ಜೈಪುರ, ಸೆ. 15: ಇತ್ತೀಚೆಗೆ ಕಳವು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ರಾಜಸ್ಥಾನದ ಅಜ್ಮೀರ್‌ನಲ್ಲಿ ಬೈಕ್‌ನಲ್ಲಿ ಬಂದ ಖದೀಮರು ಮಹಿಳೆಯ ಕತ್ತಿನಿಂದ ಸರ ಕದಿಯಲು ಯತ್ನಿಸಿದ ಘಟನೆ ನಡೆದಿದೆ. ಮಹಿಳೆ ಗಟ್ಟಿಯಾಗಿ ಬೊಬ್ಬೆ ಹಾಕುತ್ತಿದ್ದಂತೆ ಸಾರ್ವಜನಿಕರು ಒಟ್ಟಾಗಿ ಕಳ್ಳರನ್ನು ಬೆನ್ನಟ್ಟಿದ್ದಾರೆ. ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದ ಈ ಘಟನೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ (Viral News) ಸೆರೆಯಾಗಿದೆ. ವಿಡಿಯೊದಲ್ಲಿ ಕಳ್ಳರು ಮಹಿಳೆಯ ಕುತ್ತಿಗೆಯಿಂದ ಸರ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ರಾಜಸ್ಥಾನದ ಅಜ್ಮೀರ್‌ನಲ್ಲಿ ನಿವೃತ್ತ ವೈದ್ಯ ಮತ್ತು ಅವರ ಪತ್ನಿಯನ್ನು ಗುರಿಯಾಗಿಸಿಕೊಂಡು ಕಳವು ಪ್ರಯತ್ನ ನಡೆದಿದೆ. ವೃದ್ಧ ದಂಪತಿ ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಖದೀಮರು ಸರ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ.
ವಿಡಿಯೊ ನೋಡಿ:
ಬೈಕ್‌ನಲ್ಲಿ ಬಂದ ಇಬ್ಬರು ಆರಂಭದಿಂದಲೇ ದಂಪತಿಯನ್ನು ಹಿಂಬಾಲಿಸಿದ್ದಾರೆ. ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಸಿಯಲು ಪ್ರಯತ್ನಿಸುವಾಗ ನಿಯಂತ್ರಣ ತಪ್ಪಿ ಕಳ್ಳರ ಬೈಕ್ ಹಾಗೂ ದಂಪತಿಯ ಸ್ಕೂಟರ್ ಎರಡೂ ಬಿದ್ದಿದೆ. ತಕ್ಷಣವೇ ಚೇತರಿಸಿಕೊಂಡ ಹಿಂಬದಿ ಸವಾರ ಮಹಿಳೆಯ ಸರವನ್ನು ಕಿತ್ತು ಪರಾರಿಯಾಗಲು ಮುಂದಾಗಿದ್ದಾನೆ.
ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ
ಮಹಿಳೆ ಗಟ್ಟಿಯಾಗಿ ಬೊಬ್ಬಿಡುತ್ತಿದ್ದಂತೆ ಅಲ್ಲಿದ್ದ ಸಾರ್ವಜನಿಕರು ತಕ್ಷಣವೇ ಧಾವಿಸಿದ್ದಾರೆ. ಒಬ್ಬ ಕಳ್ಳ ಅಲ್ಲಿಂದ ಓಡಿ ತಪ್ಪಿಸಿಕೊಂಡರೂ, ಸರ ಕದ್ದ ಖದೀಮನನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಬಿದ್ದಿದ್ದ ಹಿರಿಯ ದಂಪತಿಯನ್ನು ಉಪಚರಿಸಿ ಮೇಲಕ್ಕೆಬ್ಬಿಸಿದ್ದಾರೆ
ಘಟನೆಯ ನಂತರ, ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ವಶಕ್ಕೆ ಪಡೆದ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು ಪರಾರಿಯಾಗಿರುವ ಮತ್ತೊಬ್ಬ ಶಂಕಿತನನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ವೈರಲ್ ಆಗಿದ್ದು, ಸಾರ್ವಜನಿಕರ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬಳಕೆದಾರರೊಬ್ಬರು, ʼʼಇತ್ತೀಚಿನ ದಿನಗಳಲ್ಲಿ, ಕೆಲವೇ ಜನರು ಸಹಾಯ ಮಾಡಲು ಮುಂದೆ ಬರುತ್ತಾರೆ. ಅಂತಹ ಜನರನ್ನು ಮೆಚ್ಚಲೇಬೇಕುʼʼ ಎಂದು ಕಾಮೆಂಟ್ ಮಾಡಿದ್ದಾರೆ.