ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನನ್ನನ್ನೇ ಕಚ್ಚುತ್ತೀಯಾ?: ಕುಡಿದ ಮತ್ತಿನಲ್ಲಿ ಕುತ್ತಿಗೆಗೆ ಹಾವು ಸುತ್ತಿಕೊಂಡು ಹುಚ್ಚಾಟ ಮೆರೆದ ವ್ಯಕ್ತಿ

ಆಗಾಗ ಹಾವು ಕಚ್ಚಿ ಮನುಷ್ಯರು ಸಾವಿಗೀಡಾಗುವ ಘಟನೆಗಳ ಬಗ್ಗೆ ನಾವು ಕೇಳಿರುತ್ತೇವೆ. ಆದರೆ ಕಚ್ಚಿದ ಹಾವನ್ನೇ ಇಲ್ಲೊಬ್ಬ ಭೂಪ ಕುತ್ತಿಗೆಗೆ ಸುತ್ತಿಕೊಂಡು ಹುಚ್ಚಾಟ ಮೆರೆದಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ವಿಡಿಯೊ ವೈರಲ್ ಆಗಿದ್ದು, ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಘಟನೆಯ ದೃಶ್ಯ

ಅಮರಾವತಿ: ಆಂಧ್ರ ಪ್ರದೇಶದ (Andhra Pradesh) ಕೋನಸೀಮ (Konaseema) ಜಿಲ್ಲೆಯ ಮುಮ್ಮಿಡಿವರಂನಲ್ಲಿ ಕುಡಿದ ವ್ಯಕ್ತಿಯೊಬ್ಬ ಕತ್ತಿಗೆ ವಿಷಕಾರಿ ಹಾವನ್ನು (Snake) ಸುತ್ತಿಕೊಂಡು ಗ್ರಾಮದಲ್ಲಿ ಗಲಾಟೆ ಸೃಷ್ಟಿಸಿದ ಘಟನೆ ನಡೆದಿದೆ. ಈ ವಿಚಿತ್ರ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಗೊಲ್ಲಪಲ್ಲಿ ಕೊಂಡ ಎಂಬ ವ್ಯಕ್ತಿಯು ತನ್ನ ಮನೆಯ ಅಂಗಳದಲ್ಲಿ ಕೋಳಿಗಳನ್ನಿಡುವ ಪಂಜರದ ಬಳಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವು ಕಚ್ಚಿದೆ. ಆದರೆ ಚಿಕಿತ್ಸೆ ಪಡೆಯುವ ಬದಲು ಆತ ಕುಡಿತದ ಆವೇಶದಲ್ಲಿ ಆ ಹಾವನ್ನು ಹಿಡಿದು ಕತ್ತಿಗೆ ಸುತ್ತಿಕೊಂಡಿದ್ದಾನೆ. “ನೀನು ನನ್ನನ್ನು ಕಚ್ಚುತ್ತೀಯಾ?” ಎಂದು ಕೂಗುತ್ತಾ ಗ್ರಾಮದ ರಸ್ತೆಗಳಲ್ಲಿ ತಿರುಗಾಡಿದ್ದಾನೆ. ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಮುಂದೆ ನಡೆದ ಈ ಘಟನೆಯ ವಿಡಿಯೋದಲ್ಲಿ ಕೊಂಡ ಗ್ರಾಮಸ್ಥರ ಮೇಲೆ ಹಾವನ್ನು ಎಸೆಯುವಂತೆ ಬೆದರಿಸುತ್ತಿರುವುದು ಕಂಡು ಬಂದಿದೆ.

ಗೊಲ್ಲಪಲ್ಲಿ ಕೊಂಡನ ಈ ಕೃತ್ಯದಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು. ವಿಡಿಯೊದಲ್ಲಿ ಆತ ಗ್ರಾಮಸ್ಥರ ಮೇಲೆ ಹಾವನ್ನು ಎಸೆಯಲು ಯತ್ನಿಸುತ್ತಿರುವ ದೃಶ್ಯಗಳಿವೆ. ಈ ಘಟನೆಯ ನಡುವೆ ಹಾವು ಕೊಂಡನನ್ನು ಮತ್ತೊಮ್ಮೆ ಕಚ್ಚಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಅಪಾಯಕಾರಿಯಾಗಿಸಿತು. ಗ್ರಾಮಸ್ಥರು ಕೊನೆಗೆ ಹಾವನ್ನು ಕೊಂಡನಿಂದ ಕಿತ್ತುಕೊಂಡು ಕೊಂದು, ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.



ಕೊಂಡನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಈಗ ಅಪಾಯದಿಂದ ಪಾರಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ವೈದ್ಯಕೀಯ ಅಧಿಕಾರಿಗಳ ಪ್ರಕಾರ, ಸಕಾಲಿಕ ಚಿಕಿತ್ಸೆಯಿಂದ ಆತನ ಜೀವ ಉಳಿದಿದೆ. ಆದರೆ ಕುಡಿದ ಮತ್ತಿನಲ್ಲಿ ಈ ಅಪಾಯಕಾರಿ ಕೃತ್ಯಕ್ಕೆ ಕೈಹಾಕಿದ್ದು ಗಂಭೀರ ಚರ್ಚೆಗೆ ಕಾರಣವಾಗಿದೆ.

ಈ ಸುದ್ದಿಯನ್ನು ಓದಿ: Viral Video: ದಂಗೆ ಏಳುವಂತೆ ನೇಪಾಳದ ಯುವ ಜನತೆಗೆ ಕರೆ ನೀಡಿದ ವಿದ್ಯಾರ್ಥಿಯ ಹಳೆ ವಿಡಿಯೊ ಮತ್ತೆ ಮುನ್ನೆಲೆಗೆ

ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಕೊಂಡನ ವರ್ತನೆಯನ್ನು ಟೀಕಿಸಿದ್ದಾರೆ. ಕೆಲವರು ಇದನ್ನು “ಕುಡಿತದ ಮೂರ್ಖತನ” ಎಂದು ಕರೆದರೆ, ಇತರರು “ಇಂತಹ ಕೃತ್ಯಗಳು ಜನ ಭದ್ರತೆಗೆ ಧಕ್ಕೆ” ಎಂದಿದ್ದಾರೆ. ಈ ಘಟನೆಯು ಕುಡಿತದಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದೆ.