ನವದೆಹಲಿ, ಅ.17: ನವರಾತ್ರಿ ಹಾಗೂ ದಾಂಡಿಯಾ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಬ್ಬ ಅಂದಾಕ್ಷಣ ಹೊಸ ಬಟ್ಟೆ, ಅಭರಣ ಧರಿಸಿ ಪಾಲ್ಗೊಳ್ಳುವುದು ಸಾಮಾನ್ಯ. ಈ ನಡುವೆ ದಾಂಡಿಯಾ ಸಂಭ್ರಮಾಚರಣೆ ಮುಗಿಯುತ್ತಿದ್ದಂತೆ ಆನ್ಲೈನ್ ಮೂಲ ತರಿಸಿದ ಬಟ್ಟೆ ಮತ್ತು ಆಭರಣಗಳನ್ನು ಹಿಂತಿರುಗಿಸಲಾಗುತ್ತಿರುವ ದೃಶ್ಯ (Viral News) ಚರ್ಚೆಗೆ ಎಡೆಮಾಡಿಕೊಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಹಬ್ಬದ ಸಂದರ್ಭದಲ್ಲಿನ ಶಾಪಿಂಗ್ ಅಭ್ಯಾಸಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಾಮಾನ್ಯವಾಗಿ ಹಬ್ಬ ಅಂದಾಗ ನಾವು ಹೊಸ ಬಟ್ಟೆಗಳನ್ನು ಖರೀದಿಸುತ್ತೇವೆ. ಆದರೆ ಇಂದು ಆನ್ಲೈನ್ ಆ್ಯಪ್ಗಳ ಮೂಲಕ ಒಂದು ದಿನದ ಮಟ್ಟಿಗೆ ಬಟ್ಟೆ ಖರೀದಿಸುವ ಮಟ್ಟಕ್ಕೆ ಬಂದಿದ್ದೇವೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ದಾಂಡಿಯಾ ಹಬ್ಬದ ನಂತರ ಬಟ್ಟೆ ಹಿಂತಿರುಗಿಸುತ್ತಿರುವ ದೃಶ್ಯ ಕಂಡು ಬಂದಿದೆ. ಈ ಟ್ರಂಡ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಡಿಯೊ ನೋಡಿ:
ನವರಾತ್ರಿ ಮತ್ತು ದಾಂಡಿಯಾ ಉತ್ಸವಗಳು ಮುಗಿದ ತಕ್ಷಣವೇ ಆನ್ಲೈನ್ ಮೂಲಕ ಖರೀದಿಸಿದ ದುಬಾರಿ ಬಟ್ಟೆ ಮತ್ತು ಆಭರಣಗಳನ್ನು ಗ್ರಾಹಲರು ವಾಪಸ್ ಮಾಡುತ್ತಿದ್ದಾರೆ. ನಿಶಾಂತ್ ಚಂತ್ ಎಂಬವವರು ಹಂಚಿಕೊಂಡಿರುವ ವಿಡಿಯೊದಲ್ಲಿ ವಸತಿ ಸಮುದಾಯವೊಂದರ ಬಳಿ ಬಟ್ಟೆ ಮತ್ತು ಆಭರಣಗಳ ನೂರಾರು ರಿಟರ್ನ್ ಪಾರ್ಸೆಲ್ನ ದೊಡ್ಡ ರಾಶಿಯೇ ಬಿದ್ದಿರುವುದು ಕಂಡು ಬಂದಿದೆ .
ಅಪರಿಚಿತರ ಮೇಲೆಯೂ ಭಾರತೀಯರ ನಂಬಿಕೆ ಕಂಡು ಭಾವುಕನಾದೆ ಎಂದ ಅಮೆರಿಕದ ಲೇಖಕ
ಹಬ್ಬದ ಸಮಯದಲ್ಲಿ ಧರಿಸಲು ಮಾತ್ರ ಬಟ್ಟೆಗಳನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿ, ದಾಂಡಿಯಾ ಮುಗಿದ ತಕ್ಷಣ ವಾಪಸ್ ಕಳುಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕ್ಲಿಪ್ ಹಂಚಿಕೊಂಡ ನಿಶಾಂತ್ ಚಾಂಟ್ "ದಂಡಿಯಾ ಖತಮ್… ಡ್ರೆಸ್ ರಿಟರ್ನ್, ನಾಚಿಕೆಯಿಲ್ಲದ ಪೀಳಿಗೆ" ಎಂದು ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೊ ಆನ್ಲೈನ್ನಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಹಲವು ಬಳಕೆದಾರರು ಈ ಅಭ್ಯಾಸವನ್ನು ಟೀಕಿಸಿದ್ದಾರೆ. ಸಣ್ಣಪುಟ್ಟ ಮಾರಾಟಗಾರರು ಮತ್ತು ಉತ್ಪಾದಕರು ಭಾರಿ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಇನ್ನು ಕೆಲವರು ಇದರಿಂದ ನಿಜವಾದ ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಕಂಪನಿಗಳೇ ಈ ಆಯ್ಕೆ ನೀಡಿರುವಾಗ ಗ್ರಾಹಕರು ಅದನ್ನು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.