ಪಳಗಿಸುವ, ಕಾಡಾನೆ ದಾಳಿ ನಿಯಂತ್ರಿಸುವ ಮತ್ತು ಅರಣ್ಯದಂಚಿನ ಗ್ರಾಮಗಳಲ್ಲಿ ಗಸ್ತು ತಿರುಗುವ ಉದ್ದೇಶಕ್ಕೆ ಈ ಆನೆಗಳನ್ನು ಕಳುಹಿಸಿ ಕೊಡಲಾಯಿತು. ಅದರಂತೆ ಈ ಆನೆಗಳು ಇದುವರೆಗೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಕಾಡಾನೆಗಳೊಂದಿಗೆ ಸಖ್ಯ ಬೆಳೆಸಿದ ಅವು ಇದೀಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿವೆ.
ʼʼನಾಪತ್ತೆಯಾದ ಆನೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಕಾಡಾನೆ ಹಿಂಡಿನೊಂದಿಗೆ ಅವು ತೆರಳಿರುವ ಶಂಕೆ ವ್ಯಕ್ತವಾಗಿದೆ. ಒಂದೆರಡು ದಿನಗಳಲ್ಲಿ ಅವಾಗಿ ಮರಳುವ ಸಾಧ್ಯತೆಯೂ ಇದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ, ತಮಾಷೆಯ ಪ್ರತಿಕ್ರಿಯೆಗೆ ಕಾರಣವಾಗಿದೆ.
ದುಬಾರೆ ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ; ಪ್ರವಾಸಿಗರಿಗೆ ಮಾರ್ಗಸೂಚಿ ಪ್ರಕಟ
ಕುಮ್ಕಿ ಆನೆಗಳು ಎಂದರೇನು?
ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಹಾಗೂ ಕಾಡಾನೆಗಳನ್ನು ನಿಯಂತ್ರಿಸುವುದರ ಜತೆಗೆ ಅವುಗಳನ್ನು ಸೆರೆಹಿಡಿಯಲು ಕುಮ್ಕಿ ಆನೆಗಳನ್ನು ಬಳಸಲಾಗುತ್ತದೆ. ಕುಮ್ಕಿ ಪದದ ಮೂಲ ತಮಿಳು. ಇದರ ಅರ್ಥ ಹಿಡಿಯುವುದು ಅಥವಾ ಬಲೆಗೆ ಬೀಳಿಸುವುದು. ಕುಮ್ಕಿ ಆನೆಗಳನ್ನು ಹೆಚ್ಚಾಗಿ ಹಲವು ಅರಣ್ಯ ನಿರ್ವಹಣಾ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಕುಮ್ಕಿ ಆನೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಪಡೆದ ಆನೆಗಳು ಮಾನವ-ಆನೆ ಸಂಘರ್ಷವನ್ನು ತಪ್ಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಕಾಡಾನೆಗಳು ನಾಡಿಗೆ ದಾಳಿ ಇಟ್ಟಾಗ ಅವನ್ನು ಹಿಮ್ಮೆಟ್ಟಿಸಲು ಕುಮ್ಕಿ ಆನೆಗಳನ್ನು ಬಳಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಕುಮ್ಕಿ ಆನೆಗಳು ಹೆಣ್ಣಾನೆಗಳಾಗಿರುತ್ತವೆ. ಈ ಕುಮ್ಕಿ ಆನೆಗಳು ಶಿಬಿರದಲ್ಲಿ ಇರುವುದರಿಂದ ಗಂಡು ಆನೆಗಳು ಸಮಾಧಾನದಿಂದ ಇರುತ್ತವೆ ಎನ್ನುತ್ತಾರೆ ತಜ್ಞರು.
ಇನ್ನಷ್ಟು ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.