ದೆಹಲಿ, ಮೇ 18: ಸಾರ್ವಜನಿಕ ಸ್ಥಳಗಳಲ್ಲಿ ಅಶಿಸ್ತಿನಿಂದ ವರ್ತಿಸುವ ಅನೇಕರ ದೃಶ್ಯ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲ ವೈರಲ್ (Viral News) ಆಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಸಾರ್ವಜನಿಕ ಸಾರಿಗೆ ರೈಲಿನಲ್ಲಿ ಉಂಟಾದ ಘಟನೆಯೊಂದು ಇದೀಗ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕನೊಬ್ಬ ಚಕ್ಕಳಮಕ್ಕಳ ಹಾಕಿ ಕುಳಿತಿದ್ದಾನೆ. ಇದರಿಂದ ಕಿರಿಕಿರಿಗೊಳಗಾದ ಸಹಪ್ರಯಾಣಿಕರೊಬ್ಬರು ಈ ಬಗ್ಗೆ ಕಿಡಿಕಾರಿ ಫೋಟೊ ಸಮೇತ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತನ್ನ ಜಾಗವನ್ನು ಅತಿಕ್ರಮಿಸಿಕೊಂಡು ಚಕ್ಕಳಮಕ್ಕಳ ಹಾಕಿ ಕುಳಿತಿರುವ ಸಹಪ್ರಯಾಣಿಕ ಬಗ್ಗೆ ಆಕ್ರೋಶ ಹೊರಹಾಕಿದ್ದು, ಭಾರತದಲ್ಲಿ ಕಂಡು ಬರುತ್ತಿರುವ ನಾಗರಿಕ ಪ್ರಜ್ಞೆ ಹಾಗೂ ಶಿಸ್ತಿನ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಶತಾಬ್ದಿ ರೈಲಿನಲ್ಲಿ ತಮಗಾದ ಅಹಿತಕರ ಅನುಭವದ ಬಗ್ಗೆ ಗುರುಗ್ರಾಮದ ನಿವಾಸಿಯೊಬ್ಬರು ಪೋಸ್ಟ್ ಶೇರ್ ಮಾಡಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ನಾಗರಿಕ ಪ್ರಜ್ಞೆ ಇಲ್ಲದಂತೆ ವರ್ತಿಸಿ ಪ್ರಯಾಣಿಕರಿಗೆ ತೊಂದರೆ ನೀಡುವ ಘಟನೆ ಇತ್ತೀಚೆಗೆ ಹೆಚ್ಚಾಗಿದೆ. ಇದೀಗ ಸಹ ಪ್ರಯಾಣಿಕನ ವರ್ತನೆ ಬಗ್ಗೆ ನೆಟ್ಟಿಗರೂ ಕಿಡಿಕಾರಿದ್ದಾರೆ. ʼʼಇತರರ ಬಗ್ಗೆ ಯೋಚಿಸದೇ ತಾನು ಮಾತರ ಆರಾಮವಾಗಿ ಪ್ರಯಾಣ ಮಾಡಿದರೆ ಸಾಕು ಎನ್ನುವ ಮನೋಭಾವ ಇದುʼʼ ಎಂದು ಪೋಸ್ಟ್ ಶೇರ್ ಮಾಡಿರುವ ಪ್ರಯಾಣಿಕ ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
ಗುರ್ಜೋತ್ ಅಹ್ಲುವಾಲಿಯಾ ಶತಾಬ್ದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ರೀತಿ ಕಿರಿಕಿರಿ ಅನುಭವಿಸಿದ್ದಾರೆ. ಅವರ ಪಕ್ಕದ ಸೀಟಿನಲ್ಲಿದ್ದ ವ್ಯಕ್ತಿಯೊಬ್ಬ ಸೀಟಿನ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತಿದ್ದ. ʼʼಆತ ಸುಮಾರು 30 ನಿಮಿಷಗಳವರೆಗೆ ಅಡ್ಡಗಾಲಿನಲ್ಲಿ ಕುಳಿತು ನನ್ನ ವೈಯಕ್ತಿಕ ಜಾಗವನ್ನು ಅತಿಕ್ರಮಿಸಿದ್ದಾನೆʼʼ ಎಂದು ಗುರ್ಜೋತ್ ಆರೋಪಿಸಿದ್ದಾರೆ. ʼʼಭಾರತದಲ್ಲಿ ವಿದ್ಯಾವಂತ ಅನಕ್ಷರಸ್ಥರ ಈ ಮೂರ್ಖ ನಾಗರಿಕ ಪ್ರಜ್ಞೆಯನ್ನು ನೀವು ಹೇಗೆ ಪರಿಹರಿಸುತ್ತೀರಿ?" ಎಂದು ಅಹ್ಲುವಾಲಿಯಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಫುಲ್ ಮಸ್ತಿ
ʼʼಆತನ ಕೊಳಕು ಶೂ ಒಮ್ಮೆ ನನ್ನನ್ನು ತಗುಲಿದ್ದರೆ ನಾನು ತಾಳ್ಮೆ ಕಳೆದುಕೊಳ್ಳುತ್ತಿದೆ. ಆದರೆ, ರೈಲಿನಲ್ಲಿ ಚಹಾ ಮತ್ತು ಆಹಾರದ ವಿತರಣೆ ಬಂದಾಗ ಆ ಪ್ರಯಾಣಿಕ ತನ್ನ ಕುಳಿತುಕೊಳ್ಳುವ ಭಂಗಿಯನ್ನು ಬದಲಾಯಿಸಿದ್ದʼʼ ಎಂದಿದ್ದಾರೆ. ಈ ವೈರಲ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಹಲವರು ಸಾರ್ವಜನಿಕ ಸ್ಥಳದಲ್ಲಿ ನಿಯಮವನ್ನು ನಿರ್ಲಕ್ಷ್ಯ ಮಾಡುವುದು ತಪ್ಪು ಎಂದಿದ್ದಾರೆ. ಇನ್ನು ಕೆಲವರು ಸಮಸ್ಯೆಯನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಕ್ಕಿಂತ ನಯವಾಗಿ ವೈಯಕ್ತಿಕವಾಗಿ ಪರಿಹರಿಸುವುದು ಹೆಚ್ಚು ಸೂಕ್ತವೆಂದು ವಾದಿಸಿದ್ದಾರೆ.