ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸ್ನಾನ ಮಾಡಲು ಹೋದಾಗ ಏಕಾಏಕಿ ಉಕ್ಕಿ ಹರಿದ ನದಿ; ಪ್ರಾಣ ರಕ್ಷಣೆಗಾಗಿ ವಿದ್ಯುತ್ ಕಂಬವೇರಿದ ವ್ಯಕ್ತಿ- ವಿಡಿಯೊ ವೈರಲ್

Man Climbs Electric Pole: ವ್ಯಕ್ತಿಯೊಬ್ಬ ನದಿಗೆ ಹೋಗಿದ್ದ ವೇಳೆ ಇದ್ದಕ್ಕಿದ್ದಂತೆ ಟಾನ್ಸ್ ನದಿ ತುಂಬಿ ಹರಿದಿದೆ. ಇದರಿಂದ ಭೀತಿಗೊಂಡ ಆತ ಸ್ಥಳದಲ್ಲೇ ಇದ್ದ ವಿದ್ಯುತ್ ಕಂಬವನ್ನೇರಿದ್ದಾನೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್) ಆತನನ್ನು ರಕ್ಷಿಸಿದ್ದು, ಇದರ ವಿಡಿಯೊ ವೈರಲ್ ಆಗಿದೆ.

ಪ್ರಾಣ ರಕ್ಷಣೆಗಾಗಿ ವಿದ್ಯುತ್ ಕಂಬವೇರಿದ ವ್ಯಕ್ತಿ!

-

Priyanka P Priyanka P Sep 19, 2025 1:20 PM

ಡೆಹ್ರಾಡೂನ್: ವ್ಯಕ್ತಿಯೊಬ್ಬ ನದಿಯಲ್ಲಿ ಸ್ನಾನ ಮಾಡಲು ಹೋದಾಗ ಇದ್ದಕ್ಕಿದ್ದಂತೆ ನೀರು ಉಕ್ಕಿಹರಿದಿದೆ. ತನ್ನ ಜೀವವನ್ನು ಉಳಿಸಿಕೊಳ್ಳಲು ಆತ ವಿದ್ಯುತ್ ಕಂಬವನ್ನು ಏರಿ, ಸಹಾಯಕ್ಕಾಗಿ ಅಂಗಲಾಚಿದ ಘಟನೆ ಉತ್ತರಾಖಂಡ (Uttarakhand) ದ ಪ್ರೇಮನಗರದ ಠಾಕೂರ್ಪುರದಲ್ಲಿ ನಡೆದಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್) ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಯಿತು ಎಂದು ತಿಳಿದು ಬಂದಿದೆ. ಇದರ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ಗುರುವಾರ ಉತ್ತರಾಖಂಡದ ಚಮೋಲಿ ಜಿಲ್ಲೆಯ ನಾಲ್ಕು ಗ್ರಾಮಗಳಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹದಲ್ಲಿ 40 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಐವರನ್ನು ರಕ್ಷಿಸಲಾಗಿದ್ದು, ಆರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕುಂಟಾರಿ ಲಗಾಫಾಲಿಯಲ್ಲಿ ನಾಲ್ವರು ಮತ್ತು ಧುರ್ಮಾ ಗ್ರಾಮದಲ್ಲಿ ಒಬ್ಬರನ್ನು ರಕ್ಷಿಸಲಾಗಿದೆ ಎಂದು ಡೆಹ್ರಾಡೂನ್‌ನ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ತಿಳಿಸಿದೆ.

ಘಟನೆಯಲ್ಲಿ ಒಟ್ಟು 12 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಗಂಭೀರ ಗಾಯಗೊಂಡವರನ್ನು ರಿಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ವಿಮಾನದ ಮೂಲಕ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ವಿಡಿಯೊವನ್ನು ಹವಾಮಾನ ಮತ್ತು ಪ್ರವಾಹ ಸಂಶೋಧಕ ಮತ್ತು ತಂತ್ರಜ್ಞಾನ ವೃತ್ತಿಪರ ನವೀನ್ ರೆಡ್ಡಿ (@navin_ankampali) ಅವರು X ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊ ವೀಕ್ಷಿಸಿ:



ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ವಿದ್ಯುತ್ ಕಂಬ ಏರಿದ ವ್ಯಕ್ತಿಯನ್ನು ಕಪಿಲ್ ಎಂದು ಗುರುತಿಸಿಲಾಗಿದೆ. ಏಕಾಏಕಿ ಟಾನ್ಸ್ ನದಿ ಉಕ್ಕಿ ಹರಿದ ಹಿನ್ನೆಲೆಯಲ್ಲಿ ಆತ ಏನು ಮಾಡುವುದು ಎಂದು ತೋಚದೆ ತನ್ನ ಪ್ರಾಣ ರಕ್ಷಣೆಗಾಗಿ ವಿದ್ಯುತ್ ಕಂಬವನ್ನು ಏರಿದ್ದಾನೆ. ಯಮುನೆಯ ಅತಿದೊಡ್ಡ ಉಪನದಿಯಾದ ಟಾನ್ಸ್ ನದಿಯು ಗರ್ವಾಲ್ ಹಿಮಾಲಯದ ಬಂದರ್ಪಂಚ್ ಹಿಮನದಿಯಿಂದ ಹುಟ್ಟಿ ಡೆಹ್ರಾಡೂನ್ ಜಿಲ್ಲೆಯ ಕಲ್ಸಿ ಬಳಿ ಯಮುನೆಯನ್ನು ಸೇರುತ್ತದೆ.

ಇನ್ನು ಗುರುವಾರ ಬೆಳಗ್ಗೆ ಚಮೋಲಿಯ ನಾಲ್ಕು ಗ್ರಾಮಗಳು ಭೂಕುಸಿತ ಮತ್ತು ಪ್ರವಾಹಕ್ಕೆ ಸಿಲುಕಿವೆ. ಕುಂಟಾರಿ ಲಗಾಫಾಲಿ, ಕುಂಟಾರಿ ಲಗಾಸರ್ಪಾನಿ, ಸೆರಾ ಮತ್ತು ಧುರ್ಮಾ ಗ್ರಾಮಗಳು ಪ್ರವಾಹದಿಂದ ಹಾನಿಗೊಳಗಾಗಿವೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದರು. ಈ ಗ್ರಾಮಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಸುಮಾರು 45 ಮನೆಗಳು ಮತ್ತು 15 ದನದ ಕೊಟ್ಟಿಗೆಗಳು ಹಾನಿಗೊಳಗಾಗಿದ್ದು, 200ಕ್ಕೂ ಹೆಚ್ಚು ಜನರು ತೊಂದರೆ ಅನುಭವಿಸಿದ್ದಾರೆ.

ಡೆಹ್ರಾಡೂನ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಮೇಘಸ್ಫೋಟದಿಂದಾಗಿ ಎರಡು ದಿನಗಳ ನಂತರ ಭೂಕುಸಿತ ಸಂಭವಿಸಿದೆ. ಹಲವಾರು ರಸ್ತೆಗಳು ಕುಸಿದುಬಿದ್ದಿದ್ದು, ಸೇತುವೆಗಳು ಕೊಚ್ಚಿ ಹೋಗಿವೆ. ಮನೆಗಳಿಗೂ ಹಾನಿಯಾಗಿದ್ದು 21 ಜನರು ಮೃತಪಟ್ಟು, 17 ಜನರು ಕಾಣೆಯಾಗಿದ್ದಾರೆ.

ಇದನ್ನೂ ಓದಿ: Viral Video: ಅಬ್ಬಾ..ಇದೆಂಥಾ ಕ್ರೇಜ್‌? ಐಫೋನ್ 17 ಖರೀದಿ ವೇಳೆ ಗ್ರಾಹಕರ ಬಿಗ್‌ ಫೈಟ್‌! ವಿಡಿಯೊ ವೈರಲ್