ಹೈದರಾಬಾದ್, ಜ. 18: ಇತ್ತೀಚೆಗೆ ಬರ್ತ್‌ಡೇ ಆಚರಿಸಿಕೊಳ್ಳುವುದು ಟ್ರೆಂಡ್ ಆಗಿದೆ. ಅದರಲ್ಲೂ ಆಪ್ತರು, ಸ್ನೇಹಿತರ ಹುಟ್ಟುಹಬ್ಬವನ್ನು ನಾವು ಅದ್ಧೂರಿಯಾಗಿ ಆಚರಿಸುತ್ತೇವೆ. ಆದರೆ ಇಲ್ಲೊಂದು ಕುಡುಂಬ ತಮ್ಮ ಮನೆಯಲ್ಲಿ ಕೆಲಸಕ್ಕೆ ಇರುವ ವ್ಯಕ್ತಿಯೊಬ್ಬರ ಬರ್ತ್‌ಡೇ ಆಚರಿಸಿ ಮಾದರಿಯಾಗಿದ್ದಾರೆ. ಇದು ಮನುಷ್ಯತ್ವ ಮತ್ತು ಪ್ರೀತಿ ಇನ್ನೂ ಜೀವಂತವಾಗಿ ಉಳಿದಿದೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿಯಾಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಹೈದರಾಬಾದ್‌ನ ಕುಟುಂಬವೊಂದು ತಮ್ಮ ಮನೆಯಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವ ಬಾಣಸಿಗರ 70ನೇ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಕೆಲವೊಮ್ಮೆ, ಸಂತೋಷವು ಅತ್ಯಂತ ಸರಳ ರೀತಿಯಲ್ಲಿ ಬರುತ್ತದೆ ಎನ್ನುವುದಕ್ಕೆ ದೃಶ್ಯವೇ ಸಾಕ್ಷಿ. ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಈ ವಿಡಿಯೊ ವೀಕ್ಷಕರಲ್ಲಿ ಭಾವನಾತ್ಮಕ ಸ್ಪರ್ಶ ಮೂಡಿಸಿದೆ. ರಾಮ್‌ಜಿ ಬಾಬಾ ಎನ್ನುವ 70 ವರ್ಷದ ವ್ಯಕ್ತಿ ಕಳೆದ ಹಲವು ದಶಕಗಳಿಂದ ಈ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ಇದೀಗ 70ನೇ ಹುಟ್ಟುಹಬ್ಬದಂದು, ಮಾಲಕರು ಕೇಕ್ ತರಿಸಿ, ಮೇಣದಬತ್ತಿ ಹಚ್ಚಿ ಮನೆಯ ಸದಸ್ಯರಂತೆಯೇ ಅವರನ್ನು ಸಂಭ್ರಮದಿಂದ ಸತ್ಕಾರ ಮಾಡಿದ್ದಾರೆ.
ವಿಡಿಯೊ ನೋಡಿ:
ವಿಡಿಯೊದಲ್ಲಿ, ರಾಮ್‌ಜಿ ಬಾಬಾ ಹುಟ್ಟುಹಬ್ಬದ ಕೇಕ್ ಕತ್ತರಿಸಿ ನಿಧಾನವಾಗಿ ಮೇಣದ ಬತ್ತಿಗಳನ್ನು ಊದುತ್ತಿರುವುದನ್ನು ಕಾಣಬಹುದು. ಮುಖವು ನಾಚಿಕೆಯಿಂದ ಕೂಡಿದ್ದರೂ ಅವರ ಸುಂದರವಾದ ನಗು ನೋಡುಗರನ್ನು ಸೆಳೆದಿದೆ. ಅವರು ಅನೇಕ ವರ್ಷಗಳಿಂದ ಈ ಕುಟುಂಬ ದೊಂದಿಗೆ ಸಂಬಂಧ ಹೊಂದಿದ್ದು ಇಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ನವ ಜೋಡಿಗಳಿಗೆ ಶುಭ ಹಾರೈಸುತ್ತಿದ್ದಾಗಲೇ ದಿಢೀರ್ ಆಗಿ ಕುಸಿದ ವೇದಿಕೆ
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಹೆಚ್ಚಿನ ಬಳಕೆದಾರರು ಇದನ್ನು ಭಾವನಾತ್ಮಕ, ಹೃದಯಸ್ಪರ್ಶಿ ಎಂದು ಕರೆದಿದ್ದಾರೆ. ರಾಮ್‌ಜಿ ಬಾಬಾ ಅವರ ಕೊಡುಗೆಯನ್ನು ಗುರುತಿಸಿದ್ದಕ್ಕಾಗಿ ಮತ್ತು ಅವರನ್ನು ಘನತೆ ಮತ್ತು ಪ್ರೀತಿಯಿಂದ ಆಚರಿಸಿದ್ದಕ್ಕಾಗಿ ಅನೇಕರು ಕುಟುಂಬವನ್ನು ಹೊಗಳಿದ್ದಾರೆ.
ಒಬ್ಬರು, "ನಾವು ಅವರಿಂದ ಪ್ರೀತಿಸಲು ಕಲಿಯುತ್ತೇವೆ" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "40 ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಇದು ಶುದ್ಧ ಸಮರ್ಪಣೆ" ಎಂದು ಬರೆದುಕೊಂಡಿದ್ದಾರೆ. ದೊಡ್ಡ ಉಡುಗೊರೆಗಳಿಗಿಂತ "ಗೌರವ" ಮತ್ತು "ಗುರುತಿಸುವಿಕೆ" ಮನುಷ್ಯನಿಗೆ ಎಷ್ಟು ಮುಖ್ಯ ಎಂಬುದನ್ನು ಈ ವಿಡಿಯೊ ಜಗತ್ತಿಗೆ ತೋರಿಸಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.