ನವದೆಹಲಿ,ಆ.17: ಇತ್ತೀಚೆಗೆ ಶಿಕ್ಷಣವಂತರಲ್ಲೂ ನಾಗರಿಕ ಪ್ರಜ್ಞೆಯ ಕೊರತೆ ಕಾಡುತ್ತಿದೆ. ಸಾರ್ವಜನಿಕ ಸ್ಥಳದಲ್ಲೂ ಬೇಜವ್ದಾರಿ ವರ್ತನೆ ತೋರಿ ಹುಚ್ಚಾಟ ಮೆರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಪ್ರವಾಸಿಗರ ಗುಂಪೊಂದು ಎಚ್ಚರಿಕೆ ಫಲಕ ಹಾಕಿದ್ದರೂ ಜಲಾವೃತ ಪ್ರದೇಶಕ್ಕೆ ಜಿಗಿದು ನಿಯಮ ಉಲ್ಲಂಘನೆ (Viral News) ಮಾಡಿದ್ದಾರೆ. ದೇಶದ ಪ್ರಮುಖ ಐತಿಹಾಸಿಕ ಸ್ಮಾರಕವಾದ ದೆಹಲಿಯ ಇಂಡಿಯಾ ಗೇಟ್ ಆವರಣದಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರು ಇಲ್ಲಿನ ನಿಯಮ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ನೀರಿಗೆ ಇಳಿದಿದ್ದಾರೆ
"ನೀರಿಗೆ ಇಳಿಯಬೇಡಿ" ಎಂದು ಇಂಡಿಯಾ ಗೇಟ್ ಆವರಣದಲ್ಲಿ ಸ್ಪಷ್ಟ ಎಚ್ಚರಿಕೆ ಫಲಕ ಹಾಕಲಾಗಿದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಫಲಕವನ್ನು ಪ್ರದರ್ಶಿಸಲಾಗಿದ್ದರೂ, ಪ್ರವಾಸಿಗರು ಅದನ್ನು ನಿರ್ಲಕ್ಷಿಸಿ ನೀರಿಗೆ ಇಳಿಯುವ ಮೂಲಕ ಎಂಜಾಯ್ ಮಾಡಿದ್ದಾರೆ. ಈ ಘಟನೆಯು ಮತ್ತೊಮ್ಮೆ ಮೂಲಭೂತ ನಾಗರಿಕ ಪ್ರಜ್ಞೆ ಮತ್ತು ಸಾರ್ವಜನಿಕ ಸ್ಥಳಗಳ ಕಡೆಗೆ ಜನರ ಜವಾಬ್ದಾರಿಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿದೆ.
ವಿಡಿಯೋ ನೋಡಿ:
ವೈರಲ್ ಆದ ವಿಡಿಯೊದಲ್ಲಿ ಇಂಡಿಯಾ ಗೇಟ್ ಆವರಣದಲ್ಲಿ ನೀರಿನ ಕೊಳಕ್ಕೆ ಜನರು ಇಳಿದು ಕಾಲುಗಳನ್ನು ನೆನೆಸುತ್ತಾ ಕುಳಿತಿದ್ದಾರೆ. ಕೆಲವರು ನೀರಿಗೆ ಇಳಿದು ಈಜಲು ಯತ್ನಿಸುತ್ತಿರುವುದು ಮತ್ತು ಕಾರಂಜಿಗಳ ಮೇಲೇರಿ ವೀಡಿಯೋ ಚಿತ್ರೀಕರಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ಸ್ಪಷ್ಟ ನಿರ್ಬಂಧದ ಹೊರತಾಗಿಯೂ, ವೈರಲ್ ಆಗಿರುವ ಈ ದೃಶ್ಯ ಬಳಕೆದಾರರನ್ನು ಕೆರಳಿಸಿದೆ. ಅನೇಕರು ಈ ನಡವಳಿಕೆಯನ್ನು ಟೀಕಿಸುತ್ತಿದ್ದಾರೆ.
ನಿಯಮಗಳನ್ನು ಗಾಳಿಗೆ ತೂರಿ ಕೆಲ ಯುವಕರು ಕಾರಂಜಿಯ ಮೇಲೆಯೇರಿ ವೀಡಿಯೋ ರೀಲ್ಸ್ ಚಿತ್ರೀಕರಣ ಮಾಡುತ್ತಿದ್ದಾರೆ. ಸೂಚನೆಗಳನ್ನು ಪಾಲಿಸದಿದ್ದಕ್ಕಾಗಿ ದಂಡ ವಿಧಿಸಲು ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ. ಭಾರತೀಯರಲ್ಲಿ ಕನಿಷ್ಠ "ನಾಗರಿಕ ಪ್ರಜ್ಞೆ"ಇಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಬಳಕೆದಾರರೊಬ್ಬರು "ಭಾರತೀಯರು ಎಂದಿಗೂ ನಾಗರಿಕ ಪ್ರಜ್ಞೆಯನ್ನು ಕಲಿಯುವುದಿಲ್ಲ" ಎಂದು ಹೇಳಿದ್ದಾರೆ.ಮತ್ತೊಬ್ಬರು ಇವರಿಗೆ ನಾಚಿಕೆಯಾಗಬೇಕು, ಇಂತವರಿಗೆ ಯಾವಾಗ ಬುದ್ಧಿ ಬರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.