ಪಟನಾ: ಛತ್ ಪೂಜೆಯು ಬಿಹಾರದ (Bihar) ಪ್ರಮುಖ ಹಬ್ಬಗಳಲ್ಲಿ ಒಂದು. ಭಕ್ತರು ಈ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಛತ್ ಪ್ರಸಾದ (Chhath Prasad) ಸ್ವೀಕರಿಸಲು ರೈಲು ಚಾಲಕನೊಬ್ಬ ತನ್ನ ಪ್ಯಾಸೆಂಜರ್ ರೈಲನ್ನು ನಿಲ್ಲಿಸಿರುವ ಹೃದಯಸ್ಪರ್ಶಿ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ರೈಲು ಹಳಿ ಮೇಲೆ ನಿಂತಿರುವುದನ್ನು ನೋಡಬಹುದು. ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಭಕ್ತರು ಸೇರಿದ್ದರು. ಒಬ್ಬ ವ್ಯಕ್ತಿ ಕೈಯಲ್ಲಿ ಪ್ರಸಾದ ತಟ್ಟೆಯೊಂದಿಗೆ ರೈಲು ಎಂಜಿನ್ ಕಡೆಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಲೋಕೋ ಪೈಲಟ್ ತನ್ನ ಕ್ಯಾಬಿನ್‍ನಿಂದ ಹೊರಗೆ ಬಾಗಿ, ಗೌರವಯುತವಾಗಿ ಪ್ರಸಾದವನ್ನು ಸ್ವೀಕರಿಸಿ, ಭಕ್ತಿಯಿಂದ ತಲೆ ಬಾಗಿಸಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೊ ಲಕ್ಷಾಂತರ ಜನರನ್ನು ಆಕರ್ಷಿಸಿದೆ.
ಸಾಮಾಜಿಕ ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಬಿಹಾರದಲ್ಲಿ ನಡೆದಿದೆ. ಆದರೂ ನಿಖರವಾದ ಸ್ಥಳ ಮತ್ತು ರೈಲು ವಿವರದ ಬಗ್ಗೆ ದೃಢೀಕರಿಸಲ್ಪಟ್ಟಿಲ್ಲ. ಈ ವಿಡಿಯೊವನ್ನು ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದು ಭಾರತದಲ್ಲಿ ಮಾತ್ರ ವೀಕ್ಷಿಸಲು ಸಾಧ್ಯ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇದು ನಿಜವಾದ ಸನಾತನ ಧರ್ಮ ಅಂದ್ರೆ. ಯಾವುದೇ ದುರುದ್ದೇಶಪೂರಿತ ಕೃತ್ಯಗಳಿಲ್ಲ, ಘೋಷಣೆಗಳಿಲ್ಲ, ಡಿಜೆ ಶಬ್ಧವಿಲ್ಲ ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ವಿಡಿಯೊ ವೀಕ್ಷಿಸಿ:
ಸೂರ್ಯ ದೇವರು ಮತ್ತು ಛಠಿ ಮೈಯಾಳ ಆರಾಧನೆಗೆ ಮೀಸಲಾಗಿರುವ ಛತ್ ಪೂಜೆಯನ್ನು ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಹಬ್ಬದ ವೇಳೆ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಭಕ್ತರು ನದಿಗಳು ಮತ್ತು ಕೊಳಗಳಲ್ಲಿ ನಿಂತು ಪ್ರಾರ್ಥನೆ ಸಲ್ಲಿಸುತ್ತಾರೆ.
ರೈಲು ನಿಲುಗಡೆಗೆ ಅಧಿಕೃತವಾಗಿ ಅನುಮತಿ ನೀಡಲಾಗಿದೆಯೇ ಎಂದು ಕೆಲವರು ಪ್ರಶ್ನಿಸಿದರೂ, ಬಹುತೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸಿಗ್ನಲ್‌ನಿಂದಾಗಿ ರೈಲು ಈಗಾಗಲೇ ನಿಂತಿದೆ. ಇದು ಕರ್ತವ್ಯವನ್ನು ಮೀರಿದ ಭಕ್ತಿಯ ಸೂಚಕ ಎಂದು ನೆಟ್ಟಿಗರು ಹೇಳಿದ್ದಾರೆ.
ಅಂದಹಾಗೆ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಆಚರಿಸುವ ಛತ್ ಪೂಜೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಸುಮಾರು ನಾಲ್ಕು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹೀಗಾಗಿ ಜನದಟ್ಟಣೆಯನ್ನು ನಿಭಾಯಿಸಲು ನಿಯಮಿತ ರೈಲು ಸೇವೆಗಳನ್ನು ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಪ್ರಯಾಣಕ್ಕಾಗಿ ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿತ್ತು.