ನವದೆಹಲಿ: ದೆಹಲಿ ಹೈಕೋರ್ಟ್ (Delhi High Court) ವರ್ಚುವಲ್ ವಿಚಾರಣೆ ವೇಳೆ ವಕೀಲರೊಬ್ಬರು ಮಹಿಳೆಯೊಬ್ಬರಿಗೆ ಚುಂಬಿಸಿರುವ ವಿಡಿಯೋವೊಂದು ಸಮಾಜಿಕ ಜಾಲತಾಣ(social media)ಗಳಲ್ಲಿ ಭಾರಿ ವೈರಲ್ ಆಗುತ್ತದೆ. ಆನ್‌ಲೈನ್ ವಿಚಾರಣೆ ಆರಂಭಕ್ಕೂ ಮುನ್ನ ವಕೀಲರು ಮಹಿಳೆಯೊಂದಿಗೆ ಸರಸದಲ್ಲಿ ತೊಡಗಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ಮಂಗಳವಾರ ನಡೆದಿದೆ ಎನ್ನಲಾಗಿದ್ದು, ಈ ವರ್ತನೆ ವೇಳೆ ನ್ಯಾಯಾಲಯದ ವರ್ಚುವಲ್ ವಿಚಾರಣೆ(virtual proceedings) ಇನ್ನೂ ಆರಂಭವಾಗಿರಲಿಲ್ಲ ಎಂದು ಹೇಳಲಾಗಿದೆ. ಜನರು ಹಾಗೂ ಪ್ರತಿವಾದಿಗಳು ನ್ಯಾಯಾಧೀಶರ ಆಗಮನಕ್ಕಾಗಿ ಕಾಯುತ್ತಿದ್ದ ವೇಳೆ ಈ ದೃಶ್ಯ ಕಾಣಿಸಿದೆ. ತಮ್ಮ ಲ್ಯಾಪ್‌ಟಾಪ್ ಕ್ಯಾಮರಾ ಆನ್ ಇರುವುದನ್ನು ಅರಿಯದೇ ವಕೀಲರು ಮಹಿಳೆಯ ಕೈ ಹಿಡಿದು ಎಳೆದು ಚುಂಬಿಸಿದ್ದಾರೆ ಎನ್ನಲಾಗಿದೆ.
ವಿಡಿಯೊದಲ್ಲೇನಿದೆ?
ರೂಮ್‌ನಲ್ಲಿ ವಕೀಲರ ಡ್ರೆಸ್‌ನಲ್ಲಿದ್ದ ವ್ಯಕ್ತಿಯು ವರ್ಚುವಲ್ ವಿಚಾರಣೆಗಾಗಿ ಕಾಯುತ್ತಾ ಕ್ಯಾಮರಾ ಆನ್ ಮಾಡಿಕೊಂಡು ಚೇರ್‌ಮೇಲೆ ಕುಳಿತಿದ್ದರು. ಅವರ ಚೇರ್‌ನ ಸ್ವಲ್ಪ ದೂರದಲ್ಲೇ ಸೀರೆಯುಟ್ಟ ಮಹಿಳೆಯೊಬ್ಬಳು ನಿಂತಿದ್ದಳು. ವಕೀಲರು ಆಕೆಯ ಕೈ ಹಿಡಿದು ತನ್ನತ್ತ ಎಳೆದಿದ್ದಾರೆ. ಆಕೆ ಹಿಂದೆ ಸರಿಯಲು ಯತ್ನಿಸಿದರೂ ಬಿಡದೇ ಮತ್ತೆ ಎಳೆದು ಚುಂಬಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಸುದ್ದಿಯನ್ನು ಓದಿ: Viral News: ಹೆಂಡತಿಗೆ ಮುತ್ತಿಡಲು ಅಡ್ಡವಾದ ಮೂಗು..! ಅದಕ್ಕೆ ಆ ವ್ಯಕ್ತಿ ಮಾಡಿದ್ದೇನು ಗೊತ್ತಾ..?
ನೆಟ್ಟಿಗರ ಆಕ್ರೋಶ!
ಕೆಲವೆ ಸಮಯದಲ್ಲಿ ಈ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ದೆಹಲಿ ಹೈಕೋರ್ಟ್‌ನ ವಿಚಾರಣೆಗಳು ಈಗ ಮನರಂಜನೆಯ ವೇದಿಕೆಗಳಾಗಿವೆ. ಗಂಭೀರ ನಿರ್ಧಾರಗಳಿಂದ ಹಿಡಿದು ಇಂತಹ ಕಾಮಿಡಿ ಘಟನೆಗಳವರೆಗೆ, ಎಲ್ಲ ರೀತಿಯ ಶೋ ಇವೆ," ಎಂದು ಒಬ್ಬ ಕಾಮೆಂಟ್ ಮಾಡಿದರೆ, ಮತ್ತೊಬ್ಬ "ಇಂತಹ ನಾಚಿಕೆಗೇಡಿನ ಕೃತ್ಯಗಳಿಂದ ನ್ಯಾಯಾಲಯದ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ," ಎಂದಿದ್ದಾರೆ. ಮತ್ತೊಬ್ಬರು, "ಇಂತಹ ವಕೀಲರನ್ನು ಬಂಧಿಸಬೇಕು, ಇಲ್ಲವಾದರೆ ವರ್ಚುವಲ್ ವಿಚಾರಣೆಗಳ ಸುರಕ್ಷತೆ ಏನಾಗುತ್ತದೆ?" ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಈ ವೀಡಿಯೊ ಪೋಸ್ಟ್ ಮಾಡಿದ ಎರಡೇ ಗಂಟೆಗಳಲ್ಲಿ ಅದು 89.7K ಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಕಾಣಿಸಿದ ವಕೀಲರು ಹಾಗೂ ಆ ಮಹಿಳೆ ಯಾರು ಎಂಬುವುದು ಈವರೆಗೆ ತಿಳಿದುಬಂದಿಲ್ಲ. ಅಲ್ಲದೇ ಈ ಘಟನೆಯ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಗಳೂ ಹೊರಬಂದಿಲ್ಲ. ಆದರೆ, ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ವಕೀಲರ ಸಂಘ (ಬಾರ್ ಕೌನ್ಸಿಲ್) ಈ ಬಗ್ಗೆ ತನಿಖೆ ನಡೆಸಬಹುದು ಎಂದು ಹೇಳಲಾಗುತ್ತಿದೆ.