ಶಿಮ್ಲಾ, ಜೂ. 10: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಉದ್ದೇಶದಿಂದ ಅನೇಕರು ಅಪಾಯಕಾರಿ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಮಧ್ಯ ರಸ್ತೆಯಲ್ಲಿ ಸ್ಟಂಟ್ ಮಾಡುವುದು, ಕಿರಿದಾದ ಪ್ರದೇಶದಲ್ಲಿ ರೀಲ್ಸ್ ಮಾಡುವುದು ಹೀಗೆ...ಇದಕ್ಕೆ ಸಾಕ್ಷಿ ಎಂಬಂತೆ ಪ್ರಕೃತಿ ಸೌಂದರ್ಯ ಸವಿಯಲು ಹೋದ ಪ್ರವಾಸಿಗರು ಕೊಚ್ಚಿ ಹೋದ ಘಟನೆ ಹಿಮಾಚಲ ಪ್ರದೇಶದ ಪಾರ್ವತಿ ನದಿಯಲ್ಲಿ ನಡೆದಿದೆ. ನದಿಯ ದಂಡೆಯಲ್ಲಿ ಪ್ರವಾಸಿಗರು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ನೀರಿನ ಹರಿವು ಹೆಚ್ಚಾಗಿ ಕೊಚ್ಚಿಕೊಂಡು ಹೋಗಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಪ್ರಕೃತಿ ಸೌಂದರ್ಯ ಸವಿಯಲು ಹೋಗಿ ಅಪಾಯಕ್ಕೆ ಸಿಲುಕುವ ಅನೇಕ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೀಗ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮಣಿಕರನ್ ಬಳಿ ಹರಿಯುವ ಪಾರ್ವತಿ ನದಿಯ ಬಳಿ ಪ್ರವಾಸಿಗರು ಕೊಚ್ಚಿಕೊಂಡು ಹೋಗಿದ್ದಾರೆ. ಒಂದೇ ಕುಟುಂಬದ ಮೂವರು ಮಂದಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ನೀರಿಗೆ ಬಿದ್ದಿದ್ದು ಪ್ರಬಲ ಹರಿವಿಗೆ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಇವರು ಪಾರಾಗಿದ್ದಾರೆ.
ವಿಡಿಯೊ ನೋಡಿ:
ಒಂದೇ ಕುಟುಂಬದ ಮೂವರು ಪೂಜ್ಯ ಮಣಿಕರಣ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ಪಂಜಾಬ್‌ನಿಂದ ಆಗಮಿಸಿದ್ದರು. ಪ್ರಾರ್ಥನೆ ಸಲ್ಲಿಸಿದ ನಂತರ, ಅವರು ಫೋಟೊ ತೆಗೆಯಲೆಂದು ಪಾರ್ವತಿ ನದಿಯ ದಡಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಸಮತೋಲನ ಕಳೆದುಕೊಂಡು ವೇಗವಾಗಿ ಹರಿಯುವ ನೀರಿಗೆ ಬಿದ್ದಿದ್ದಾರೆ.
ಬೆಂಗಳೂರಿನಲ್ಲಿ 4 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್; ಬಂಧನದ ವೇಳೆ ಹೈಡ್ರಾಮಾ
ಪ್ರವಾಸಿಗರು ನದಿಯಲ್ಲಿ ಕೊಚ್ಚಿಹೋಗುತ್ತಿರುವುದನ್ನು ಕಂಡ ತಕ್ಷಣ ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಜೋರಾಗಿ ಕಿರುಚಿ ಆತಂಕ ವ್ಯಕ್ತಪಡಿಸಿದ್ದು, ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾರ್ಯ ಪ್ರವೃತ್ತರಾದ ಸ್ಥಳೀಯ ನಿವಾಸಿಗಳು ಅವರನ್ನು ಸುರಕ್ಷಿತವಾಗಿ ದಡಕ್ಕೆ ಎಳೆದಿದ್ದಾರೆ. ಸ್ಥಳೀಯ ಆಡಳಿತ ಮತ್ತು ಪೊಲೀಸ್ ತಂಡಗಳು ಸಹ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದ್ದು ಮೂವರು ಪ್ರವಾಸಿಗರನ್ನು ನೀರಿನಿಂದ ಯಶಸ್ವಿಯಾಗಿ ರಕ್ಷಿಸಲಾಗಿದೆ.