ಪಾಟ್ನಾ, ಆ. 12: ತಾಯಿಯ ಪ್ರೀತಿಗೆ ಯಾವುದೂ ಸಾಟಿಯಿಲ್ಲ, ತನ್ನ ಜೀವವನ್ನು ಒತ್ತೆಯಿಟ್ಟಾದರೂ ಮಕ್ಕಳ ರಕ್ಷಣೆಗಾಗಿ ಮುಂದೆ ಬರುತ್ತಾಳೆ. ಇದಕ್ಕೆ ಸಾಕ್ಷಿ ಎನ್ನುವಂತೆ ರೋಮಾಂಚಕಾರಿ ಘಟನೆಯೊಂದು (Viral News) ಬಿಹಾರದಲ್ಲಿ ನಡೆದಿದೆ. ವೇಗವಾಗಿ ಬರುತ್ತಿದ್ದ ರೈಲಿನಿಂದ ತನ್ನ ಮಕ್ಕಳನ್ನು ರಕ್ಷಿಸಲು ತಾಯಿಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಯಮ ಯಾತನೆಯನ್ನು ಹಲ್ಲು ಕಚ್ಚಿಸಿ ಸಹಿಸಿಕೊಂಡಿದ್ದಾರೆ. ವಿಡಿಯೊದ ಆರಂಭದಲ್ಲಿ ರೈಲು ಹತ್ತಿರ ಬರುತ್ತಿದ್ದಂತೆ ಪ್ಲಾಟ್‌ಫಾರ್ಮ್ ಪಕ್ಕದ ಕಿರಿದಾದ ಜಾಗದಲ್ಲಿ ಮಕ್ಕಳು ಗೋಡೆಗೆ ಒತ್ತಿಕೊಂಡಿರುವುದನ್ನು ತೋರಿಸಲಾಗಿದೆ. ತಾಯಿ ಅವರ ಮೇಲೆ ಮಲಗಿ ಯಾವುದೇ ಅಪಾಯವಾಗದಂತೆ ಕರುಳ ಕುಡಿಯನ್ನು ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಬಿಹಾರದ ಶಾಹಪುರ ಪಟೋರಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪ್ಲಾಟ್‌ಫಾರ್ಮ್ ಹಾಗೂ ಹಳಿಯ ನಡುವಿನ ಕಿರಿದಾದ ಜಾಗದಲ್ಲಿ ಮಕ್ಕಳು ಸಿಲುಕಿಕೊಂಡಿದ್ದರು. ಕೂಡಲೆ ಸಮಯಪ್ರಜ್ಞೆ ಮೆರೆದ ತಾಯಿ ಮಕ್ಕಳನ್ನು ಗೋಡೆಗೆ ಹಿಡಿದು, ಅವರ ಮೇಲೆ ತಾವು ಮಲಗಿ ರಕ್ಷಣೆ ನೀಡಿದರು. ರೈಲಿನ ಕಬ್ಬಿಣದ ಭಾಗಗಳು ಪದೇ ಪದೆ ಆಕೆಯ ಬೆನ್ನಿಗೆ ತಗುತ್ತಿದ್ದರೂ ನೋವು ಸಹಿಸಿಕೊಂಡು ಮಕ್ಕಳನ್ನು ಕಾಪಾಡಿದರು.
ವಿಡಿಯೊ ನೋಡಿ:
ವೈರಲ್ ಆದ ವಿಡಿಯೊದಲ್ಲಿ ಪ್ಲಾಟ್‌ಫಾರ್ಮ್ ಪಕ್ಕದ ಕಿರಿದಾದ ಜಾಗದಲ್ಲಿ ಮಕ್ಕಳು ಗೋಡೆಗೆ ಒತ್ತಿಕೊಂಡಿರುವುದನ್ನು ತೋರಿಸಲಾಗಿದೆ. ತಾಯಿ ಅವರ ಮೇಲೆ ಮಲಗಿ ರಕ್ಷಾ ಕವಚವಾಗಿ ಬದಲಾಗಿದ್ದಾರೆ. ತಾಯಿ ಮತ್ತು ಮಕ್ಕಳಿಂದ ರೈಲು ಕೆಲವು ಇಂಚುಗಳಷ್ಟು ದೂರ ಹೋದಾಗ ಕೆಲವರು ನಿಂತು ಕಿರುಚಾಡಿದ್ದಾರೆ. ಈ ಭಯಾನಕ ಸನ್ನಿವೇಶಗಳ ಹೊರತಾಗಿಯೂ, ರೈಲು ಸಂಪೂರ್ಣವಾಗಿ ಹೊರಟಯ ಹೋಗುವವರೆಗೂ ಅವರು ಅದೇ ರೀತಿ ಇದ್ದರು.
ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ
ಪ್ಲಾಟ್‌ಫಾರ್ಮ್‌ನಲ್ಲಿದ್ದ ಕೆಲವರು ಭಯದಿಂದ ಕೂಗಾಡುತ್ತಿದ್ದರೆ, ಇನ್ನು ಕೆಲವರು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ. ರೈಲು ಪೂರ್ತಿಯಾಗಿ ಹಾದುಹೋದ ನಂತರ, ಕೆಲವು ಪ್ರಯಾಣಿಕರು ತಕ್ಷಣ ಓಡಿಬಂದು ತಾಯಿ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ತಾಯಿ ಮತ್ತು ಆಕೆಯ ಮಕ್ಕಳು ಹೇಗೆ ಹಳಿಗೆ ಬಿದ್ದರು ಎನ್ನುವುದು ಸ್ಪಷ್ಟವಾಗಿಲ್ಲವಾದರೂ ಈ ವಿಡಿಯೊ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ನೆಟ್ಟಿಗರೊಬ್ಬರು "ತಾಯಿಯ ನಿಸ್ವಾರ್ಥ ಪ್ರೀತಿಗೆ ಈ ಪ್ರಪಂಚದಲ್ಲಿ ಯಾವುದೂ ಸರಿ ಹೊಂದಲ್ಲʼʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಎಂತಹ ಧೈರ್ಯಶಾಲಿ ಹೃದಯʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.