ನವದೆಹಲಿ, ಡಿ. 28: ಬಹುತೇಕ ಪ್ರಯಾಣಿಕರು ದೂರದ ಊರುಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿನ ಸೌಂದರ್ಯ ಕಂಡು ಖುಷಿ ಪಡುವ ಜೊತೆಗೆ ನೆನಪಿಗೆಂದು ಕಲ್ಲಿನ ಮೇಲೆ ನೆಲದ ಮೇಲೆ ತಮ್ಮ ಹೆಸರನ್ನು ಕೆತ್ತನೆ ಮಾಡುವವರು ಇದ್ದಾರೆ. ಶಾಲಾ ಕಾಲೇಜಿನ ಮೇಜೀನ ಮೇಲೆ, ಸಾರ್ವಜನಿಕ ಉದ್ಯಾನವನದ ಆಸನ ಮೇಲೆ, ಸಾರ್ವಜನಿಕ ಶೌಚಾಲಯಗಳಿಂದ ಹಿಡಿದು ಐತಿಹಾಸಿಕ ಸ್ಮಾರಕದ ಗೋಡೆಗಳ ಮೇಲೆಲ್ಲ ಹೆಸರು ಬರೆಯುವ ಹವ್ಯಾಸ ಬಹುತೇಕ ಜನರಿಗೆ ಇದೆ. ತಮ್ಮ ಪ್ರೀತಿ ಪಾತ್ರರ ಹೆಸರು, ಲವ್ ಮೆಸೇಜ್ ಹೀಗೆ ನಾನಾ ತರಹದ ಬರವಣಿಗೆಯನ್ನು ನಾವು ಕಾಣಬಹುದು. ಅಂತೆಯೇ ವಿಮಾನ ಒಂದರಲ್ಲಿ (Viral News) ಪ್ರಯಾಣ ಮಾಡಿದ್ದ ಪ್ರಯಾಣಿಕರೊಬ್ಬರು ತಮ್ಮ ಹೆಸರನ್ನು ವಿಮಾನದ ಕಿಟಕಿಯ ಗ್ಲಾಸ್ ಮೇಲೆ ಕೆತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಈ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಈ ಫೋಟೊ ವೈರಲ್ ಆಗಿದ್ದು ನಾಗರಿಕರ ಪ್ರಜ್ಞೆಯ ಬಗ್ಗೆ ಕಳವಳವನ್ನು ಹುಟ್ಟು ಹಾಕುವಂತೆ ಮಾಡಿದೆ. ಈ ಬಗ್ಗೆ ನೆಟ್ಟಿಗರು ಕೂಡ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸಾಮಾನ್ಯವಾಗಿ ವಿಮಾನ ಪ್ರಯಾಣದಲ್ಲಿ ಫ್ಲೈಟ್ ವಿಳಂಬವಾಗಿ ಬರುವುದು, ಆಸನದ ವ್ಯವಸ್ಥೆ ದುರಸ್ತಿಯಿಂದ ಕೂಡಿರುವುದು, ಇತ್ಯಾದಿ ನಿರ್ವಹಿಸದಿರುವುದನ್ನು ನಾವು ವಿಡಿಯೋದಲ್ಲಿ ಕಂಡಿದ್ದೇವೆ. ಆದರೆ ವಿಮಾನದ ಕಿಟಕಿಯ ಗ್ಲಾಸ್ ಮೇಲೆ ಹೆಸರು ಕೆತ್ತಿದ್ದ ಘಟನೆ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಶೌಚಾಲಯ, ಬಸ್ ಎಲ್ಲ ಬಿಟ್ಟು ಈಗ ವಿಮಾನದ ಮೇಲೂ ಬೇಜವಾಬ್ದಾರಿತನ ದಿಂದ ವಸ್ತುಗಳ ಮೇಲೆ ಕೆತ್ತನೆ ಮಾಡುತ್ತಾರೆ ಎಂದರೆ ನಿಜಕ್ಕೂ ಅಚ್ಚರಿ ಎಂಬಂತಿದೆ.
ಇತ್ತೀಚೆಗಷ್ಟೇ ರೆಡ್ಡಿಟ್ ಬಳಕೆದಾರರೊಬ್ಬರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ವಿಮಾನ ದೊಳಗೆ ಸೀಟಿನ ಬಳಿಯ ಕಿಟಕಿಯ ಗಾಜಿನ ಮೇಲೆ ಮಾನ್ವಿಕ್ ಎಂಬ ಹೆಸರು ಸ್ಪಷ್ಟವಾಗಿ ಕೆತ್ತಲಾಗಿದೆ. ಈ ಫೋಟೊ ಹಂಚಿಕೊಂಡ ವ್ಯಕ್ತಿಯು ಇದು ವಿಮಾನ ಸಂಸ್ಥೆಯ ತಪ್ಪಲ್ಲ ಪ್ರಯಾಣಿ ಕರದ್ದೇ ತಪ್ಪು ಪ್ರಯಾಣಿಕರ ಬೇಜವಾಬ್ದಾರಿತನ ದಿಂದ ಸ್ಥಳಗಳನ್ನು ಗಲೀಜು ಮಾಡಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ಫೋಟೊ ಹಂಚಿಕೊಂಡಿದ್ದ ವ್ಯಕ್ತಿಯು ತಮ್ಮ ರೆಡಿಟ್ ಖಾತೆಯಲ್ಲಿ ಕೆಲವು ವಿಚಾರವನ್ನು ಕೂಡ ಬರೆದಿದ್ದಾರೆ. ಯಾರೋ ಮೂರ್ಖ ವಿಮಾನದ ಕಿಟಕಿಯ ಗಾಜಿನ ಮೇಲೆ ತನ್ನ ಹೆಸರನ್ನು ಬರೆದು ಬಿಟ್ಟಿದ್ದಾನೆ. ಸಾರ್ವಜನಿಕ ಶೌಚಾಲಯಗಳು ಮತ್ತು ಇತರ ಪ್ರವಾಸಿ ಸ್ಥಳಗಳ ಗೋಡೆಗಳ ಮೇಲೆ ಹೆಸರನ್ನು ಬರೆಯುವ ಹವ್ಯಾಸ ಇರುವುದನ್ನು ನಾವು ನೋಡಿದ್ದೇನೆ ಆದರೆ ವಿಮಾನದಲ್ಲಿ ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.ಈ ಬಗ್ಗೆ ಇತರ ಬಳಕೆದಾರರು ನಾನಾ ತರನಾಗಿ ಕಾಮೆಂಟ್ ಮಾಡಿದ್ದಾರೆ.
ಬಳಕೆದಾರರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ಒಂದು ಗಂಭೀರ ಸಮಸ್ಯೆಯಾಗಿದ್ದು ವಿಮಾನ ಸಂಸ್ಥೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇದನ್ನು ಯಾರು ಬರೆದಿದ್ದಾರೆ ಎಂದು ವಿಮಾನ ದೊಳಗಿನ ಸಿಸಿ ಕ್ಯಾಮರಾ ಫೂಟೆಜ್ ನಲ್ಲಿ ಪತ್ತೆ ಹಚ್ಚಿ ಸಂಬಂಧ ಪಟ್ಟ ವ್ಯಕ್ತಿಯನ್ನು ವಿಚಾರಿಸ ಬೇಕು. ಇದನ್ನು ಬರೆದ ವ್ಯಕ್ತಿಗೆ ಇನ್ನೆಂದಿಗೂ ವಿಮಾನ ಹಾರಾಟ ಮಾಡದಂತೆ ನಿಷೇಧ ಹೇರಬೇಕು ಎಂದು ವ್ಯಕ್ತಿಯೊಬ್ಬರು ಆಗ್ರಹಿಸಿದ್ದಾರೆ. ಸಾಮಾನ್ಯವಾಗಿ ವಿಮಾನದೊಳಗೆ ವಸ್ತುಗಳನ್ನು ಕೊಂಡೊಯ್ಯುವಾಗ ನಿಷೇಧ ಇರಲಿದೆ. ಅದರಲ್ಲೂ ಚೂಪಾದ ಮಾರಕ ವಸ್ತು ಕೊಂಡೊಯ್ಯು ವಂತಿಲ್ಲ. ಅಂದ ಮೇಲೆ ಗ್ಲಾಸ್ ಮೇಲೆ ಆತ ಹೆಸರು ಬರೆದದ್ದಾದರೂ ಹೇಗೆ ಎಂಬ ಬಗ್ಗೆ ವಿಮಾನ ಸಂಸ್ಥೆ ತನಿಖೆ ಮಾಡಬೇಕಿದೆ ಎಂದು ಮತ್ತೊಬ್ಬ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.