ಕರಾಚಿ,ಸೆ.4: ಇನ್ನೇನು ಗಣೇಶ ಹಬ್ಬ ಬರಲಿದ್ದು ತಯಾರಿಗಳು ದೇಶದೆಲ್ಲೆಡೆ ಜೋರಾಗಿ ನಡೆಯುತ್ತಿದೆ. ಈ ನಡುವೆ ಪಾಕಿಸ್ತಾನದ ಕರಾಚಿಯಲ್ಲಿ ಕೋಮು ಸೌಹಾರ್ದತೆ ಸಾರುವ ವಿಡಿಯೊವೊಂದು ವೈರಲ್ (Viral News) ಆಗುತ್ತಿದೆ. ಕರಾಚಿಯಲ್ಲಿರುವ ಮರಾಠಿ ಕುಟುಂಬವು ಗಣೇಶ ಚತುರ್ಥಿಯ ಹಬ್ಬಕ್ಕೆ ಸಿದ್ಧತೆಗಳನ್ನು ನಡೆಸುತ್ತಿದೆ. ಇಲ್ಲಿ ಮುಸ್ಲಿಂ ಕಲಾವಿದರೊಬ್ಬರು ಗಣಪತಿ ವಿಗ್ರಹಕ್ಕೆ ಅತ್ಯಂತ ಭಕ್ತಿ, ಶ್ರದ್ಧೆಯಿಂದ ಬಣ್ಣ ಬಳಿಯುತ್ತಿದ್ದು ಕೋಮು ಸೌಹಾರ್ದತೆಯ ಹೃದಯಸ್ಪರ್ಶಿ ಪ್ರದರ್ಶನ ಇದಾಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಹೃದಯಸ್ಪರ್ಶಿ ವೀಡಿಯೊವೊಂದು ಬಳಕೆದಾರರ ಗಮನ ಸೆಳೆದಿದೆ. ಇದರಲ್ಲಿ ಮುಸ್ಲಿಂ ಕಲಾವಿದನೊಬ್ಬ ನಗರದಲ್ಲಿ ವಾಸಿಸುವ ಮರಾಠಿ ಕುಟುಂಬಕ್ಕಾಗಿ ಗಣಪತಿ ವಿಗ್ರಹವನ್ನು ಚಿತ್ರಿಸುತ್ತಿರುವುದನ್ನು ತೋರಿಸಲಾಗಿದೆ.
ಅಮರ್ ಪ್ರಕಾಶ್ ಎಂಬ ಮರಾಠಿ ಮೂಲದ ವ್ಯಕ್ತಿ ಈ ವಿಡಿಯೋವನ್ನು ಶೇರ್ ಮಾಡಿ ಕೊಂಡಿದ್ದಾರೆ. ಕರಾಚಿಯ 'ಗಣೇಶ್ ಮಠ ಮಂದಿರ'ದಲ್ಲಿ ವಿಗ್ರಹವನ್ನು ಸಿದ್ಧಪಡಿಸಲಾಗುತ್ತಿದೆ. ಮುಸ್ಲಿಂ ಕಲಾವಿದನು ಬಿಳಿ ಬಣ್ಣದ ಗಣಪತಿ ವಿಗ್ರಹವನ್ನು ಎಚ್ಚರಿಕೆಯಿಂದ ಚಿತ್ರಿಸುತ್ತಿರುವುದು ಕಂಡುಬಂದಿದೆ.
ವಿಡಿಯೋ ನೋಡಿ:
ವೀಡಿಯೊವನ್ನು ಹಂಚಿಕೊಂಡ ಅವರು, "ಕರಾಚಿಯಲ್ಲಿ ಮಹಾರಾಷ್ಟ್ರ ಕುಟುಂಬದಿಂದ ನಡೆಸಲ್ಪಡುವ ದೇವಾಲಯವಾದ ಗಣೇಶ ಮಠ ಮಂದಿರದೊಳಗೆ ಗಣಪತಿ ಬಪ್ಪನನ್ನು ಚಿತ್ರಿಸುವ ಮುಸ್ಲಿಂ ಕಲಾವಿದ" ಎಂದು ಬರೆದಿದ್ದಾರೆ. ತಲೆಗೆ ಟೋಪಿ ಧರಿಸಿದ ಮುಸ್ಲಿಂ ಕಲಾವಿದನು ಗಣೇಶನ ಮೂರ್ತಿಗೆ ಸ್ಪ್ರೇ ಪೇಂಟ್ ಹಾಗೂ ಬ್ರಷ್ ಬಳಸಿ ಬಣ್ಣಗಳಿಂದ ಕಲಾತ್ಮಕವಾಗಿ ಅಲಂಕರಿಸುವುದು ವಿಡಿಯೋದಲ್ಲಿದೆ. ಕಲಾವಿದನ ಕುಂಚದಲ್ಲಿ ಅತೀ ಸುಂದರವಾಗಿ ಗಣಪತಿ ರಚನೆ ಮೂಡಿಬಂದಿದೆ.
ವಿಡಿಯೊದ ಕೊನೆಯಲ್ಲಿ "ಯಾರು ಹಿಂದೂ, ಯಾರು ಮುಸ್ಲಿಂ? ಬಪ್ಪನ ಶಕ್ತಿ ಮತ್ತು ಕರಾಚಿಯ ಸೌಂದರ್ಯ” ಎಂದು ಬರೆಯಲಾಗಿದ್ದು ನೆಟ್ಟಿಗರ ಮನ ಗೆದ್ದಿದೆ. ಈ ವಿಡಿಯೊಗೆ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದು "ಕಲೆ ಎಂಬುದು ನಂಬಿಕೆ ಮತ್ತು ಶ್ರೇಷ್ಠ ಕಲೆ ಧರ್ಮವನ್ನು ಮೀರಿದ್ದು" ಎಂದು ಬರೆದಿದ್ದಾರೆ. ಮತ್ತೊಬ್ಬರು ಮಾನವೀಯತೆಯೇ ಶ್ರೇಷ್ಠ ಧರ್ಮ ಎಂದು ಕಲಾವಿದನ ಸೌಹಾರ್ದತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.