Viral Video: ನಿರೂಪಕಿ ಸುದ್ದಿ ಓದುತ್ತಿರುವಾಗಲೇ ರಣಭೀಕರ ಭೂಕಂಪ; ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಟರ್ಕಿಯ ಇಸ್ತಾಂಬುಲ್ ನಗರದ ಬಳಿಯ ಸಿಲಿವ್ರಿ ಪ್ರದೇಶದಲ್ಲಿ ಸಂಭವಿಸಿದ ತೀವ್ರ ಭೂಕಂಪ ಬಗ್ಗೆ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗಿದೆ. ಆ ವೇಳೆ ಸಿಎನ್ಎನ್ ಟರ್ಕಿಶ್ ಸುದ್ದಿ ನಿರೂಪಕಿ ಮೆಲ್ಟೆಮ್ ಬೊಜ್ಬೆಯೋಸ್ಲು ಸುದ್ದಿ ಓದುತ್ತಿದ್ದಾಗ ಇದ್ದಕ್ಕಿದ್ದಂತೆ ನೆಲ ನಡುಗಲು ಶುರುವಾಗಿತ್ತು. ಇದರಿಂದ ಆಕೆ ಭಯಗೊಳ್ಳದೆ ಸುದ್ದಿ ಓದುವುದನ್ನು ಮುಂದುವರಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.


ಅಂಕಾರಾ: ಟರ್ಕಿಯಲ್ಲಿ ಬುಧವಾರ (ಏಪ್ರಿಲ್ 23)ಮಧ್ಯಾಹ್ನ 12:49 ಕ್ಕೆ ಪ್ರಬಲ ಭೂಕಂಪನ ಸಂಭವಿಸಿದೆ. ಟರ್ಕಿಯ ಇಸ್ತಾಂಬುಲ್ ನಗರದ ಬಳಿಯ ಸಿಲಿವ್ರಿ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದೆ ಎನ್ನಲಾಗಿದೆ. ಈ ಭೂಕಂಪನದಿಂದ ಇಡೀ ನಗರದ ಜನರು ಭಯದಿಂದ ನಡುಗಿದ್ದಾರೆ.ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.2ರಷ್ಟಿತ್ತು. ಭೂಕಂಪದ ನಡುಕ ಎಷ್ಟು ಪ್ರಬಲವಾಗಿತ್ತೆಂದರೆ ಮನೆಗಳ ಕಿಟಕಿಗಳು ಮತ್ತು ಬಾಗಿಲುಗಳು ಜೋರಾಗಿ ನಡುಗಲುವಾಗಿತ್ತಂತೆ. ಈ ನಡುವೆ , ಭೂಕಂಪದ ಬಗ್ಗೆ ಟಿವಿಯಲ್ಲಿ ನೇರ ಪ್ರಸಾರ ಮಾಡುತ್ತಿದ್ದ ಟರ್ಕಿಯ ರೂಪಕಿಯೊಬ್ಬಳ ಪ್ರತಿಕ್ರಿಯೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.
ಸಿಎನ್ಎನ್ ಟರ್ಕಿಶ್ ಸುದ್ದಿ ನಿರೂಪಕಿ ಮೆಲ್ಟೆಮ್ ಬೊಜ್ಬೆಯೋಸ್ಲು ಸುದ್ದಿ ಓದುತ್ತಿದ್ದಾಗ ಇದ್ದಕ್ಕಿದ್ದಂತೆ ನೆಲ ಕಂಪಿಸಲು ಶುರುವಾಗಿತ್ತಂತೆ. ಅವಳು ಕೆಲವು ಸೆಕೆಂಡುಗಳ ಕಾಲ ಭಯಭೀತಳಾಗಿದ್ದು, ಇದು ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿತ್ತು. ಆದರೆ ಅವಳು ತಾಳ್ಮೆ ಕಳೆದುಕೊಳ್ಳದೇ ಶಾಂತವಾಗಿ ಸುದ್ದಿಯನ್ನು ಓದಿದ್ದಾಳಂತೆ. “ಇದೀಗ ಅತ್ಯಂತ ಪ್ರಬಲ ಭೂಕಂಪ ಸಂಭವಿಸುತ್ತಿದೆ. ಇಸ್ತಾಂಬುಲ್‍ನಲ್ಲಿ ಬಹಳ ಬಲವಾದ ಭೂಕಂಪನದ ಅನುಭವವಾಗುತ್ತಿದೆ" ಎಂದು ಅವಳು ವೈರಲ್ ವಿಡಿಯೊದಲ್ಲಿ ಹೇಳಿದ್ದಾಳೆ. ಇದು ಅವಳ ವೃತ್ತಿಯ ಬಗೆಗಿನ ನಿಷ್ಠೆಯನ್ನು ತೋರಿಸುತ್ತದೆ.
ನಿರೂಪಕಿಯ ವಿಡಿಯೊ ಇಲ್ಲಿದೆ ನೋಡಿ...
😱Earthquake live on air: Turkish news anchor reports tremors during broadcast
— NEXTA (@nexta_tv) April 23, 2025
A visibly shaken presenter, trying to remain calm, says: "A very strong earthquake is happening right now. A very strong earthquake is being felt in Istanbul."
🙏🙏 pic.twitter.com/POtABihAtq
ನಿರೂಪಕಿಯ ಈ ಪ್ರತಿಕ್ರಿಯೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ಹೆಚ್ಚು ವೈರಲ್ ಆಗಿದೆ. ಈ ವಿಡಿಯೊವನ್ನು @nexta_tv ಹಂಚಿಕೊಂಡಿದ್ದು, ಇದು 1 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಪಡೆದಿದೆ. ವಿಡಿಯೊ ನೋಡಿದ ಅನೇಕರು ನಿರೂಪಕಿಯ ಧೈರ್ಯವನ್ನು ಹೊಗಳಿ ಕಾಮೆಂಟ್‍ಗಳನ್ನು ಮಾಡಿದ್ದಾರೆ. ಒಬ್ಬರು, "ಈ ಮಹಿಳೆ ನಿಜವಾಗಿಯೂ ಧೈರ್ಯಶಾಲಿ” ಎಂದಿದ್ದಾರೆ. ಇನ್ನೊಬ್ಬರು, "ಅವಳು ತನ್ನ ಜೀವವನ್ನು ಉಳಿಸಲು ಓಡಿಹೋಗುವ ಬದಲು ತನ್ನ ಕೆಲಸವನ್ನು ಮಾಡುತ್ತಲೇ ಇದ್ದಳು." ಎಂದು ಹೇಳಿದ್ದಾರೆ.
ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ (ಎಎಫ್ಎಡಿ) ಪ್ರಕಾರ, ಭೂಕಂಪದ ಕೇಂದ್ರಬಿಂದು ಇಸ್ತಾಂಬುಲ್‍ನ ನೈಋತ್ಯಕ್ಕೆ 40 ಕಿಲೋಮೀಟರ್ ದೂರದಲ್ಲಿರುವ ಮರ್ಮರ ಸಮುದ್ರದಲ್ಲಿತ್ತು. ಕೇವಲ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ದೃಢಪಡಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ಇಂಡಿಗೋ ವಿಮಾನದಲ್ಲಿ ಸೊಳ್ಳೆ ಕಾಟ- ಪ್ರಯಾಣಿಕರು ಮಾಡಿದ್ದೇನು ನೋಡಿ; ವಿಡಿಯೊ ವೈರಲ್
ಅಲ್ಲದೇ ಇಸ್ತಾಂಬುಲ್‍ನಲ್ಲಿ ಹಲವಾರು ಭೂಕಂಪಗಳು ಸಂಭವಿಸಿವೆ - ಇದು ಬುಧವಾರ ನಡೆದ 6.2 ತೀವ್ರತೆಯ ಅತಿದೊಡ್ಡ ಭೂಕಂಪವಾಗಿದೆ. ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲವಾದರೂ, ಬಾಸ್ಫರಸ್ ಜಲಸಂಧಿಯ ಯುರೋಪಿಯನ್ ಮತ್ತು ಏಷ್ಯಾದ ತೀರದಲ್ಲಿರುವ ನಗರವನ್ನು ಭೂಕಂಪ ಅಪ್ಪಳಿಸಿ ನಡುಗಿಸಿದ್ದರಿಂದ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.