ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ವಾಟ್ಸ್‌ಆ್ಯಪ್‌ ಗ್ರೂಪ್‍ನಿಂದ ತೆಗೆದುಹಾಕಿದ್ದಕ್ಕೆ ಅಡ್ಮಿನ್‌ನನ್ನು ಗುಂಡಿಕ್ಕಿ ಕೊಂದ ಭೂಪ

Viral News: ವಾಟ್ಸ್‌ಆ್ಯಪ್‌ ಗ್ರೂಪ್‍ನಿಂದ ತೆಗೆದು ಹಾಕಿದ್ದಕ್ಕೆ ಗ್ರೂಪ್ ಅಡ್ಮಿನ್ ಮುಷ್ತಾಕ್ ಅಹ್ಮದ್ ಎಂಬಾತನನ್ನು ಅಶ್ಫಾಕ್ ಖಾನ್‍ ಎಂಬುವವನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಪಾಕಿಸ್ತಾನದ ಪೇಶಾವರದಲ್ಲಿ ನಡೆದಿದೆ. ಪತ್ರಕರ್ತ ಗುಲಾಮ್ ಅಬ್ಬಾಸ್ ಶಾ ಈ ಘಟನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ.

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‍ನಿಂದ ತನ್ನನ್ನು ತೆಗೆದುಹಾಕಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಅಡ್ಮಿನ್‌ನನ್ನೇ ಗುಂಡಿಕ್ಕಿ ಕೊಂದಿದ್ದಾನೆ. ಇಬ್ಬರ ನಡುವೆ ಕೆಲವೊಂದು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಇದ್ದ ಕಾರಣ ಅಡ್ಮಿನ್ ಆ ವ್ಯಕ್ತಿಯನ್ನು ಗ್ರೂಪ್‍ನಿಂದ ತೆಗೆದು ಹಾಕಿದ್ದಾನೆ. ಇದರಿಂದ ಇಬ್ಬರ ನಡುವೆ ವಾಗ್ವಾದ ಶುರುವಾಗಿ ತನ್ನನ್ನು ಗ್ರೂಪ್‍ನಿಂದ ತೆಗೆದು ಹಾಕಿದ್ದಕ್ಕೆ ಕೋಪಗೊಂಡ ವ್ಯಕ್ತಿ ಅಡ್ಮಿನ್‍ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌ (Viral News) ಆಗಿದೆ.

ವರದಿ ಪ್ರಕಾರ, ಸಂತ್ರಸ್ತ ವ್ಯಕ್ತಿಯನ್ನು ಮುಷ್ತಾಕ್ ಅಹ್ಮದ್ ಎಂದು ಗುರುತಿಸಲಾಗಿದೆ. ಈತ ವಾಟ್ಸ್‌ಆ್ಯಪ್‌ ಗ್ರೂಪ್‍ನ ಅಡ್ಮಿನ್ ಆಗಿದ್ದ. ಆತನನ್ನು ಅಶ್ಫಾಕ್ ಖಾನ್‍ ಕೊಲೆ ಮಾಡಿದ್ದಾನೆ. ಸಂತ್ರಸ್ತನ ಸಹೋದರ ಹುಮಾಯೂನ್ ಖಾನ್ ಈ ಗುಂಡಿನ ದಾಳಿಯನ್ನು ನೋಡಿದ್ದಾಗಿ ಹೇಳಿದ್ದಾನೆ. "ಹತ್ಯೆಗೀಡಾದ ನನ್ನ ಸಹೋದರ ಮುಷ್ತಾಕ್ ಮತ್ತು ಅಶ್ಫಾಕ್ ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಕೆಲವು ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಂಡಿದ್ದರು. ಇದರಿಂದಾಗಿ ನನ್ನ ಸಹೋದರ ಆತನನ್ನು ಗ್ರೂಪ್‍ನಿಂದ ತೆಗೆದು ಹಾಕಿದ್ದಾನೆ. ಕೊನೆಗೆ ಕೋಪಗೊಂಡ ಅಶ್ಫಾಕ್‌ ಸಹೋದರನನ್ನು ಗುಂಡಿಕ್ಕಿ ಕೊಂದಿದ್ದಾನೆ" ಎಂದು ತಿಳಿಸಿದ್ದಾನೆ. ಈ ದುರಂತ ನಡೆಯುವ ಮೊದಲು ಅವರ ಕುಟುಂಬದವರಿಗೆ ಈ ವಿವಾದದ ಬಗ್ಗೆ ತಿಳಿದಿರಲಿಲ್ಲ ಎಂದು ಹುಮಾಯೂನ್ ಹೇಳಿದ್ದಾನೆ.

ಸಂತ್ರಸ್ತನ ಸಹೋದರ ಈ ಕೊಲೆಯ ಬಗ್ಗೆ ದೂರು ದಾಖಲಿಸಿದ್ದಾನೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಅಬಿದ್ ಖಾನ್ ತಿಳಿಸಿದ್ದಾರೆ. ಪೊಲೀಸ್ ವರದಿಯ ಪ್ರಕಾರ, ಎರಡೂ ಕಡೆಯವರು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾಗ ಅಶ್ಫಾಕ್ ಇದ್ದಕ್ಕಿದ್ದಂತೆ ಗುಂಡು ಹಾರಿಸಿ ಅಹ್ಮದ್‌ನನ್ನು ಕೊಂದಿದ್ದಾನೆ. ಶಂಕಿತ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಈಗ ಅವನನ್ನು ಹುಡುಕುತ್ತಿದ್ದಾರೆ.

ಈ ಘಟನೆಯ ಬಗ್ಗೆ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ಒಬ್ಬರು, "ಅಂತಹ ಪ್ರಕರಣಗಳ ಹಿಂದೆ, ಯಾವಾಗಲೂ ಒಂದು ದೊಡ್ಡ ಕಥೆ ಇರುತ್ತದೆ- ಎರಡೂ ಕಡೆ ಪೈಪೋಟಿ, ದ್ರೋಹ ಮತ್ತು ವೈಯಕ್ತಿಕ ದ್ವೇಷವಿರುತ್ತದೆ. ವಾಟ್ಸ್‌ಆ್ಯಪ್‌ ಗ್ರೂಪ್‌ನಿಂದ ತೆಗೆದುಹಾಕುವಂತಹ ಸಣ್ಣ ಘಟನೆಗಳು ಆಗಾಗ್ಗೆ ದುರಂತ ಸಂಭವಿಸುವ ಟರ್ನಿಂಗ್‌ ಪಾಯಿಂಟ್ ಆಗುತ್ತವೆ. ಆದ್ದರಿಂದ ಇದೂ ಹಾಗೆ ಸಂಭವಿಸಿರಬಹುದು” ಎಂದಿದ್ದಾರೆ. ಇನ್ನೊಬ್ಬರು, "ಜನರು ಬಹಳ ಸಣ್ಣ ವಿಷಯಗಳಿಗೆ ಪರಸ್ಪರ ಕೊಲೆ ಮಾಡುತ್ತಾರೆ. ಅವರಿಗೆ ಪೊಲೀಸ್ ಕಾನೂನು ಮತ್ತು ಶಿಕ್ಷೆಗಳ ಬಗ್ಗೆ ಭಯವಿಲ್ಲ” ಎಂದು ಹೇಳಿದ್ದಾರೆ. "ನಂಬಲಸಾಧ್ಯ! ನಾವು ಎಂತಹ ಕಾಲಕ್ಕೆ ಬಂದಿದ್ದೇವೆ? ಸೋಶಿಯಲ್ ಮೀಡಿಯಾಗಳಿಗಾಗಿ ಜೀವಗಳನ್ನು ತೆಗೆದುಕೊಳ್ಳುತ್ತೀರಾ? ಇದು ಹುಚ್ಚುತನವನ್ನು ಮೀರಿದೆ!" ಎಂದು ವ್ಯಕ್ತಿಯೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:Bihar Shocker: ಆರ್ಕೆಸ್ಟ್ರಾ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿದ್ದ ಯುವಕನನ್ನು ಗುಂಡಿಕ್ಕಿ ಭೀಕರ ಹತ್ಯೆ!

ಇತ್ತೀಚೆಗೆ ಬಿಹಾರದ ಗಯಾದಲ್ಲಿ ತಡರಾತ್ರಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುವಾಗಲೇ ಯುವಕನೊಬ್ಬ ಗುಂಡಿಗೆ ಬಲಿಯಾದ ಘಟನೆ ನಡೆದಿತ್ತು. ವೇದಿಕೆಯಲ್ಲಿ ನೃತ್ಯಗಾರರಿಗೆ ಗೌರವ ಸಂಭಾವನೆ ನೀಡುವಾಗ ಯುವಕನ ಮೇಲೆ ಗುಂಡು ಹಾರಿಸಲಾಗಿತ್ತು. ಗುಂಡು 27 ವರ್ಷದ ಅಂಜನಿ ಕುಮಾರ್ ತಲೆಗೆ ತಗುಲಿದ್ದು, ವೇದಿಕೆಯಲ್ಲಿಯೇ ತಕ್ಷಣ ಮೃತಪಟ್ಟಿದ್ದಾನೆ.