Shilpa Shetty: ರಂಭಾಪುರಿ ಮಠಕ್ಕೆ ಆನೆ ಕೊಡುಗೆ ನೀಡಿದ ಶಿಲ್ಪಾ ಶೆಟ್ಟಿ, ಎಂಥಾ ಆನೆ ನೋಡಿ!
Shilpa Shetty: ರಂಭಾಪುರಿ ಮಠಕ್ಕೆ ಆನೆ ಕೊಡುಗೆ ನೀಡಿದ ಶಿಲ್ಪಾ ಶೆಟ್ಟಿ, ಎಂಥಾ ಆನೆ ನೋಡಿ!
ಹರೀಶ್ ಕೇರ
December 16, 2024
ಚಿಕ್ಕಮಗಳೂರು: ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ರೇಣುಕಾಚಾರ್ಯ ದೇವಾಲಯಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಭಾನುವಾರ ಆನೆ (elephant) ಗಿಫ್ಟ್ ನೀಡಿದ್ದಾರೆ. ಆದರೆ ಇದು ಜೀವಂತ ಆನೆಯಲ್ಲ, ಅದೇ ರೀತಿ ಇರುವ ರೋಬೋಟಿಕ್ ಆನೆ.
ಇದು ನೋಡುವುದಕ್ಕೆ ಜೀವಂತ ಆನೆಯಂತೆಯೇ ಭಾಸವಾಗುತ್ತದೆ. ವೀರಭದ್ರ ಎಂದು ಕರೆಯಲಾಗುವ ಈ ಆನೆಯನ್ನು ಅನಾವರಣಗೊಳಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ತಂತ್ರಜ್ಞಾನವು ದೇವಾಲಯಗಳಿಗೆ ಆನೆಗಳನ್ನು ಸಂಕೋಲೆಯಲ್ಲಿ ಇರಿಸದಂತೆ ಮಾಡಿದೆ ಎಂದರು.
ರಂಭಾಪುರಿ ಮಠದ ನಿರ್ಧಾರವನ್ನು ಶ್ಲಾಘಿಸಿದ ಸಚಿವರು, ಆನೆಯನ್ನು ನೀಡುವಂತೆ ಅನೇಕ ದೇವಾಲಯಗಳು ಮತ್ತು ಮಠಗಳು ಕೇಳಿವೆ. ಆದರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ, ಯಾವುದೇ ದೇವಾಲಯಕ್ಕೂ ಆನೆಗಳನ್ನು ಕೊಡುಗೆಯಾಗಿ ನೀಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ರೋಬೋಟಿಕ್ ನಂತಹ ತಂತ್ರಜ್ಞಾನ ಬಂದಿದ್ದು, ಶಿಲ್ಪಾಶೆಟ್ಟಿ ಅವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಇಂಧನ ಸಚಿವ ಕೆಜೆ ಜಾರ್ಜ್, ಶಾಸಕ ಟಿ.ಡಿ. ರಾಜೇಗೌಡ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮತ್ತಷ್ಟು ದೇವಾಲಯ ಹಾಗೂ ಮಠಗಳಲ್ಲಿ ರೋಬೋಟಿಕ್ ಆನೆಗಳನ್ನು ಇಡಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ರಂಭಾಪುರಿ ಸ್ವಾಮೀಜಿ ಹೇಳಿದರು.
ಆಗಾಗ್ಗೆ ರಂಭಾಪುರಿ ಮಠಕ್ಕೆ ಭೇಟಿ ನೀಡುವ ಶಿಲ್ಪಾಶೆಟ್ಟಿ ಜೀವಂತ ಆನೆ ನೀಡುವುದಾಗಿ ಸಂಕಲ್ಪ ಮಾಡಿಕೊಂಡಿದ್ದರಂತೆ. ಆದರೆ, ಕಾನೂನಿನಲ್ಲಿ ಅದಕ್ಕೆ ತೊಡಕಿರುವ ಕಾರಣ ಇದೀಗ ರೋಬೋಟಿಕ್ ಆನೆ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ.