ಲಖನೌ: ಮಹಿಳೆಯು ಮಗುವಿಗೆ ಜನ್ಮ ಕೊಡುವ ಮೂಲಕ ತಾಯಿಯಾಗಿ ಮರುಜನ್ಮ ಪಡೆಯುತ್ತಾಳೆ ಎಂಬ ಮಾತಿದೆ. ಅನೇಕ ತಾಯಂದಿರು ಹೆರಿಗೆ ನೋವಿನ ಸಂದರ್ಭದಲ್ಲಿ ಮರುಜನ್ಮ ಪಡೆದಿದ್ದೂ ಇದೆ. ಇಂತಹ ಸಂದರ್ಭಗಳಲ್ಲಿ ಪತಿ, ಕುಟುಂಬದವರು ಆಕೆಗೆ ಧೈರ್ಯ ತುಂಬುವುದು ಕೂಡ ಬಹಳ ಮುಖ್ಯ. ಆದರೆ ಕೆಲವರಿಗೆ ಗರ್ಭಿಣಿಯರ ಪ್ರಸವ ನೋವಿಗೆ ಸ್ಪಂದಿಸುವ ಮನ ಸ್ಥಿತಿಯೂ ಇರಲಾದರು. ಇತ್ತೀಚೆಗಷ್ಟೇ ತನ್ನ ಗರ್ಭಿಣಿ ಸೊಸೆಯ ಮೇಲೆ ವೃದ್ಧ ಮಹಿಳೆಯೊಬ್ಬಳು ಕ್ರೂರವಾಗಿ ನಡೆದುಕೊಂಡ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಆಸ್ಪತ್ರೆಯಲ್ಲಿ (Uttar Pradesh’s Prayagraj hospital) ನಡೆದಿದೆ. ಅತ್ತೆಯು ತನ್ನ ಸೊಸೆಯ ಹೆರಿಗೆಯ ಸಮಯದಲ್ಲಿ ಕಾಳಜಿಯಿಂದ ನೋಡಿಕೊಳ್ಳುವ ಬದಲು ಆಕೆಯನ್ನೇ ಬೈದು, ಆಕ್ರೋಶಗೊಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಸೊಸೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಆಕೆ ತನ್ನ ನೋವು ಹೊರ ಹಾಕುತ್ತಿರುವುದು ಕಾಣಬಹುದು. ಆಸ್ಪತ್ರೆಯ ಆಪರೇಷನ್ ನಡೆಯುವ ಸ್ಥಳದಲ್ಲಿ ಕುಟುಂಬಸ್ಥರು ಮತ್ತು ಆಕೆಯ ಪತಿ ಕೂಡ ಇದ್ದರು. ಸೊಸೆಯ ಅರಚಾಟ ಕೇಳಲಾಗದೆ ಅತ್ತೆ ಆಕೆಯನ್ನು ಸೊಸೆಯನ್ನು ವ್ಯಂಗ್ಯ ಮಾಡಿ ಬೈಯುತ್ತಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಅತ್ತೆಯ ನಡವಳಿಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೊ ಇಲ್ಲಿದೆ:
ವೈದ್ಯರು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಮಾಡಲು ಸಲಹೆ ನೀಡಿದರೂ ವೃದ್ಧೆ ನಾರ್ಮಲ್ ಡೆಲಿವರಿ ಮಾಡಲು ವೈದ್ಯರಿಗೆ ಹೇಳಿದಳು. ಬಳಿಕ ನೋವಿನಿಂದ ಒದ್ದಾಡುತ್ತಿದ್ದ ತನ್ನ ಸೊಸೆಯನ್ನು ಕಂಡ ಅತ್ತೆಯು ಆಕೆಯ ಬಳಿ ಬಂದು, ಏಯ್ ಬಾಯಿ ಮುಚ್ಚು, ಇಲ್ಲವಾದರೆ ನಾನು ನಿನ್ನ ಗಂಟಲು ಹಿಡಿದು ಬಾಯಿ ಮುಚ್ಚಿಸುತ್ತೇನೆ. ನೀನು ಹೀಗೆ ಅಳುತ್ತಲೇ ಇದ್ದರೆ ಮಗು ಹೊರಗೆ ಬರುವುದು ಹೇಗೆ, ಅಷ್ಟು ಕೂಗುವುದ್ಯಾಕೆ ಬಾಯಿ ಮುಚ್ಚು ಎಂದು ಗದರಿದ್ದಾಳೆ. ಬಳಿಕ ಸೊಸೆ ತನ್ನ ಮಗನ ಕೈ ಹಿಡಿದದ್ದನ್ನು ನೋಡಿ ಅವನ ಕೈಯನ್ನು ಬಿಡು ಎಂದು ಜೋರು ಮಾಡಿದ್ದ ದೃಶ್ಯಗಳು ವಿಡಿಯೊದಲ್ಲಿ ಕಾಣಬಹುದು.
ಈ ವಿಡಿಯೊವನ್ನು ಸ್ತ್ರೀರೋಗ ತಜ್ಞೆ ಡಾ. ನಾಜ್ ಫಾತಿಮಾ (Dr Naaz Fatima) ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ತಾಯಿಗೆ ಧೈರ್ಯ ತುಂಬಬೇಕು. ಪ್ರೀತಿಯಿಂದ ಮಾತನಾಡಬೇಕು ಎಂದು ಬರೆದಿದ್ದಾರೆ. ಈ ವಿಡಿಯೊಗೆ ಆನ್‌ಲೈನ್‌ನಲ್ಲಿ ಹಲವು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ʼಹೆರಿಗೆ ಸಮಯದಲ್ಲಿ ಅವರ ಮಗ ತನ್ನ ಹೆಂಡತಿಯ ಕೈ ಹಿಡಿದುಕೊಂಡಿರುವುದನ್ನು ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ" ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮಹಿಳೆಯನ್ನು ಅಗೌರವಿಸುವುದನ್ನು ಮತ್ತು ಯಾರೂ ಪ್ರಶ್ನೆ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ. ಹಿರಿಯರು ಇಂತಹ ಸಂದರ್ಭದಲ್ಲಿ ಜತೆಯಾಗಿ ಇರಬೇಕು. ಅದನ್ನು ಬಿಟ್ಟು ಹೀಗೆ ಮಾಡುವುದು ಸರಿಯಲ್ಲ ಎಂದು ಮತ್ತೊಬ್ಬರು ಟೀಕಿಸಿದ್ದಾರೆ.