ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nepal Floods: ಭೀಕರ ಪ್ರವಾಹಕ್ಕೆ ಸುತ್ತಮುತ್ತಲ ಕಟ್ಟಡಗಳೆಲ್ಲ ಕುಸಿದರೂ ಗಟ್ಟಿಯಾಗಿ ಉಳಿದ ಮನೆ; ವೈರಲ್‌ ವಿಡಿಯೊ ಮೂಲಕ ಕಾರಣ ವಿವರಿಸಿದ ತಜ್ಞರು

ನೇಪಾಳದಲ್ಲಿ ಭಾರಿ ನೀರು, ಬಂಡೆ, ಕೆಸರು ಹಾಗೂ ಮರಗಳೊಂದಿಗೆ ಬಂದ ದಿಢೀರ್‌ ಪ್ರವಾಹಕ್ಕೆ ಹಲವು ಕಟ್ಟಡಗಳು ಕುಸಿದರೂ, ಹಸಿರು ಬಣ್ಣದ ಮನೆಯೊಂದು ಸುರಕ್ಷಿತವಾಗಿ ಉಳಿದಿದೆ. ದೃಢವಾಗಿ ಉಳಿದಿದೆ. ಆರ್‌ಸಿಸಿ ಫ್ರೇಮ್, ಬಲಿಷ್ಠ ಕಂಬ–ಬೀಮ್–ಅಡಿಪಾಯದ ಜೋಡಣೆ ಹಾಗೂ ಮುಖ್ಯ ಪ್ರವಾಹದ ಮಾರ್ಗದಿಂದ ಸ್ವಲ್ಪ ದೂರದಲ್ಲಿದ್ದ ಸ್ಥಳ ಈ ಮನೆ ಉಳಿಯಲು ಪ್ರಮುಖ ಕಾರಣ ಎಂದು ತಜ್ಞರು ವಿವರಿಸಿದ್ದಾರೆ.

ನೇಪಾಳ ಪ್ರವಾಹಕ್ಕೆ ಜಗ್ಗದೆ ಉಳಿದ ಮನೆ

ಕಠ್ಮಂಡು, ಆ. 31: ನೇಪಾಳದ ಹಿಮಾಲಯ ಪ್ರದೇಶದ ದೂರದ ಭಾಗವೊಂದರಲ್ಲಿ ಭಾರಿ ಪ್ರಮಾಣದ ನೀರು, ಬೃಹತ್ ಬಂಡೆಗಳು, ಕೆಸರು ಹಾಗೂ ಬೇರುಸಹಿತ ಕಿತ್ತುಬಂದ ಮರಗಳು ಅಪಾಯಕಾರಿ ವೇಗದಲ್ಲಿ ಹರಿದು ಭಾರಿ ಅನಾಹುತ ಸೃಷ್ಟಿಸಿದೆ (Nepal Floods). ಪ್ರವಾಹದ ರಭಸಕ್ಕೆ ಸುತ್ತಮುತ್ತ ದೊಡ್ಡ–ಸಣ್ಣ ಕಟ್ಟಡಗಳು ನೆಲಸಮವಾಗುತ್ತಿದ್ದರೂ, ಹಸಿರು ಬಣ್ಣದ ಸಣ್ಣ ಮನೆಯೊಂದು ಹಾಗೆ ದೃಢವಾಗಿ ನಿಂತಿದೆ. ಸದ್ಯ ಕಟ್ಟಡ ಗಟ್ಟಿಯಾಗಿ ಉಳಿಯಲು ಕಾರಣವೇನು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಎಲ್ಲೆಡೆ ನೀರು ಆವರಿಸಿದ್ದರಿಂದ ಕುಟುಂಬದ ಸದಸ್ಯರು ಮನೆಯ ಬಾಲ್ಕನಿಯಲ್ಲಿ ಒಟ್ಟಾಗಿ ಕುಳಿತು, ತಮ್ಮ ಮನೆ ಕುಸಿಯದಿರಲಿ ಹಾಗೂ ಮತ್ತೊಂದು ದಿನವನ್ನು ಕಾಣುವಂತಾಗಲಿ ಎಂದು ಪ್ರಾರ್ಥಿಸುತ್ತಿದ್ದರು. ಅಚ್ಚರಿಯ ರೀತಿಯಲ್ಲಿ ಭೀಕರ ಪ್ರವಾಹದ ಹೊಡೆತಕ್ಕೂ ಜಗ್ಗದೆ ಮನೆ ಹಾಗೂ ಅದರಲ್ಲಿದ್ದ ಕುಟುಂಬ ಸುರಕ್ಷಿತವಾಗಿ ಉಳಿದಿದೆ.

ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭೀಕರ ಪ್ರವಾಹದ ಒತ್ತಡಕ್ಕೂ ಮನೆ ಕುಸಿಯದೆ ಉಳಿದಿದ್ದು ಹೇಗೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ತಜ್ಞರ ಪ್ರಕಾರ, ಇದು ಕೇವಲ ಅದೃಷ್ಟವಲ್ಲ; ಮನೆಯ ನಿರ್ಮಾಣ ವಿನ್ಯಾಸವೂ ಪ್ರಮುಖ ಕಾರಣ.

ಮನೆ ಉಳಿದಿದ್ದೇಕೆ?

Architecture Presentation ಎಂಬ ಎಕ್ಸ್‌ ಖಾತೆಯ ವಿವರಣೆಯ ಪ್ರಕಾರ, ನೇಪಾಳದ ಹಿಮಾಲಯ ಕಣಿವೆಗಳಲ್ಲಿನ ಹಲವು ಮನೆಗಳು ಬಲವರ್ಧಿತ ಕಾಂಕ್ರೀಟ್‌ ಚೌಕಟ್ಟು ಇಲ್ಲದೆ ಕಲ್ಲಿನ ಕಲ್ಲುಗಾರೆ ಬಳಸಿ ನಿರ್ಮಾಣವಾಗುತ್ತವೆ.

ವೈರಲ್‌ ವಿಡಿಯೊ ಇಲ್ಲಿದೆ:



ಸಾಮಾನ್ಯವಾಗಿ ಇಂತಹ ಮನೆಗಳನ್ನು ಮೇಲಿನಿಂದ ಬರುವ ಲಂಬ ಭಾರವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳ್ಳುತ್ತದೆ. ಆದರೆ ಪ್ರವಾಹದ ನೀರು, ಕೆಸರು ಹಾಗೂ ಬಂಡೆಗಳಂತಹ ಅಡ್ಡ ಒತ್ತಡ ಎದುರಾದಾಗ ಇವು ಕುಸಿಯುವ ಸಾಧ್ಯತೆ ಹೆಚ್ಚಿರುತ್ತದೆ.

ನೇಪಾಳ ಭೀಕರ ಪ್ರವಾಹದಿಂದ ಶಾಲೆ ಧ್ವಂಸ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1,643 ಮಕ್ಕಳ ಪ್ರಾಣ

ವೈರಲ್ ವಿಡಿಯೊದಲ್ಲಿರುವ ಮನೆ ರೀಇನ್‌ಫೋರ್ಸ್‌ಡ್ ಕಾಂಕ್ರೀಟ್ (RCC) ಫ್ರೇಮ್ ಮೇಲೆ ನಿರ್ಮಿಸಲಾಗಿದೆ. ಕಂಬಗಳು, ಬೀಮ್‌ಗಳು ಮತ್ತು ಅಡಿಪಾಯವನ್ನು ನಿರಂತರ ಉಕ್ಕಿನ ರಾಡ್‌ಗಳ ಮೂಲಕ ಪರಸ್ಪರ ಜೋಡಿಸಲಾಗಿದೆ. ಇದರಿಂದ ಇಡೀ ಮನೆ ಒಂದೇ ಗಟ್ಟಿಯಾದ ಚೌಕಟ್ಟಿನಂತೆ ಕಾರ್ಯನಿರ್ವಹಿಸಿದೆ.

ನೇಪಾಳದಲ್ಲಿ ಪ್ರವಾಹಕ್ಕೂ ಜಗ್ಗದ ಮನೆ:



ನೀರು ಮತ್ತು ಕೆಸರಿನ ಭಾರಿ ಪ್ರವಾಹ ಮನೆಗೆ ಅಪ್ಪಳಿಸಿದಾಗ, ಈ ಬಲವರ್ಧಿತ ಚೌಕಟ್ಟು ಅಡ್ಡ ಒತ್ತಡವನ್ನು ತಡೆದು, ಆ ಶಕ್ತಿಯನ್ನು ಅಡಿಪಾಯದ ಮೂಲಕ ನೆಲಕ್ಕೆ ವರ್ಗಾಯಿಸಲು ನೆರವಾಗಿದೆ. ಇದರ ಜತೆಗೆ ಮನೆ ನೇರವಾಗಿ ಪ್ರವಾಹದ ಮುಖ್ಯ ಹರಿವಿನ ಮಧ್ಯದಲ್ಲಿರಲಿಲ್ಲ ಎಂಬುದೂ ಮತ್ತೊಂದು ಪ್ರಮುಖ ಕಾರಣ.

ತಜ್ಞರ ವಿವರಣೆಯ ಪ್ರಕಾರ, ಬಂಡೆಗಳು ಮತ್ತು ಇತರ ಭಾರೀ ಅವಶೇಷಗಳು ಸಾಮಾನ್ಯವಾಗಿ ಪ್ರವಾಹದ ಆಳವಾದ ಮಧ್ಯಭಾಗದಲ್ಲಿ ಹೆಚ್ಚು ವೇಗವಾಗಿ ಸಾಗುತ್ತವೆ. ಈ ಮನೆ ಮುಖ್ಯ ಹರಿವಿನ ಮಾರ್ಗದಿಂದ ಸ್ವಲ್ಪ ಬದಿಯಲ್ಲಿ ಹಾಗೂ ತುಸು ಎತ್ತರದ ಪ್ರದೇಶದಲ್ಲಿತ್ತು.

ಮನೆಯ ಕಾಂಪ್ಯಾಕ್ಟ್ ಆಕಾರದಿಂದಾಗಿ ಪ್ರವಾಹದ ನೀರು ಮತ್ತು ಅವಶೇಷಗಳು ಮನೆಯ ಎರಡೂ ಬದಿಗಳಿಂದ ಹರಿದುಹೋಗಿವೆ. ನಂತರ ಜಮೆಯಾದ ಕೆಸರು ಸಹಜವಾಗಿ ಮುಂದಿನ ಪ್ರವಾಹದ ಅಲೆ ನೇರವಾಗಿ ಮನೆಗೆ ಅಪ್ಪಳಿಸುವುದನ್ನು ತಡೆದಿದೆ. ನೇಪಾಳದಲ್ಲಿ ಸಂಭವಿಸಿದ ಈ ಭೀಕರ ಫ್ಲ್ಯಾಶ್ ಫ್ಲಡ್ ದುರಂತದಲ್ಲಿ 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 3,000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.