ಪಟನಾ: 74 ವರ್ಷದ ನಿವೃತ್ತ ಸೇನಾ ಸಿಬ್ಬಂದಿಯೊಬ್ಬರು ಜೀವಂತವಾಗಿರುವಾಗಲೇ ತಮ್ಮ ಅಂತ್ಯಕ್ರಿಯೆಯನ್ನು ಆಯೋಜಿಸುವ ಘಟನೆ ಬಿಹಾರದ (Bihar) ಗಯಾದಲ್ಲಿ ನಡೆದಿದೆ. ಮೋಹನ್ ಲಾಲ್ ಅವರ ಕುಟುಂಬ ಮತ್ತು ಸ್ನೇಹಿತರು ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಿದರು. ಬಿಳಿ ಬಟ್ಟೆಯನ್ನು ಧರಿಸಿ, ಅವರನ್ನು ದಹನ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಈ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ.
ನೆರೆಹೊರೆಯವರು ಮತ್ತು ಸ್ಥಳೀಯರು ಇದು ನಿಜವಾದ ಅಂತ್ಯಕ್ರಿಯೆ ಎಂದು ನಂಬಿ, ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಆದರೆ ಅವರು ಅಂತ್ಯಕ್ರಿಯೆಯ ಸ್ಥಳವನ್ನು ತಲುಪಿದಾಗ, ಮೋಹನ್ ಲಾಲ್ ಇದ್ದಕ್ಕಿದ್ದಂತೆ ಎದ್ದು ಇಡೀ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಬಹಿರಂಗಪಡಿಸಿದರು. ತನ್ನ ಬಗ್ಗೆ ಯಾರು ನಿಜವಾಗಿಯೂ ಕಾಳಜಿ ವಹಿಸುತ್ತಾರೆ ಎಂದು ನೋಡಲು ಅವರು ಹಾಗೆ ಮಾಡಿದ್ದಾಗಿ ತಿಳಿಸಿದರು.
ಗಯಾ ಜಿಲ್ಲೆಯ ಕೊಂಚಿ ಗ್ರಾಮದಲ್ಲಿ ಈ ಘಟನೆ ನಡೆಯಿತು. ಮೋಹನ್ ಲಾಲ್ ಅಂತ್ಯಕ್ರಿಯೆಯ ಸ್ಥಳದಲ್ಲಿ ತನ್ನನ್ನು ತಾನು ಸುಟ್ಟುಕೊಳ್ಳಲಿಲ್ಲ. ಬದಲಾಗಿ ಅಲ್ಲಿ ಅದಾಗಲೇ ಮಾಡಲಾಗಿದ್ದ ಚಿತೆಗೆ ಬೆಂಕಿ ಹಚ್ಚಿ ಸುಟ್ಟರು. ಇನ್ನು ಅವರ ಮೆರವಣಿಗೆಯ ಸಮಯದಲ್ಲಿ, ಹಿಂದೂ ಅಂತ್ಯಕ್ರಿಯೆಗಳಲ್ಲಿ ವಾಡಿಕೆಯಂತೆ ಜನರು ರಾಮ್ ನಾಮ್ ಸತ್ಯ ಹೈ ಎಂದು ಘೋಷಣೆ ಕೂಗಿದರು. ಸಾಂಕೇತಿಕ ಚಿತೆಯನ್ನು ಬೂದಿ ಮಾಡಿದ ನಂತರ, ಅವರನ್ನು ನದಿಯಲ್ಲಿ ಮುಳುಗಿಸಲಾಯಿತು. ನಂತರ ಮೋಹನ್ ಲಾಲ್ ಅವರು ಹಾಜರಿದ್ದ ಎಲ್ಲರಿಗೂ ಔತಣಕೂಟವನ್ನು ಏರ್ಪಡಿಸಿದರು.
ವಿಡಿಯೊ ವೀಕ್ಷಿಸಿ:
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಜೂನ್ 2023ರಲ್ಲಿ, ಬೆಲ್ಜಿಯಂನ ಟಿಕ್‌ಟಾಕರ್ ಡೇವಿಡ್ ಬೇರ್ಟನ್ ತಮ್ಮ ಕುಟುಂಬದ ಪ್ರೀತಿಯನ್ನು ಪರೀಕ್ಷಿಸಲು ತಾನು ಸತ್ತ ಹಾಗೆ ನಟಿಸಿದ್ದರು. ಅವರ ಮಗಳು ಸಾಮಾಜಿಕ ಮಾಧ್ಯಮದಲ್ಲಿ ಡೇವಿಡ್ ಸಾವಿನ ಬಗ್ಗೆ ಘೋಷಿಸಿದ್ದರು. ಸ್ನೇಹಿತರು ಮತ್ತು ಸಂಬಂಧಿಕರು ಲೀಜ್ ಬಳಿ ನಡೆದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ನಂತರ ಬೇರ್ಟನ್ ಹೆಲಿಕಾಪ್ಟರ್‌ನಿಂದ ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದರು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ನಿವೃತ್ತ ಸೈನಿಕರ ಜವಾಬ್ದಾರಿಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, ರಕ್ಷಣಾ ಸಿಬ್ಬಂದಿ ಜೀವನದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿರಬೇಕು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಸೇವೆಯಿಂದ ನಿವೃತ್ತರಾಗುವ ಮೊದಲು, ಮೋಹನ್ ಲಾಲ್ ವಾಯುಪಡೆಯಲ್ಲಿ ವಾರಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ತನ್ನ ಸಾವಿನ ನಂತರ ಯಾರು ಹಾಜರಾಗುತ್ತಾರೆ ಮತ್ತು ಗೌರವ ಸಲ್ಲಿಸುತ್ತಾರೆ ಎಂಬುದನ್ನು ನೋಡಲು ಅವರು ತಮ್ಮದೇ ಆದ ಅಂತ್ಯಕ್ರಿಯೆಯನ್ನು ಆಯೋಜಿಸಿದ್ದರು. ತಮ್ಮ ಸೇವೆಯ ನಂತರವೂ, ಅವರು ತಮ್ಮ ಗ್ರಾಮ ಮತ್ತು ಸಮಾಜಕ್ಕೆ ಸಹಾಯ ಮಾಡಲು ಬದ್ಧರಾಗಿದ್ದರು.
ಮಳೆಗಾಲದಲ್ಲಿ ತಮ್ಮ ಗ್ರಾಮದಲ್ಲಿ ಅಂತ್ಯಕ್ರಿಯೆಗಳು ಕಷ್ಟಕರವಾಗಿರುವುದನ್ನು ಗಮನಿಸಿದ ಅವರು, ಸರಿಯಾದ ಅಂತ್ಯಕ್ರಿಯೆಯ ಸ್ಥಳ ಅಥವಾ ಮುಕ್ತಿಧಾಮವನ್ನು ನಿರ್ಮಿಸಲು ಪ್ರೇರೇಪಿಸಲ್ಪಟ್ಟರು. ಮುಕ್ತಿಧಾಮವನ್ನು ಉದ್ಘಾಟಿಸಲು, ಜನರು ತೋರಿಸುವ ಗೌರವ ಮತ್ತು ವಾತ್ಸಲ್ಯವನ್ನು ವೀಕ್ಷಿಸಲು ಅವರು ತಮ್ಮದೇ ಆದ ಅಂತ್ಯಕ್ರಿಯೆಯ ಮೆರವಣಿಗೆಯನ್ನು ಆಯೋಜಿಸಿದರು. ಗ್ರಾಮಸ್ಥರು ತಮ್ಮ ಅಂತಿಮ ಪ್ರಯಾಣದಲ್ಲಿ ಭಾಗವಹಿಸುವುದನ್ನು ನೋಡುವುದು ತಮಗೆ ಅಪಾರ ಸಂತೋಷವನ್ನು ತಂದಿತು ಎಂದು ಮೋಹನ್ ಲಾಲ್ ಹೇಳಿದರು.