ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fraud Case: ಕೆಲಸಕ್ಕೆ ಹೋಗದೆಯೇ ಎರಡೆರಡು ಕಂಪನಿಗಳಿಂದ ಮಹಿಳೆಗೆ 37 ಲಕ್ಷ ರೂ. ಸಂಬಳ! ಭಾರೀ ಅಕ್ರಮ ಬಯಲು

Rajasthan govt officer fakes wife's job: ಮಹಿಳೆಯೊಬ್ಬರು ಎರಡು ವರ್ಷಗಳ ಕಾಲ ಏನೂ ಕೆಲಸ ಮಾಡದೆಯೇ ಎರಡು ಕಂಪನಿಗಳಿಂದ 37.54 ಲಕ್ಷ ರೂ. ಸಂಬಳ ಗಳಿಸಿದ್ದಾರೆ. ರಾಜಸ್ಥಾನದ ರಾಜ್‌ಕಾಂಪ್ ಇನ್ಫೋ ಸರ್ವೀಸಸ್‌ನ ಐಟಿ ಇಲಾಖೆಯ ಜಂಟಿ ನಿರ್ದೇಶಕ ಪ್ರದ್ಯುಮನ್ ದೀಕ್ಷಿತ್, ತಮ್ಮ ಪತ್ನಿ ಮೂಲಕ ಅಕ್ರಮ ಪಾವತಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಜೈಪುರ: ನಾನೇನು ಕೆಲಸ ಮಾಡದೆ ಕುಳಿತುಕೊಂಡಲ್ಲೇ ದುಡ್ಡು ಬರಲಿ ಎಂದು ಬಹುತೇಕರು ಹಗಲು ಕನಸು ಕಾಣುತ್ತಾರೆ. ಈ ಕನಸು ಇಲ್ಲೊಬ್ಬ ಮಹಿಳೆಗೆ ನಿಜವಾಗಿದೆ. ಮಹಿಳೆಯೊಬ್ಬರು ಎರಡು ವರ್ಷಗಳ ಕಾಲ ಏನೂ ಕೆಲಸ ಮಾಡದೆಯೇ ಎರಡು ಕಂಪನಿಗಳಿಂದ 37.54 ಲಕ್ಷ ರೂ. ಸಂಬಳ ಗಳಿಸಿದ್ದಾಳೆ. ರಾಜಸ್ಥಾನ (Rajasthan) ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ (Viral News).

ವರದಿಯ ಪ್ರಕಾರ, ರಾಜ್‌ಕಾಂಪ್ ಇನ್ಫೋ ಸರ್ವೀಸಸ್‌ನ ಐಟಿ ಇಲಾಖೆಯ ಜಂಟಿ ನಿರ್ದೇಶಕ ಪ್ರದ್ಯುಮನ್ ದೀಕ್ಷಿತ್, ತಮ್ಮ ಪತ್ನಿ ಪೂನಂ ದೀಕ್ಷಿತ್ ಮೂಲಕ ಅಕ್ರಮ ಪಾವತಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಪೂನಂ ದೀಕ್ಷಿತ್ ಅವರನ್ನು ಎರಡು ಖಾಸಗಿ ಸಂಸ್ಥೆಗಳಾದ ಓರಿಯನ್‌ಪ್ರೊ ಸೊಲ್ಯೂಷನ್ಸ್ ಮತ್ತು ಟ್ರೀಜೆನ್ ಸಾಫ್ಟ್‌ವೇರ್ ಲಿಮಿಟೆಡ್‌ನ ಉದ್ಯೋಗಿ ಎಂದು ಉಲ್ಲೇಖಿಸಲಾಗಿತ್ತು. ಇವೆರಡೂ ಸರ್ಕಾರಿ ಟೆಂಡರ್‌ಗಳನ್ನು ಪಡೆದಿವೆ.

ರಾಜ್‌ಕಾಂಪ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಲಹಾ ಸಂಸ್ಥೆಯಾಗಿದ್ದು, ರಾಜಸ್ಥಾನ ಸರ್ಕಾರದ ಸಂಪೂರ್ಣ ಒಡೆತನದಲ್ಲಿದೆ, ಇದು ವಿವಿಧ ಸಂಸ್ಥೆಗಳಿಗೆ ಟೆಂಡರ್‌ಗಳನ್ನು ನೀಡುತ್ತದೆ. ಪ್ರದ್ಯುಮನ್ ತನ್ನ ಹುದ್ದೆಯನ್ನು ಬಳಸಿಕೊಂಡು ಓರಿಯನ್‌ಪ್ರೊ ಮತ್ತು ಇತರ ಸಂಸ್ಥೆಗಳಿಗೆ ಸರ್ಕಾರಿ ಟೆಂಡರ್‌ಗಳನ್ನು ಪಡೆಯಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಟೆಂಡರ್‌ಗಳನ್ನು ಅಂಗೀಕರಿಸಿದ್ದಕ್ಕೆ ಪ್ರತಿಯಾಗಿ, ಪ್ರದ್ಯುಮನ್ ತನ್ನ ಪತ್ನಿಯನ್ನು ನೇಮಿಸಿಕೊಳ್ಳಲು ಮತ್ತು ಮಾಸಿಕ ಸಂಬಳವನ್ನು ನೀಡುವಂತೆ ಎರಡೂ ಕಂಪನಿಗಳಿಗೆ ನಿರ್ದೇಶನ ನೀಡಿದ್ದರು.

ಇದನ್ನೂ ಓದಿ: Viral News: ಎಲ್ಲಿ ನೋಡಿದರಲ್ಲಿ ಕಾಂಡೋಮ್ಸ್‌... ಮೆಟ್ರೋ ನಿಲ್ದಾಣದ ಈ ಫೊಟೋ ಫುಲ್ ವೈರಲ್

ಕಳೆದ ವರ್ಷ ಸೆಪ್ಟೆಂಬರ್ 6 ರಂದು ರಾಜಸ್ಥಾನ ಹೈಕೋರ್ಟ್ ನೀಡಿದ ಆದೇಶದ ಆಧಾರದ ಮೇಲೆ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಈ ವರ್ಷ ಜುಲೈ 3 ರಂದು ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿತು. ಜನವರಿ 2019 ರಿಂದ ಸೆಪ್ಟೆಂಬರ್ 2020 ರ ನಡುವೆ ಐದು ಬ್ಯಾಂಕ್ ಖಾತೆಗಳ ಮೂಲಕ ಓರಿಯನ್‌ಪ್ರೊ ಸೊಲ್ಯೂಷನ್ಸ್ ಮತ್ತು ಟ್ರೀಜೆನ್ ಸಾಫ್ಟ್‌ವೇರ್ ಲಿಮಿಟೆಡ್‌ನಿಂದ ಪೂನಂ 37,54,405 ರೂ. ಅಕ್ರಮ ಪಾವತಿಗಳನ್ನು ಪಡೆದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಅವಧಿಯಲ್ಲಿ ಪೂನಂ ಈ ಕಚೇರಿಗಳಿಗೆ ಎಂದಿಗೂ ಭೇಟಿ ನೀಡಿಲ್ಲದಿದ್ದರೂ, ಹಣವನ್ನು ಸಂಬಳ ರೂಪದಲ್ಲಿ ಪಾವತಿ ಮಾಡಲಾಗಿದೆ.

ಪ್ರದ್ಯುಮನ್ ತನ್ನ ಪತ್ನಿಯ ಖಾತೆಗಳಿಗೆ ತಿಂಗಳಿಗೆ ಸುಮಾರು 1.60 ಲಕ್ಷ ರೂ.ಗಳನ್ನು ಕಿಕ್‌ಬ್ಯಾಕ್ ಆಗಿ ಜಮಾ ಮಾಡುವಂತೆ ವ್ಯವಸ್ಥೆ ಮಾಡಿದ್ದ ಎನ್ನಲಾಗಿದೆ. ಪಾವತಿಗಳು ನಿಜವೆಂದು ತೋರಿಸಲು ಅವನು ತನ್ನ ಪತ್ನಿಯ ನಕಲಿ ಹಾಜರಾತಿ ವರದಿಗಳನ್ನು ವೈಯಕ್ತಿಕವಾಗಿ ಅನುಮೋದಿಸಿದ್ದಾನೆ ಎಂದು ಕಂಡುಬಂದಿದೆ. ತನಿಖೆಯಲ್ಲಿ ಪೂನಂ ಎರಡು ಕಂಪನಿಗಳಿಂದ ಏಕಕಾಲದಲ್ಲಿ ಸಂಬಳ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಅವರು ಫ್ರೀಲ್ಯಾನ್ಸಿಂಗ್ ಸೋಗಿನಲ್ಲಿ ಟ್ರೀಜೆನ್‌ನಿಂದ ಪಾವತಿಗಳನ್ನು ಪಡೆಯುತ್ತಿದ್ದರು ಮತ್ತು ಓರಿಯನ್‌ಪ್ರೊದಲ್ಲೂ ಉದ್ಯೋಗದಲ್ಲಿರುವುದಾಗಿ ನಂಬಿಸಿದ್ದರು.

ಕಂಪನಿಯ ದಾಖಲೆಗಳು ಮತ್ತು ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಿದ ನಂತರ, ಅಕ್ಟೋಬರ್ 17 ರಂದು ಔಪಚಾರಿಕ ಪ್ರಕರಣ ದಾಖಲಿಸಲು ಎಸಿಬಿಗೆ ಸಾಕಷ್ಟು ಪುರಾವೆಗಳು ದೊರೆತವು. ವರದಿಗಳ ಪ್ರಕಾರ, ಪ್ರದ್ಯುಮ್ನ, ಅವರ ಪತ್ನಿ ಮತ್ತು ಇತರ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಡಿಎಸ್ಪಿ ನೀರಜ್ ಗುರ್ನಾನಿ ಪ್ರಸ್ತುತ ಪ್ರಕರಣದ ತನಿಖೆಯನ್ನು ಮುನ್ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.