Viral News: ನೋರಾ ಫತೇಹಿಯಂತಹ ಬಾಡಿ ಶೇಪ್ ಬೇಕು; ಹೆಂಡತಿಗೆ ಟಾರ್ಚರ್ ಕೊಡ್ತಿದ್ದ ಸೈಕೋ ಪತಿ ವಿರುದ್ಧ ದೂರು
Man, obsessed with Nora Fatehi: ಇಲ್ಲೊಬ್ಬ ಪತಿಗೆ ತನ್ನ ಹೆಂಡತಿ ಬಾಲಿವುಡ್ ನಟಿ ನೋರಾ ಫತೇಹಿಯಂತೆ ಕಾಣಬೇಕಂತೆ. ಅದಕ್ಕಾಗಿ ಪ್ರತಿದಿನ ಪತ್ನಿಗೆ ಮೂರು ಗಂಟೆಗಳ ಕಾಲ ಕಠಿಣ ವ್ಯಾಯಾಮ ಮಾಡಿಸುತ್ತಾನಂತೆ. ಒಂದು ವೇಳೆ ವ್ಯಾಯಾಮ ಮಾಡದಿದ್ದರೆ ಆಕೆಗೆ ಉಪವಾಸವೇ ಗತಿ! ಪತಿಯಿದ್ದು ಈ ಕಥೆಯಾದರೆ ಅತ್ತೆ-ಮಾವನದ್ದು ವರದಕ್ಷಿಣೆ ಕಾಟ. ಇದೀಗ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ.


ಲಖನೌ: ಬಾಲಿವುಡ್ ನಟಿ ನೋರಾ ಫತೇಹಿಯಂತಹ (Nora Fatehi) ದೇಹವನ್ನು ಹೊಂದಲು ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ತನ್ನ ಪತಿ ವಿರುದ್ಧ ಆರೋಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ (Uttar Pradesh) ಈ ವಿಚಿತ್ರ ಘಟನೆ ನಡೆದಿದ್ದು, ದಿನನಿತ್ಯ ತನ್ನ ಗಂಡ ದೇಹವನ್ನು ಫಿಟ್ ಆಗಿರಿಸುವಂತೆ ತನಗೆ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ಹೇಳಿದ್ದಾರೆ. ಈ ಸಂಬಂಧ ಗಜೈಬಾದ್ ಪೊಲೀಸರಿಗೆ (Viral News) ಮಹಿಳೆ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಮಹಿಳೆ ನೀಡಿರುವ ದೂರಿನಲ್ಲಿ, ವೃತ್ತಿಯಲ್ಲಿ ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕನಾಗಿರುವ ಶಿವಂ ಉಜ್ವಲ್ ಹೆಂಡತಿಯನ್ನು ಪೀಡಿಸುತ್ತಿರುವ ಪತಿ ಮಹಾಶಯ. ಈತನಿಗೆ ತನ್ನ ಪತ್ನಿ ನೋರಾ ಫತೇಹಿಯಂತೆ ಕಾಣಬೇಕಂತೆ. ಇದಕ್ಕಾಗಿ, ಆತ ಪ್ರತಿದಿನ ಮೂರು ಗಂಟೆಗಳ ಕಾಲ ವ್ಯಾಯಾಮ ಮಾಡುವಂತೆ ಒತ್ತಡ ಹೇರಿದ್ದಾನೆ. ದಿನದಲ್ಲಿ 3 ಗಂಟೆಗಳ ಕಾಲ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ಅಂದು ಆಕೆಗೆ ಉಪವಾಸವೇ ಗತಿ. ತನ್ನ ಗಂಡನ ಚಿತ್ರಹಿಂಸೆ ತಾಳಲಾರದೆ ಇದೀಗ ಮಹಿಳೆ ಪೊಲೀಸ್ ಮೆಟ್ಟಿಲೇರಿದ್ದಾಳೆ.
ಮಹಿಳೆ ದಾಖಲಿಸಿರುವ ಪ್ರಕರಣದ ಪ್ರಕಾರ, ಅವರು ಮಾರ್ಚ್ 6, 2025ರಂದು ಮೀರತ್‌ನ ಉಜ್ವಲ್ ಅವರನ್ನು ವಿವಾಹವಾದರು. ಅವರು ಸಾಮಾನ್ಯ ಎತ್ತರ ಮತ್ತು ಬಿಳಿ ಮೈಬಣ್ಣ ಹೊಂದಿದ್ದರೂ, ಗಂಡ ಹಾಗೂ ಅತ್ತೆ-ಮಾವ ದೇಹ ಫಿಟ್ ಆಗಿಲ್ಲವೆಂದು ನಿಂದಿಸುತ್ತಾರಂತೆ. ಮದುವೆಯಾದಾಗಿನಿಂದ, ತನ್ನ ಪತಿ ತನ್ನನ್ನು ಮದುವೆಯಾಗಿರುವುದರಿಂದ ತನ್ನ ಜೀವನ ಹಾಳಾಗಿದೆ ಎಂದು ಹೀಯಾಳಿಸುತ್ತಿದ್ದ ಮತ್ತು ನೋರಾ ಫತೇಹಿಯಂತಹ ಸುಂದರ ಹುಡುಗಿ ತನಗೆ ಸಿಗಬಹುದಿತ್ತು ಎಂದು ಆತ ಹೇಳುತ್ತಿದ್ದ ಎಂದು ದೂರಿದ್ದಾಳೆ.
ಇದನ್ನೂ ಓದಿ: Viral Post: ಈ ದೇಶದಲ್ಲಿ ಬರ್ತ್‌ಡೇ ಪಾರ್ಟಿಗೆ ಹೋಗೋ ಮುನ್ನ ಮನೆಯಲ್ಲೇ ಊಟ ಮಾಡಿ ಹೋಗ್ಬೇಕಂತೆ!
ತನ್ನ ಪತಿಗೆ ಇತರ ಹುಡುಗಿಯರ ಬಗ್ಗೆ ತುಂಬಾ ಆಸಕ್ತಿ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇತರ ಹುಡುಗಿಯರ ಅಶ್ಲೀಲ ಚಿತ್ರಗಳು ಮತ್ತು ವಿಡಿಯೊಗಳನ್ನು ವೀಕ್ಷಿಸುತ್ತಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ತಾನು ಗರ್ಭಿಣಿಯಾದಾಗ ರಹಸ್ಯವಾಗಿ ಗರ್ಭಪಾತ ಮಾತ್ರೆಗಳನ್ನು ನೀಡಿದ್ದಾನೆ ಎಂದೂ ಸಂತ್ರಸ್ತೆ ಆರೋಪಿಸಿದ್ದಾರೆ. ತನ್ನ ಅತ್ತೆ-ಮಾವ ಕೂಡ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ಅವರ ಬೇಡಿಕೆ ಈಡೇರದಿದ್ದಾಗ, ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಲು ಪ್ರಾರಂಭಿಸಿದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆ ಸಮಯದಲ್ಲಿ ಮಹಿಳೆಯ ಕುಟುಂಬವು 16 ಲಕ್ಷ ರೂ. ಮೌಲ್ಯದ ಆಭರಣಗಳು, 24 ಲಕ್ಷ ರೂ. ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೋ ಮತ್ತು 10 ಲಕ್ಷ ರೂ. ನಗದು ನೀಡಿದ್ದರೂ ಇದೀಗ ಚಿತ್ರಹಿಂಸೆ ನೀಡುತ್ತಿದ್ದಾರೆ. ಮದುವೆಗೆ ಸುಮಾರು 76 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇನ್ನು ಈ ಸಂಬಂಧ ಮಹಿಳೆಯ ಪತಿ, ಅತ್ತೆ, ಮಾವ ಮತ್ತು ಅತ್ತಿಗೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.