ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾಬೂಲ್ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆಸಿದ ಪಾಕಿಸ್ತಾನ: ಭೀಕರ ಸ್ಫೋಟದ ವಿಡಿಯೊ ಇಲ್ಲಿದೆ

Pakistan Conducts Airstrike: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಮಾದಕವಸ್ತು ಪುನರ್ವಸತಿ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ದೊಡ್ಡ ಸ್ಫೋಟವುಂಟಾಗಿ ಬೆಂಕಿಯ ಜ್ವಾಲೆ ಮೇಲೇರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ, ಈ ಆರೋಪವನ್ನು ಪಾಕಿಸ್ತಾನ ನಿರಾಕರಿಸಿದೆ.

ಕಾಬೂಲ್‌ನಲ್ಲಿ ಬೆಂಕಿಯ ಜ್ವಾಲೆ ಮೇಲೇರುತ್ತಿರುವ ದೃಶ್ಯ

ಕಾಬೂಲ್, ಮಾ.17: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಮಾದಕವಸ್ತು ಪುನರ್ವಸತಿ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ (Pakistan Conducts Airstrike) ನಡೆಸಿದ ನಂತರ ದೊಡ್ಡ ಸ್ಫೋಟದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ. ಎಕ್ಸ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ಆಸ್ಪತ್ರೆಯ ಮೇಲೆ ಜ್ವಾಲೆಗಳು ಮತ್ತು ಹೊಗೆ ಮೇಲೇರುತ್ತಿರುವುದನ್ನು ನೋಡಬಹುದು.

ಮತ್ತೊಂದು ವಿಡಿಯೊದಲ್ಲಿ, ಭದ್ರತಾ ಪಡೆಗಳು ಮೃತದೇಹಗಳನ್ನು ಹೊರತರುತ್ತಿರುವುದನ್ನು ಮತ್ತು ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಹೆಣಗಾಡುತ್ತಿರುವುದನ್ನು ತೋರಿಸಲಾಗಿದೆ.

ಕಾಬೂಲ್ ಆಸ್ಪತ್ರೆ ಮೇಲೆ ಪಾಕ್ ದಾಳಿ: 400 ಸಾವು

ಪಾಕಿಸ್ತಾನ ನಡೆಸಿದ ದಾಳಿಯಲ್ಲಿ 400 ಜನರು ಮೃತಪಟ್ಟಿದ್ದು, 250 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ಇದು ಅಫ್ಘಾನಿಸ್ತಾನದ ಮೇಲಿನ ಅತ್ಯಂತ ಮಾರಕ ದಾಳಿ ಎಂದು ವರದಿಯಾಗಿದೆ.

ವಿಡಿಯೊ ವೀಕ್ಷಿಸಿ:





ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರಾಟ್, ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಸ್ಥಳೀಯ ಸಮಯ ರಾತ್ರಿ 9 ಗಂಟೆ ಸುಮಾರಿಗೆ 2,000 ಹಾಸಿಗೆಗಳಿರುವ ಆಸ್ಪತ್ರೆಯ ಮೇಲೆ ದಾಳಿ ನಡೆದಿದೆ ಎಂದು ಹೇಳಿದರು. ಪಾಕಿಸ್ತಾನವು ಆಸ್ಪತ್ರೆಗಳು ಮತ್ತು ನಾಗರಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಭಯಾನಕ ಕೃತ್ಯಗಳನ್ನು ನಡೆಸುತ್ತಿದೆ ಎಂದು ಅಫಘಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಆರೋಪಿಸಿದ್ದಾರೆ.

ನಾವು ಈ ಅಪರಾಧವನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಅಂತಹ ಕೃತ್ಯವು ತತ್ವಗಳಿಗೆ ವಿರುದ್ಧವಾಗಿದ್ದು, ಮಾನವೀಯತೆಯ ವಿರುದ್ಧದ ಅಪರಾಧವೆಂದು ಪರಿಗಣಿಸುತ್ತೇವೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಫ್ಘಾನಿಸ್ತಾನದ ತಾಲಿಬಾನ್ ಸೇನಾ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ ಪಾಕಿಸ್ತಾನ

ಕಾಬೂಲ್ ಆಸ್ಪತ್ರೆ ದಾಳಿಯನ್ನು ನಿರಾಕರಿಸಿದ ಪಾಕ್

ಕಾಬೂಲ್‌ನಲ್ಲಿ ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳುವ ಮೂಲಕ ಅಫ್ಘನ್‌ನ ಆರೋಪಗಳನ್ನು ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಅವರ ವಕ್ತಾರ ಮೊಶರಫ್ ಜೈದಿ ತಳ್ಳಿಹಾಕಿದರು. ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲಾಗಿದೆ ಎಂದು ಪಾಕ್ ಹೇಳಿದೆ.

ಪಾಕಿಸ್ತಾನ-ಅಫ್ಘಾನಿಸ್ತಾನ ಸಂಘರ್ಷ

ದೇಶದಲ್ಲಿ ದಾಳಿಗಳನ್ನು ನಡೆಸುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಂತಹ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲು ಅಫ್ಘಾನಿಸ್ತಾನ ವಿಫಲವಾಗಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದೆ.

ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾದ ನಡುವೆ ನಡೆಯುತ್ತಿರುವ ಗಂಭೀರ ಪರಿಸ್ಥಿತಿಯನ್ನು ಇದು ಸೂಚಿಸುತ್ತದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಇರಾನ್‌ನಲ್ಲಿ ಯುದ್ಧ ಭುಗಿಲೆದ್ದಿರುವ ಸಮಯದಲ್ಲಿಯೇ ಈ ವೈಮಾನಿಕ ದಾಳಿಗಳು ನಡೆದಿವೆ .

ಅಮೆರಿಕ ಮತ್ತು ಇಸ್ರೇಲ್ ಟೆಹರಾನ್ ಮೇಲೆ ದಾಳಿ ನಡೆಸಿ 86 ವರ್ಷದ ಸುಪ್ರೀಂ ನಾಯಕ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ ಇರಾನ್‌ನಲ್ಲಿ ಯುದ್ಧ ಭುಗಿಲೆದ್ದಿತು. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕವಾಗಿ ಎಲ್ಲಾ ದೇಶಗಳ ಮೇಲೂ ಪರಿಣಾಮ ಬೀರಿದೆ.