ಲಖನೌ: ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸುಹೇಲ್‌ದೇವ್ ಸ್ವಾಭಿಮಾನ್ ಪಕ್ಷದ (SSP) ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ರಾಜ್‌ಭರ್ ಅವರಿಗೆ ಪಕ್ಷದ ಕಾರ್ಯಕರ್ತನೊಬ್ಬ ವೇದಿಕೆಯ ಮೇಲೆ ಹಾರ ಹಾಕಿದ ನಂತರ ಕಪಾಳಮೋಕ್ಷ ಮಾಡಿದ್ದಾನೆ. ಹಲ್ಲೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಘಟನೆಯನ್ನು ಪಿಡಿಎ ಮೇಲಿನ ದೌರ್ಜನ್ಯ ಮತ್ತು ಅವಮಾನದ ಮತ್ತೊಂದು ಉದಾಹರಣೆ ಎಂದು ಖಂಡಿಸಿದ್ದಾರೆ ಮತ್ತು ಇದರಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಜಲಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆಶಾಪುರ ಗ್ರಾಮದಲ್ಲಿ ಮಹಾರಾಜ ಸುಹೇಲ್‌ದೇವ್ ಅವರ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಜಫರಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ರಾಜ್‌ಭರ್ ಐಕಾನ್ ಪ್ರತಿಮೆಯನ್ನು ಸ್ಥಾಪಿಸಲು 'ಭೂಮಿ ಪೂಜೆ' ನೆರವೇರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೌ ಜಿಲ್ಲೆಯ ಮೂಲದ ಮಹೇಂದ್ರ ರಾಜ್‌ಭರ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು.
ವಿಡಿಯೊ ಇಲ್ಲಿದೆ ನೋಡಿ...
ಪಕ್ಷದ ಕಾರ್ಯಕರ್ತ ಬ್ರಿಜೇಶ್ ರಾಜ್‌ಭರ್ ಮೊದಲು ಮಹೇಂದ್ರ ರಾಜ್‌ಭರ್ ಅವರಿಗೆ ಹಾರ ಹಾಕಿ ನಂತರ ಸಾರ್ವಜನಿಕರ ಮುಂದೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ಇದನ್ನು ನೋಡಿ ಅಲ್ಲಿದ್ದವರು ಶಾಕ್ ಆಗಿದ್ದಾರೆ. ಘಟನೆಯ ನಂತರ, ಮಹೇಂದ್ರ ರಾಜ್‌ಭರ್ ಮಾತನಾಡಿ, ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಈ ದಾಳಿಯ ಮಾಡುವ ಪ್ಲ್ಯಾನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಓಂ ಪ್ರಕಾಶ್ ರಾಜ್‌ಭರ್ ಅಥವಾ ಎಸ್‌ಬಿಎಸ್‌ಪಿ ಇನ್ನೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಘಟನೆಯ ನಂತರ, ಮಹೇಂದ್ರ ರಾಜ್‌ಭರ್ ಸ್ಥಳದಿಂದ ಹೊರಟು ಜಲಾಲ್‌ಪುರ ಪೊಲೀಸ್ ಠಾಣೆಯಲ್ಲಿ ಬ್ರಿಜೇಶ್ ರಾಜ್‌ಭರ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರನ್ನು ದಾಖಲಿಸಿಕೊಂಡ ಜಲಾಲ್‌ಪುರ ಎಸ್‌ಎಚ್‌ಒ ತ್ರಿವೇಣಿ ಸಿಂಗ್, ಘಟನೆಯ ವೈರಲ್ ವಿಡಿಯೊವನ್ನು ತನಿಖೆಯ ಭಾಗವಾಗಿ ಪರಿಶೀಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ರೈಲು ಪ್ರಯಾಣದ ವೇಳೆ ಪಿಜ್ಜಾ ಆರ್ಡರ್ ಮಾಡಿದ ವಿದೇಶಿ ಯುವಕ; ಮುಂದೆ ಆಗಿದ್ದೇನು ಗೊತ್ತಾ?
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ದಾಳಿಯಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಇದು ಪಿಡಿಎ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.