Viral Video: ನನ್ನ ಹಿಂದಿ ಭಾಷೆ ಸುಂದರವಾಗಿದೆ ಎಂದಿದ್ದೇಕೆ ತಮಿಳು ಪೈಲಟ್? ಈ ಮಾತಿಗೆ ಬಿದ್ದು ಬಿದ್ದು ನಕ್ಕ ಪ್ರಯಾಣಿಕರು
Tamil Pilot’s announcement in Hindi: ತಮಿಳುನಾಡಿನ ಇಂಡಿಗೋ ವಿಮಾನದ ಪೈಲಟ್ ಒಬ್ಬರು ಪ್ರಯಾಣಿಕರೊಂದಿಗೆ ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೊವೊಂದು ವೈರಲ್ ಆಗಿದೆ. ನನ್ನ ಹಿಂದಿ ಬಹಳ ಸುಂದರವಾಗಿದೆ, ನೀವು ಅಡ್ಜಸ್ಟ್ ಮಾಡಿಕೊಳ್ಳುವಿರಿ ಎಂದು ಭಾವಿಸುವುದಾಗಿ ಹೇಳಿದ್ದಾರೆ. ಈ ಮಾತಿಗೆ ಪ್ರಯಾಣಿಕರು ಹಾಗೂ ಗಗನಸಖಿಯರು ನಕ್ಕಿದ್ದಾರೆ.


ಪಟನಾ: ದಕ್ಷಿಣ ಭಾರತದಲ್ಲಿ ಭಾಷಾ ಹೇರಿಕೆಯ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆ, ತಮಿಳುನಾಡಿನ ಇಂಡಿಗೋ ವಿಮಾನದ ಪೈಲಟ್ (Pilot) ಒಬ್ಬರು ಪ್ರಯಾಣಿಕರೊಂದಿಗೆ ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೊವೊಂದು ವೈರಲ್ (Viral Video) ಆಗಿದೆ. ಬಿಹಾರದ ಪಾಟ್ನಾದಿಂದ ವಿಮಾನ ಹೊರಡುವ ಮೊದಲು ಪೈಲಟ್ ಪ್ರದೀಪ್ ಕೃಷ್ಣನ್ ಎಲ್ಲಾ ಪ್ರಯಾಣಿಕರೊಂದಿಗೆ ಮೈಕ್ ಹಿಡಿದು ಹಿಂದಿಯಲ್ಲಿ ಮಾತನಾಡಿದ್ದು, ಇದು ಪ್ರಯಾಣಿಕರಲ್ಲಿ ನಗು ತರಿಸಿದೆ.
ಪ್ರದೀಪ್ ಕೃಷ್ಣನ್ ಅವರ ಈ ಪ್ರಯತ್ನವು ಸಾಮಾಜಿಕ ಮಾಧ್ಯಮದಲ್ಲಿ ಅಚ್ಚರಿ ಮೂಡಿಸಿತು. ಪ್ರಯಾಣಿಕರಲ್ಲಿ ಕೆಲವರು ಹಿಂದಿ ಭಾಷಿಕರಿದ್ದಿರಬಹುದು ಹೀಗಾಗಿ ಯಾವುದೇ ಹಿಂಜರಿಕೆಯಿಲ್ಲದೆ ಮೈಕ್ ಹಿಡಿದ ಪೈಲಟ್ ಮಾತನಾಡಿದ್ರು. ವಾತಾವರಣದ ಸಂಭಾವ್ಯ ಪ್ರಕ್ಷುಬ್ಧತೆ ಮತ್ತು ಸೀಟ್ ಬೆಲ್ಟ್ ಧರಿಸುವ ಮಹತ್ವದ ಬಗ್ಗೆ ಸಂದೇಶವನ್ನು ರವಾನಿಸಲು ಹಿಂದಿಯಲ್ಲಿ ಮಾತನಾಡಿದರು.
“ಎಲ್ಲರಿಗೂ ನಮಸ್ತೆ. ನನ್ನ ಹಿಂದಿ ತುಂಬಾ ಸುಂದರವಾಗಿದೆ, ನೀವೆಲ್ಲರೂ ನನ್ನ ಭಾಷೆಗೆ ಅಡ್ಜಸ್ಟ್ ಆಗುವಿರಿ ಎಂಬ ನಂಬಿಕೆಯಿದೆ. ಇಂದು, ನಾವು ಪಟನಾದಿಂದ 3,000 ಅಡಿ ಎತ್ತರದಲ್ಲಿ ಹಾರಲಿದ್ದೇವೆ. ನೀವು ಸ್ವಲ್ಪ ಪ್ರಕ್ಷುಬ್ಧತೆಯನ್ನು ಅನುಭವಿಸಬಹುದು. ಭಯಪಡಬೇಡಿ. ಸೀಟ್ ಬೆಲ್ಟ್ ಬಳಸಿ” ಎಂದು ಪೈಲಟ್ ಹೇಳಿದ್ದಾರೆ. ಇದು ಪ್ರಯಾಣಿಕರಲ್ಲಿ ನಗು ತರಿಸಿದೆ. ಗಗನಸಖಿಯರು ಕೂಡ ಪೈಲಟ್ ಹಿಂದಿ ಭಾಷೆಯಲ್ಲಿ ಹೇಳಿದ್ದನ್ನು ಕೇಳಿ ನಕ್ಕಿದ್ದಾರೆ.
ವಿಡಿಯೊ ವೀಕ್ಷಿಸಿ:
ಈ ದೃಶ್ಯವನ್ನು ಸೆರೆಹಿಡಿದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ಭಾರಿ ವೈರಲ್ ಆಗಿದೆ. ಪರಿಪೂರ್ಣವಲ್ಲದಿದ್ದರೂ, ಪೈಲಟ್ ಪ್ರದೀಪ್ ಕೃಷ್ಣನ್ ಅವರು ಪ್ರಯಾಣಿಕರೊಂದಿಗೆ ಹಿಂದಿಯಲ್ಲಿ ಸಂವಹನ ನಡೆಸುವ ಪ್ರಾಮಾಣಿಕ ಪ್ರಯತ್ನವು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಸಂತೋಷವನ್ನುಂಟುಮಾಡಿದೆ. ಅವರ ಮಾತೃಭಾಷೆಯಾದ ತಮಿಳಿಗಿಂತ ಭಿನ್ನವಾದ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಿದ್ದಕ್ಕಾಗಿ ಅನೇಕ ಬಳಕೆದಾರರು ಅವರನ್ನು ಅಭಿನಂದಿಸಿದ್ದಾರೆ.
ಪೈಲಟ್- ನಿಮ್ಮ ಹಿಂದಿ ಬಹಳ ಸುಂದರವಾಗಿದೆ. ಪ್ರಯಾಣಿಕರಿಗೆ ಸಂದೇಶವನ್ನು ತಲುಪಿಸುವುದು ಬಹಳ ಮುಖ್ಯ. ಅದನ್ನು ನೀವು ಮಾತು ಮತ್ತು ಕ್ರಿಯೆಯ ಮೂಲಕ ಮಾಡಿದ್ದೀರಿ. ಎಲ್ಲರೂ ನಿಮ್ಮ ಸಂದೇಶಕ್ಕೆ ಗಮನ ಕೊಟ್ಟಿದ್ದಾರೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ಪೈಲಟ್ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: Viral Post: ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ!? ಮಕ್ಕಳಂತೆ ಆಡಲು ಜಾರುಬಂಡಿ ಆಡಲು ಹೋಗಿ ಪೇಚಿಗೆ ಸಿಲುಕಿದ ಭೂಪ