Viral News: ಕೇರಳದ ಈ ದೇವಾಲಯದಲ್ಲಿದೆ ರೊಬೊಟಿಕ್ ಆನೆ; ಏನಿದರ ವೈಶಿಷ್ಟ್ಯ?
Viral News: ಕೇರಳದ ದೇವಾಲಯವೊಂದರಲ್ಲಿ ಸುರಕ್ಷಿತ ಮತ್ತು ಕ್ರೌರ್ಯ ಮುಕ್ತ ರೀತಿಯಲ್ಲಿ ಸಮಾರಂಭಗಳನ್ನು ನಡೆಸಲು ಮೊದಲ ಬಾರಿಗೆ ರೊಬೊಟಿಕ್ ಆನೆಯನ್ನು ಕರೆತರಲಾಗಿದೆ. ಈ ಯಾಂತ್ರಿಕ ಆನೆಯನ್ನು ವಾಯ್ಸ್ ಫಾರ್ ಏಷ್ಯನ್ ಎಲಿಫೆಂಟ್ಸ್ ಸೊಸೈಟಿ ದಾನ ಮಾಡಿದೆ. ಸದ್ಯ ಈ ವಿಚಾರ ವೈರಲ್ ಆಗಿದೆ.


ತಿರುವನಂತಪುರಂ: ಇಂದಿನ ದಿನಗಳಲ್ಲಿ ರೊಬೊಟಿಕ್ ಆವಿಷ್ಕಾರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಅದೇ ರೀತಿ ಇದೀಗ ಕೇರಳದಲ್ಲಿ ದೇವಾಲಯಗಳಲ್ಲಿ ಸುರಕ್ಷಿತ ಮತ್ತು ಕ್ರೌರ್ಯ ಮುಕ್ತ ರೀತಿಯಲ್ಲಿ ಸಮಾರಂಭಗಳನ್ನು ನಡೆಸಲು ಮೊದಲ ಬಾರಿಗೆ ರೊಬೊಟಿಕ್ ಆನೆಯನ್ನು ಪರಿಚಯಿಸಲಾಗಿದೆ. ಈ ರೊಬೊಟಿಕ್ ಆನೆ (Robotic Elephant)ಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರನ್ನು ಬೆರಗುಗೊಳಿಸಿದೆ (Viral News). 3 ಮೀಟರ್ ಎತ್ತರ ಮತ್ತು 800 ಕೆಜಿ ತೂಕದ ಈ ಯಾಂತ್ರಿಕ ಆನೆಯನ್ನು ರಬ್ಬರ್, ಫೈಬರ್, ಲೋಹ, ಜಾಲರಿ, ಫೋಮ್ ಮತ್ತು ಉಕ್ಕಿನಿಂದ ತಯಾರಿಸಲಾಗಿದೆ. ಐದು ಮೋಟರ್‌ಗಳಲ್ಲಿ ಚಲಿಸುವ ಯಾಂತ್ರಿಕ ಆನೆಯು ನಿಜವಾದ ಆನೆಯಂತೆ ಕಾಣುತ್ತದೆ. ಇದನ್ನು ಆನೆಗಳು ನಿರ್ವಹಿಸುತ್ತಿದ್ದ ಕಾರ್ಯಗಳಿಗೆ ಬಳಸಬಹುದು.
ಈ ಆನೆ ನಿಜವಾದ ಆನೆಯಂತೆ ತನ್ನ ತಲೆಯನ್ನು ಅಲ್ಲಾಡಿಸುವುದು ಮತ್ತು ಸೊಂಡಿಲನ್ನು ಎತ್ತುವುದು ಮುಂತಾದ ಚಟಿವಟಿಕೆ ನಡೆಸುತ್ತದೆ. ಅಲ್ಲದೆ ಕಿವಿ ಮತ್ತು ಕಣ್ಣುಗಳನ್ನು ಚಲಿಸುತ್ತದೆ ಹಾಗೂ ಬಾಲವನ್ನು ಅಲ್ಲಾಡಿಸುತ್ತದೆ. ಅದರ ಜತೆಗೆ ಸೊಂಡಿಲಿನಲ್ಲಿ ನೀರನ್ನು ಕೂಡ ಸಿಂಪಡಿಸುತ್ತದೆ. ಈ ಯಾಂತ್ರಿಕ ಆನೆಗಳನ್ನು ಇತ್ತೀಚೆಗೆ ಅನೇಕ ಹಿಂದೂ ದೇವಾಲಯ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಕೆಲವೊಮ್ಮೆ ನಿಜವಾದ ಆನೆಗಳು ಡೋಲು ಹಾಗೂ ಮತ್ತು ಗಟ್ಟಿಯಾದ ಸಂಗೀತ ವಾದ್ಯಗಳ ಶಬ್ಧಕ್ಕೆ ಹೆದರುತ್ತವೆ. ಆದರೆ ರೊಬೊಟಿಕ್ ಆನೆ ಇದ್ದರೆ ಈ ಸಮಸ್ಯೆ ಇರಲ್ಲ! ಕಿಕ್ಕಿರಿದ ಜನಸಮೂಹದ ನಡುವೆ ಯಾವುದೇ ಭಯವಿಲ್ಲದೇ ಇದರ ಮೇಲೆ ಮೆರವಣಿಗೆ ಕೂಡ ಮಾಡಬಹುದು.
ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಂಡಿಯಾದ ಪ್ರಚಾರಕರು ಹೇಳುವ ಪ್ರಕಾರ, ದೇಶದಲ್ಲಿ 2,700ಕ್ಕೂ ಹೆಚ್ಚು ಸೆರೆಹಿಡಿದ ಆನೆಗಳು ಆಗಾಗ್ಗೆ 'ತೀವ್ರ ದೈಹಿಕ ಮತ್ತು ಮಾನಸಿಕ ಒತ್ತಡವನ್ನು' ಎದುರಿಸುತ್ತವೆ. ಹಿಂಡು ಪ್ರಾಣಿಗಳಾಗಿದ್ದರೂ, ಇವುಗಳನ್ನು ಹೆಚ್ಚಾಗಿ ಏಕಾಂಗಿಯಾಗಿ ಇರಿಸಲಾಗುತ್ತದೆ ಮತ್ತು ದಿನದ ಹೆಚ್ಚಿನ ಸಮಯದವರೆಗೆ ಸರಪಳಿಯಲ್ಲಿ ಬಂಧಿಸಲಾಗುತ್ತದೆ. ಈ ರೋಬೋಟ್ ಆನೆಯನ್ನು ಕೇರಳದ ಜನಪ್ರಿಯ ಚಕ್ಕಂಪರಂಬು ಭಗವತಿ ದೇವಾಲಯಕ್ಕೆ ಕರೆತರಲಾಗಿದೆ. ಈ ಯಾಂತ್ರಿಕ ಆನೆಯನ್ನು ವಾಯ್ಸ್ ಫಾರ್ ಏಷ್ಯನ್ ಎಲಿಫೆಂಟ್ಸ್ ಸೊಸೈಟಿ ದಾನ ಮಾಡಿದೆ. ಇದು 'ಕ್ರೌರ್ಯ ಮುಕ್ತ ದೇವಾಲಯ ಸಂಪ್ರದಾಯಗಳಿಗೆ' ಸಹಾಯ ಮಾಡುತ್ತದೆ ಎಂದು ಹೇಳಿದೆ.
ಆನೆ ಅತ್ಯಂತ ಬುದ್ಧಿವಂತ, ದೊಡ್ಡ ಮತ್ತು ಸಕ್ರಿಯ ಕಾಡು ಪ್ರಾಣಿ. ಆದರೆ ಸೆರೆಹಿಡಿದು ಬಂಧಿಸಿ ಅವುಗಳನ್ನು ಬಲವಂತವಾಗಿ ಪಳಗಿಸುವ ಮೂಲಕ ಮೆರವಣಿಗೆಗಳಲ್ಲಿ ಬಳಸಲು ತರಬೇತಿ ನೀಡಲಾಗುತ್ತದೆ. ಅವುಗಳಿಗೆ ತರಬೇತಿ ನೀಡುವಾಗ ಆಯುಧಗಳನ್ನು ಬಳಸಿ ಹೊಡೆಯುವುದು ಮಾಡಲಾಗುತ್ತದೆ. ಇದರಿಂದ ಅವು ಕೋಪಗೊಂಡು ಆಗಾಗ್ಗೆ ಮನುಷ್ಯರನ್ನು ಅಥವಾ ಮಾವುತರನ್ನು ಕೊಲ್ಲುತ್ತವೆ. ಹೆರಿಟೇಜ್ ಅನಿಮಲ್ ಟಾಸ್ಕ್ ಫೋರ್ಸ್ ಪ್ರಕಾರ, ಸೆರೆಹಿಡಿದ ಆನೆಗಳು 15 ವರ್ಷಗಳಲ್ಲಿ ಕೇರಳದಲ್ಲಿ 526 ಜನರನ್ನು ಕೊಂದಿವೆ. ಈ ಸಮಸ್ಯೆಗಳನ್ನು ಪರಿಹರಿಸಲು, ಪೆಟಾ ಇಂಡಿಯಾ 2023ರ ಆರಂಭದಲ್ಲಿ ಘಟನೆಗಳಿಗೆ ಜೀವಂತ ಆನೆಗಳನ್ನು ಬದಲಾಯಿಸುವ ಸಹಾನುಭೂತಿ ಆಂದೋಲನವನ್ನು ಹುಟ್ಟುಹಾಕಿತು. ಈಗ ದಕ್ಷಿಣ ಭಾರತದಾದ್ಯಂತದ ದೇವಾಲಯಗಳಲ್ಲಿ ಕನಿಷ್ಠ 13 ಯಾಂತ್ರಿಕ ಆನೆಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಎಂಟು ಯಾಂತ್ರಿಕ ಆನೆಗಳನ್ನು ಕರ್ನಾಟಕ ಮತ್ತು ಕೇರಳದ ದೇವಾಲಯಗಳಿಗೆ ದಾನ ಮಾಡುವಲ್ಲಿ ಪೆಟಾ ಇಂಡಿಯಾ ತೊಡಗಿಸಿಕೊಂಡಿದೆ.
ಈ ಸುದ್ದಿಯನ್ನೂ ಓದಿ:Elephant Attack: ಕೇರಳದಲ್ಲಿ ಉತ್ಸವದ ವೇಳೆ ಕೆರಳಿದ ಆನೆಗಳು; ಕಾಲ್ತುಳಿತದಲ್ಲಿ ಮೂವರು ಸಾವು
ಇತ್ತೀಚೆಗೆ ದೇವರ ಉತ್ಸವಕ್ಕೆಂದು ತಂದಿದ್ದ ಆನೆಗಳು ಏಕಾಏಕಿ ರೊಚ್ಚಿಗೆದ್ದು ಬೇಕಾಬಿಟ್ಟಿ ಓಡಿದ್ದು, ಪರಿಣಾಮವಾಗಿ ಮೂವರು ಬಲಿಯಾದ ಘಟನೆ ಕೇರಳದ (Kerala) ಕೋಝಿಕ್ಕೋಡ್‌ನಲ್ಲಿ ನಡೆದಿತ್ತು. ಕೊಯಿಲಾಂಡಿಯಲ್ಲಿ ದೇವಾಲಯ ಉತ್ಸವದ ಸಮಯದಲ್ಲಿ, ಆನೆಗಳು ಪಟಾಕಿ ಸದ್ದುಕೇಳಿ ರೊಚ್ಚಿಗೆದ್ದು ಇದ್ದಕ್ಕಿದ್ದಂತೆ ಓಡಲಾರಂಭಿಸಿದ್ದರಿಂದ ಕಾಲ್ತುಳಿತದಲ್ಲಿ 3 ಜನ ಮೃತ ಪಟ್ಟಿದ್ದು, 36ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಪೀತಾಂಬರನ್ ಮತ್ತು ಗೋಕುಲ್ ಎಂಬ ಎರಡು ಆನೆಗಳು ರೊಚ್ಚಿಗೆದ್ದ ನಂತರ ಈ ಘಟನೆ ನಡೆಯಿತು. ಉತ್ಸವಕ್ಕೆ ತಂದಿದ್ದ ಒಂದು ಆನೆ ಮದವೇರಿತು. ನಂತರ ಮತ್ತೊಂದು ಆನೆಯ ಮೇಲೆ ಆಕ್ರಮಣ ಮಾಡಲು ಸಜ್ಜಾಯಿತು. ಆಗ ಈ ಘಟನೆ ನಡೆದಿದೆ.