ಮುಂಬೈ, ಅ. 1: ಇತ್ತೀಚೆಗೆ ಕ್ಯಾಬ್ ಚಾಲಕರಿಂದ ಹಲವು ಮಹಿಳೆಯರು ಕಿರುಕುಳ ಎದುರಿಸಿದ್ದಾರೆ. ಹೀಗಾಗಿ ಮಹಿಳೆಯರ ಆದ್ಯತೆಗಾಗಿ ಮೀಸಲಾದ ರ‍್ಯಾಪಿಡೋ ಪಿಂಕ್ ಆ್ಯಪ್ ಅನ್ನು ಹೆಚ್ಚಿನವರು ಅವಲಂಬಿಸಿದ್ದಾರೆ. ಆದರೆ ಮಹಾರಾಷ್ಟ್ರ ಮೂಲದ ಶಾಲಿನಿ ಎಂಬ ಮಹಿಳೆ ರ‍್ಯಾಪಿಡೋ ಪಿಂಕ್ ಆ್ಯಪ್ ಮೂಲಕ ರೈಡ್ ಬುಕ್ ಮಾಡಿದರೂ ಚಾಲಕಿಯ ಬದಲಿಗೆ ಚಾಲಕ ಬಂದಿದ್ದಾನೆ. ಅವರು ನಿರ್ದಿಷ್ಟವಾಗಿ ಮಹಿಳೆಯರಿಗಾಗಿಯೇ ಮೀಸಲಾದ ಸೇವೆಯನ್ನು ಬುಕ್ ಮಾಡಿದ್ದರಿಂದ ಚಾಲಕಿಯನ್ನು ನಿರೀಕ್ಷಿಸುತ್ತಿದ್ದರು ಎಂದು ಪೋಸ್ಟ್‌ನಲ್ಲಿ (Viral News) ಬರೆದುಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ವಿಡಿಯೊದಲ್ಲಿ, ಶಾಲಿನಿ, ತಾವು ಚಾಲಕಿಯನ್ನು ನಿರೀಕ್ಷಿಸಿ ರ‍್ಯಾಪಿಡೋ ಪಿಂಕ್ ರೈಡ್ ಬುಕ್ ಮಾಡಿದ್ದಾಗಿ ಹೇಳಿದ್ದಾರೆ. ಬುಕಿಂಗ್ ಪುಟದಲ್ಲಿ ಮಹಿಳೆಯೊಬ್ಬರ ಪ್ರೊಫೈಲ್ ಕೂಡ ತೋರಿಸಲಾಗಿತ್ತು. ಆದರೆ ತಮ್ಮ ಸ್ಥಳವನ್ನು ಖಚಿತಪಡಿಸಿಕೊಳ್ಳಲು ಚಾಲಕ ಕರೆ ಮಾಡಿದ್ದು ತಮ್ಮ ಸ್ಥಳಕ್ಕೆ ಬಂದು ಕಾಯುತ್ತಿದ್ದರು ಎಂದಿದ್ದಾರೆ.
ವಿಡಿಯೊ ನೋಡಿ:
ಚಾಲಕಿಯ ಜಾಗದಲ್ಲಿ ಚಾಲಕ ಇರುವುದನ್ನು ಗಮನಿಸಿ ಶಾಲಿನಿ ಪ್ರಶ್ನಿಸಿದಾಗ, ಆತ ತಾನು "ಗೇ" ಎಂದು ಹೇಳಿಕೊಂಡಿದ್ದಾನೆ. ಇದರಿಂದ ಕಂಗಾಲಾದ ಶಾಲಿನಿ ರೈಡ್ ಕ್ಯಾನಲ್ಸ್ ಮಾಡಿದ್ದಾರೆ. ರೈಡ್ ರದ್ದುಗೊಳಿಸಿದ್ದಕ್ಕೆ ಸಂಸ್ಥೆಯು ಗ್ರಾಹಕಿಗೆ 15 ರೂಪಾಯಿ ಕ್ಯಾನ್ಸಲೇಷನ್ ಫೀಸ್ ವಿಧಿಸಿದೆ.
ಶಾಲಿನಿ ಈ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದು, ʼʼಈ ವ್ಯಕ್ತಿ ನನ್ನ ಮುಖವನ್ನು ನೋಡಿದ್ದಾನೆ. ನಾನು ಯಾವ ಕಟ್ಟಡದಲ್ಲಿ ವಾಸಿಸುತ್ತಿದ್ದೇನೆ ಎಂಬುದು ಅವನಿಗೆ ತಿಳಿದಿದೆ. ಮಹಿಳೆಯರ ಸುರಕ್ಷತೆ ಹೆಸರಿನಲ್ಲಿ ಇಂತಹ ಸೇವೆಗಳನ್ನು ಕೇವಲ ಲಾಭದ ಉದ್ದೇಶಕ್ಕಾಗಿ ಮಾಡಲಾಗಿದೆʼʼ ಎಂದು ಇನ್‌ಸ್ಟಾಗ್ರಾಮ್ ವಿಡಿಯೊ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸ್ಪಂದಿಸಿರುವ ರ‍್ಯಾಪಿಡೋ ಸಂಸ್ಥೆಯೂ ಪಿಂಕ್ ರೈಡ್‌ಗಳು ಕೇವಲ ಚಾಲಕಿಯರಿಗೆ ಮೀಸಲಾಗಿವೆ. ಈ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದೆ.