Viral News: ಬೀದಿ ಬೀದಿ ಗುಡಿಸಿ ಸ್ವಚ್ಛ ಮಾಡೋ ನಿವೃತ್ತ IPS ಅಧಿಕಾರಿ ಇವ್ರೇ ನೋಡಿ; ವಿಡಿಯೊ ಫುಲ್ ವೈರಲ್
Retired IPS Officer clean streets: 88 ವರ್ಷದ ವೃದ್ಧರೊಬ್ಬರು ಏಕಾಂಗಿಯಾಗಿ ಬೀದಿಯನ್ನು ಸ್ವಚ್ಛಗೊಳಿಸುವ ಸ್ಪೂರ್ತಿದಾಯಕ ವಿಡಿಯೊವನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ. ಆ ವೃದ್ಧ ವ್ಯಕ್ತಿ ಬೇರಾರು ಅಲ್ಲ ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಇಂದರ್ಜಿತ್ ಸಿಂಗ್ ಸಿಧು ಎಂಬುವವರು.


ಚಂಡೀಗಢ: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಗಾಗ ಸ್ಪೂರ್ತಿದಾಯಕ ವಿಡಿಯೊಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ 88 ವರ್ಷದ ವೃದ್ಧರೊಬ್ಬರು ಏಕಾಂಗಿಯಾಗಿ ಬೀದಿಯನ್ನು ಸ್ವಚ್ಛಗೊಳಿಸುವ ವಿಡಿಯೊ ಹಂಚಿಕೊಂಡಿದ್ದಾರೆ. ಆ ವೃದ್ಧ ವ್ಯಕ್ತಿ ಬೇರಾರು ಅಲ್ಲ ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಇಂದರ್ಜಿತ್ ಸಿಂಗ್ ಸಿಧು.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಹೀಂದ್ರಾ ಅವರು ಚಂಡೀಗಢದ ರಸ್ತೆಯನ್ನು ಸ್ವಚ್ಛಗೊಳಿಸುತ್ತಿರುವ ಸಿಧು ಅವರ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸಿಧು ಅವರು ಚಂಡೀಗಢದಲ್ಲಿ ಸ್ವಚ್ಛತಾ ಅಭಿಯಾನವನ್ನು ಏಕಾಂಗಿಯಾಗಿ ಮುನ್ನಡೆಸುತ್ತಿದ್ದಾರೆ. ಸಿಧು ತನ್ನ ಸೆಕ್ಟರ್ 49ರ ಪ್ರದೇಶದಲ್ಲಿ ಕಸವನ್ನು ಗಾಡಿಗೆ ಹಾಕುತ್ತಿರುವ ವಿಡಿಯೊ ವೈರಲ್ ಆಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರಿಂದ ಮೆಚ್ಚುಗೆ ಗಳಿಸಿದೆ.
1964ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಸಿಧು, ಬೆಳಗ್ಗೆ 6 ಗಂಟೆಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಏಕಾಂಗಿಯಾಗಿ, ಸ್ವಯಂ ಸ್ವಚ್ಛತಾ ಅಭಿಯಾನ ಕೈಗೊಂಡಿರುವ ಅವರು ರಸ್ತೆ ಸ್ವಚ್ಛಗೊಳಿಸುತ್ತಾರೆ. ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡ ಮಹೀಂದ್ರಾ, ಪ್ರತಿದಿನ ಬೆಳಗ್ಗೆ 6 ಗಂಟೆಗೆ, ಚಂಡೀಗಢದ ಸೆಕ್ಟರ್ 49ರ ಬೀದಿಗಳಲ್ಲಿ, ಈ 88 ವರ್ಷದ ನಿವೃತ್ತ ಪೊಲೀಸ್ ಅಧಿಕಾರಿ ತಮ್ಮ ದಿನವನ್ನು ಸೇವೆಯಲ್ಲಿ ಪ್ರಾರಂಭಿಸುತ್ತಾರೆ ಎಂದು ಬರೆದಿದ್ದಾರೆ.
ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಚಂಡೀಗಢಕ್ಕೆ ಕಡಿಮೆ ಶ್ರೇಯಾಂಕ ಬಂದಿದ್ದರಿಂದ ಸಿಧು ನಿರಾಶಿಗೊಂಡಿದ್ದರು. ಬೇರೆಯವರನ್ನು ದೂರುತ್ತಾ ಕುಳಿತುಕೊಳ್ಳುವ ಬದಲು ಸ್ವತಃ ತಾವೇ ಸ್ವಚ್ಛತೆಯನ್ನು ಮಾಡಲು ಮುಂದಾದರು. ಯೌವನ ಮತ್ತು ವೇಗದ ಈ ಜೀವನಶೈಲಿಯಲ್ಲಿ, ಅವರ ನಿಧಾನವಾದ ಆದರೆ ಸ್ಥಿರವಾದ ಹೆಜ್ಜೆಗಳು ಉದ್ದೇಶದಿಂದ ಹಿಂದೆ ಸರಿಯುವುದಿಲ್ಲ. ಸೇವೆಗೆ ವಯಸ್ಸಾಗುವುದಿಲ್ಲ. ಬೀದಿಗಳ ಈ ಶಾಂತ ಯೋಧನಿಗೊಂದು ಸೆಲ್ಯೂಟ್ ಎಂದು ಮಹೀಂದ್ರಾ ಸಿಧು ಅವರನ್ನು ಹೊಗಳಿದ್ದಾರೆ.
ವಿಡಿಯೊ ಇಲ್ಲಿದೆ:
This clip which was shared with me is about Shri Inder Jit Singh Sidhu of Chandigarh.
— anand mahindra (@anandmahindra) July 22, 2025
Apparently, every morning at 6 AM, in the quiet streets of Chandigarh’s sector 49, this 88-year-old retired police officer begins his day in service.
Armed with nothing but a cycle cart and… pic.twitter.com/pkDlptoY8f
ನನಗೆ ಸ್ವಚ್ಛವಾದ ಸ್ಥಳ ಇಷ್ಟ, ಆದ್ದರಿಂದ ನಾನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತೇನೆ. ಈ ಮಾರುಕಟ್ಟೆಯಲ್ಲಿ ಪಾರ್ಕಿಂಗ್ ಪ್ರದೇಶ ಸ್ವಚ್ಛವಾಗಿದ್ದರೆ ಒಳ್ಳೆಯದು. ನೀವು ಯಾವುದೇ ವಿದೇಶಕ್ಕೆ ಭೇಟಿ ನೀಡಿ ಅಲ್ಲಿನ ನೆಲಹಾಸನ್ನು ನೋಡಿದರೆ, ಅವು ಸಾಮಾನ್ಯವಾಗಿ ತುಂಬಾ ಸ್ವಚ್ಛವಾಗಿರುತ್ತವೆ. ಆದರೆ ಭಾರತದಲ್ಲಿ ಹಾಗಲ್ಲ. ಭಾರತದಲ್ಲಿ ಸ್ವಚ್ಛ ನಗರ ಸ್ಪರ್ಧೆಯಲ್ಲಿ, ಚಂಡೀಗಢ ಎರಡನೇ ಸ್ಥಾನದಲ್ಲಿದೆ. ಚಂಡೀಗಢವು ಸ್ವಚ್ಛತೆ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ ಎಂದು ಸಿಧು ಹೇಳಿದ್ದಾರೆ.
ನನ್ನ ಎಲ್ಲಾ ಪ್ರಯತ್ನಗಳು ನಗರವನ್ನು ಸ್ವಚ್ಛತೆಯ ವಿಷಯದಲ್ಲಿ ಮೊದಲ ಸ್ಥಾನದಲ್ಲಿರುವಂತೆ ಮಾಡುವುದು. ನಾವೆಲ್ಲರೂ ಹೀಗೆಯೇ ಮುಂದುವರಿದರೆ, ಅದು ಒಂದು ದಿನ ನಂಬರ್ ಒನ್ ಆಗಲಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಹೇಳಿದರು. ಇನ್ನು ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಸಿಧು ಅವರ ಸಮರ್ಪಣಾಭಾವವನ್ನು ಶ್ಲಾಘಿಸಿದ್ದಾರೆ.
ಇಂದರ್ಜಿತ್ ಸಿಂಗ್ ಸಿಧು ಅವರ ಸೇವಾ ಕಾರ್ಯವು ವೈಯಕ್ತಿಕ ಪ್ರಯತ್ನದಿಂದ ಪ್ರಾರಂಭವಾಗುತ್ತದೆ. ವಯಸ್ಸು ಎಂದಿಗೂ ಬದಲಾವಣೆಯನ್ನು ತರಲು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ನಿಜಕ್ಕೂ ಇದು ಒಂದು ಉದಾಹರಣೆಯಾಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.