ರೈಲ್ವೆ ಹಳಿ ಬಳಿ ರೀಲ್ಸ್ ಮಾಡಲು ಹೋಗಿ ದುರಂತ ಅಂತ್ಯ ಕಂಡ ಬಾಲಕ
ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್ ಗೀಳಿಗೆ ಬಿದ್ದ ಯುವ ಜನತೆ ತಮ್ಮ ಪ್ರಾಣವನ್ನು ಪಣಕಿಟ್ಟು ವಿಡಿಯೊ ಮಾಡುತ್ತಿದ್ದಾರೆ. ರೀಲ್ಸ್ ಮಾಡಿ ಹುಚ್ಚಾಟ ಮೆರೆಯುವ ಯುವಕ ಯುವತಿಯರ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ವಿಡಿಯೊದಲ್ಲಿ ಯುವಕನೊಬ್ಬನು ರೈಲ್ವೆ ಹಳಿ ಬಳಿ ನಿಂತು ರೀಲ್ಸ್ ಮಾಡಲು ಹೋಗಿದ್ದು, ಕೊನೆಗೆ ಅಪಘಾತದಿಂದ ಸಾವನ್ನಪ್ಪಿದ್ದಾನೆ. ಈ ಅಪಾಯಕಾರಿ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಖಾರವಾಗಿಯೇ ಕಮೆಂಟ್ ಮಾಡಿದ್ದಾರೆ.

-

ಭುವನೇಶ್ವರ: ಇತ್ತೀಚೆಗೆ ರೀಲ್ಸ್ (Reel) ಹುಚ್ಚಾಟ ಮಿತಿಮೀರಿ ಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲೆಲ್ಲೋ ನಿಂತು ಅಪಾಯಕಾರಿ ಸ್ಟಂಟ್ಸ್ ಮಾಡುತ್ತಾರೆ. ಹೀಗೆ ಮಾಡುವ ವೇಳೆ ಸಾಕಷ್ಟು ಜನರು ಪ್ರಾಣ ಕಳೆದುಕೊಂಡ ನಿದರ್ಶನಗಳೂ ಉಂಟು. ಇಂತಹದ್ದೇ ಒಂದು ಘಟನೆ ಒಡಿಶಾ (Odisha)ದ ಪುರಿ(Puri) ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಹಳಿಯ ಮೇಲೆ ರೀಲ್ಸ್ ಮಾಡುತ್ತಿದ್ದ 15 ವರ್ಷದ ಬಾಲಕ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ. ಮೃತ ಬಾಲಕನನ್ನು ಮಂಗಲಘಾಟ್ (Mangalaghat) ನಿವಾಸಿ ವಿಶ್ವಜೀತ್ ಸಾಹು (Vishwajeet Sahu) ಎಂದು ಗುರುತಿಸಲಾಗಿದ್ದು, ತನ್ನ ತಾಯಿಯೊಂದಿಗೆ ದಕ್ಷಿಣ ಕಾಳಿ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಈ ದರ್ಘಟನೆ ನಡೆದಿದೆ.
ಮಂಗಳವಾರ ದಕ್ಷಿಣ ಕಾಳಿ ದೇವಾಲಯಕ್ಕೆ ತಾಯಿಯೊಂದಿಗೆ ಭೇಟಿ ನೀಡಿ ವಾಪಸಾಗುವಾಗ ಜನಕದೇವಪುರ (Janakdevpur) ರೈಲ್ವೆ ನಿಲ್ದಾಣದ ಬಳಿ ಸೋಷಿಯಲ್ ಮೀಡಿಯಾಕ್ಕಾಗಿ ರೀಲ್ಸ್ ಮಾಡಲು ವಿಶ್ವಜೀತ್ ನಿಂತಿದ್ದಾನೆ. ರೀಲ್ಸ್ ಮಾಡಲು ಕಬ್ಬಿಣದ ರೈಲ್ವೆ ಬ್ರಿಡ್ಜ್ ಹತ್ತಿದ್ದ ಬಾಲಕ, ಹಳಿಯ ಬದಿಯಲ್ಲಿ ನಿಂತು ರೈಲು ಬರುತ್ತಿದ್ದಂತೆ ಸೆಲ್ಫಿ ವಿಡಿಯೊ ಮಾಡಲು ಆರಂಭಿಸಿದ್ದಾನೆ. ಬಳಿಕ ಹಿಂಬದಿಯಿಂದ ಬಂದ ರೈಲು ವಿಶ್ವಜೀತ್‌ಗೆ ಡಿಕ್ಕಿ ಹೋಡೆದಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಡಿಕ್ಕಿ ರಭಸಕ್ಕೆ ವಿಶ್ವಜೀತ್ ಹಾರಿಬಿದ್ದು ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ.
ಅಪಘಾತದ ದೃಶ್ಯ:
A 15-year-old boy died after being hit by a train while he was filming a reel on a railway track in Odisha’s Puri.
— SK Chakraborty (@sanjoychakra) October 23, 2025
The incident occurred at the Janakdevpur railway station on Tuesday.
Vishwajeet Sahu, a resident of Mangalaghat, visited the Dakshinkali temple with his mother.
On… pic.twitter.com/tWouD4LQTM
ಈ ಸುದ್ದಿಯನ್ನು ಓದಿ: Deepavali Festival: 14 ಮಕ್ಕಳ ಪಾಲಿಗೆ ಕತ್ತಲಾದ ದೀಪಾವಳಿ; ಕಾರ್ಬೈಟ್ ಗನ್‌ನಿಂದಾಗಿ ದೃಷ್ಟಿ ಕಳೆದುಕೊಂಡ ಪುಟಾಣಿಗಳು
ಘಟನೆಯ ನಂತರ, ಒಡಿಶಾ ರೈಲ್ವೆ ಪೊಲೀಸರು (GRP) ಸ್ಥಳಕ್ಕೆ ಧಾವಿಸಿ ಬಾಲಕನ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ.
ಇಂತದ್ದೇ ಘಟನೆ ಆಗಸ್ಟ್‌ನಲ್ಲಿಯೂ ಸಂಭವಿಸಿತ್ತು. ಗಂಜಾಂ ಜಿಲ್ಲೆಯ ಬರಹಂಪುರ ಮೂಲದ 22 ವರ್ಷದ ಯೂಟ್ಯೂಬರ್ ಒಬ್ಬ, ಒಡಿಶಾದ ಕೋರಾಪುಟ್ ಜಿಲ್ಲೆಯ ದುಡುಮಾ ಜಲಪಾತದ ಬಳಿ ರೀಲ್ ಮಾಡಲು ಹೋಗಿ ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದ. ಪ್ರವಾಸಿಗರು ಹಾಗೂ ಸ್ಥಳೀಯರು ಆತನನ್ನು ರಕ್ಷಿಸಲು ಎಷ್ಟೇ ಪ್ರಯತ್ನಿಸಿದರೂ ಎಲ್ಲವೂ ವಿಫಲವಾಯಿತು.
ಬಳಿಕ ಮಚಕುಂದ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹಲವು ದಿನಗಳವರೆಗೆ ಶೋಧ ಕಾರ್ಯ ನಡೆಸಿದರೂ, ಆತನ ಸುಳಿವು ಪತ್ತೆಯಾಗಿರಲೇ ಇಲ್ಲ.