ಬೆಂಗಳೂರು, ಡಿ. 17: ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಊಟಕ್ಕಾಗಿ ಹೊಟೇಲ್, ರೆಸ್ಟೋರೆಂಟ್ ಮೊರೆ ಹೋಗಬೇಕಾಗುತ್ತದೆ. ಇತ್ತೀಚಿಗೆ ಕೆಲವು ಹೋಟೆಲ್‌ಗಳು ಸ್ವಚ್ಛತೆ ವಿಚಾರದಲ್ಲಿ ಎಡವುದು ಸಾಮಾನ್ಯ ಎಂಬಂತಾಗಿದೆ. ಈ ಬಗ್ಗೆ ಗ್ರಾಹಕರಿಂದಲೂ ದೂರುಗಳು ಕೇಳಿ ಬರುತ್ತಲೇ ಇರುತ್ತದೆ. ಅದೇ ರೀತಿ ಕರ್ನಾಟಕದ ರೆಸ್ಟೋರೆಂಟ್ ಒಂದರಲ್ಲಿ ಸಿಬ್ಬಂದಿಯೊಬ್ಬರು ಗ್ಲೌಸ್ ಬಳಸದೆ ಬರೀ ಕೈಯಲ್ಲಿ ರಾಗಿ ಮುದ್ದೆ ಉಂಡೆ ಮಾಡಿ ಗ್ರಾಹಕರಿಗೆ ಬಡಿಸುತ್ತಿರುವ ವಿಡಿಯೊ ವೈರಲ್ (Viral Video) ಆಗಿದೆ. ರೆಸ್ಟೋರೆಂಟ್ ಸಿಬ್ಬಂದಿ ನೈರ್ಮಲ್ಯ ಕಾಯ್ದುಕೊಳ್ಳದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಕೈಗಳನ್ನು ಬಳಸಿ ರಾಗಿ ಮುದ್ದೆಯನ್ನು ಗ್ರಾಹಕರ ತಟ್ಟೆಗಳಿಗೆ ನೇರವಾಗಿ ಹಾಕುತ್ತಿರುವ ದೃಶ್ಯವನ್ನು ಕಾಣಬಹುದು. ಇದು ಸಾಮಾನ್ಯವೆಂದು ಮೇಲ್ನೋಟಕ್ಕೆ ತೋರು ಬರುತ್ತಿದ್ದರೂ ಕೂಡ ಸ್ವಚ್ಛತೆ ಮರೆತು ಬರೀ ಕೈಯಲ್ಲಿ ರಾಗಿ ಮುದ್ದೆಯನ್ನು ಮುಟ್ಟಿ ಕೀಟಾಣುಗಳನ್ನು ಕೂಡ ಸೇರಿಸಿ ಗ್ರಾಹಕರಿಗೆ ಉಣಬಡಿಸುತ್ತಿದ್ದಾನೆ ಎಂಬ ನೆಲೆಯಲ್ಲಿ ಅನೇಕ ಬಳಕೆದಾರರು ಈ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊ ನೋಡಿ:
ವೈರಲ್ ಆದ ವಿಡಿಯೊದಲ್ಲಿ ಹೊಟೇಲ್ ಒಂದರಲ್ಲಿ ನಾಲ್ಕೈದು ಗ್ರಾಹಕರು ರಾಗಿ ಮುದ್ದೆಗಾಗಿ ಕಾಯುತ್ತಿರುವ ದೃಶ್ಯ ಕಾಣಬಹುದು. ಊಟದ ಬಟ್ಟಲಿಗೆ ಸಾರು, ಚಟ್ನಿ ಮೊದಲೇ ಬಡಿಸಲಾಗಿತ್ತು. ಬಳಿಕ ರೆಸ್ಟೋರೆಂಟ್ ಸಿಬ್ಬಂದಿ ಬಿಸಿ ಬಿಸಿ ರಾಗಿ ಮುದ್ದೆಯ ದೊಡ್ಡ ಹಿಟ್ಟಿನ ಉಂಡೆ ತರುತ್ತಾನೆ. ಅದನ್ನು ಕೈಯಲ್ಲಿ ನಾದಿಕೊಳ್ಳುತ್ತಾ ಸಣ್ಣ ಸಣ್ಣ ಉಂಡೆ ಮಾಡುತ್ತಾನೆ. ಬಳಿಕ ಗ್ರಾಹಕರ ತಟ್ಟೆಗೆ ಬಡಿಸುತ್ತಾ ಹೋಗುವ ದೃಶ್ಯವು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಹಂಚಿಕೊಂಡ ಕೆಲವೇ ಗಂಟೆಯಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ಈ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಳಕೆದಾರರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಗಿ ಮುದ್ದೆ ತಿನ್ನದವರು ಕೂಡ ಈಗ ಬಡಿಸುವ ಶೈಲಿ ಕಂಡು ವ್ಯಂಗ್ಯ ಮಾಡುತ್ತಿರುವುದು ಹಾಸ್ಯಾಸ್ಪದ. ಬರೀ ಐದು ಸೆಕೆಂಡುಗಳ ವಿಡಿಯೊ ನೋಡುವವರು ಕೂಡ ಈ ವಿಚಾರ ತಿಳಿಸುವ ತಜ್ಞರಾಗಿದ್ದಾರೆ. ಆ ಸಿಬಬದಿಯದ್ದು ಯಾವುದೆ ತಪ್ಪಿಲ್ಲ. ಇದುವೆ ಸರಿಯಾದ ಕ್ರಮ ಎಂದು ಕಮೆಂಟ್ ಹಾಕಿದ್ದಾರೆ.
ನನ್ನ ಸಂಬಳ ನನಗೆ ಸಾಕು; ಸರ್ಕಾರಿ ಕಚೇರಿ ಎದುರಲ್ಲಿ "ಲಂಚ ಬೇಡ" ಬೋರ್ಡ್ ಹಾಕಿದ ದಕ್ಷ ಅಧಿಕಾರಿ
ಇದು ತಲೆಮಾರುಗಳಿಂದಲೂ ಸೇವಿಸುವ ಆರೋಗ್ಯಯುತ ಆಹಾರ. ರೈತರು ಕೂಡ ತಮ್ಮ ಮನೆಯಲ್ಲಿ ಈ ಮುದ್ದೆಯನ್ನು ಶತಮಾನಗಳಿಂದ ಹೀಗೆಯೇ ಬಡಿಸಿಕೊಂಡು ತಿನ್ನುತ್ತಿದ್ದಾರೆ. ನೈರ್ಮಲ್ಯ ಮಾನದಂಡಗಳನ್ನು ಪಾಲಿಸಿಲ್ಲ ಎಂದು ಭಾವಿಸುವುದೇ ತಪ್ಪು? ಈ ಬಗ್ಗೆ ಕೊಂಕು ಮಾತನಾಡುವವರು ನಮ್ಮ ನಾಡಿನ ಸಾಂಸ್ಕೃತಿ ಬಗ್ಗೆ ಅರಿವಿಲ್ಲದ ಅನಕ್ಷರಸ್ಥರಾಗಿದ್ದಾರೆ. ನಿಮಗೆ ಅರ್ಥವಾಗದ ಆಹಾರವನ್ನು ಅಣಕಿಸುವುದು ಬೌದ್ಧಿಕ ಬಡತನ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ನೆಟ್ಟಿಗರೊಬ್ಬರು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪಿಜ್ಜಾ ಹಿಟ್ಟನ್ನು ಕೈಯಿಂದ ಬೆರೆಸುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದು ದಯವಿಟ್ಟು ಇಟಾಲಿಯನ್ ರೆಸ್ಟೋರೆಂಟ್‌ನಲ್ಲಿ ಹೊಸದಾಗಿ ತಯಾರಿಸಿದ ಪಿಜ್ಜಾವನ್ನು ಎಂದಿಗೂ ತಿನ್ನಬೇಡಿ. ಇದು ಅನೈರ್ಮಲ್ಯ ಎಂದು ಬರೆದಿದ್ದಾರೆ. ಸದ್ಯ ಈ ರಾಗಿ ಮುದ್ದೆಯ ವಿಡಿಯೊ ಪ್ರಸ್ತುತ ಇರುವ ನಮ್ಮ ಸಂಸ್ಕೃತಿ, ಆಧುನಿಕ ನೈರ್ಮಲ್ಯದ ಮಾನದಂಡಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬದಲಾಗುತ್ತಿರುವ ನಿರೀಕ್ಷೆಗಳ ಬಗ್ಗೆ ಹೊಸ ಚರ್ಚೆ ಹುಟ್ಟು ಹಾಕುತ್ತಿದೆ.