ಧರ್ಮಪುರಿ: ವಿದ್ಯಾರ್ಥಿಗಳು ತಮ್ಮ ಶಾಲಾ ಮುಖ್ಯೋಪಾಧ್ಯಾಯರ (headmaster) ಕಾಲುಗಳನ್ನು ಒತ್ತುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಶಾಲೆಯೊಂದರ ತರಗತಿಯಲ್ಲಿ ಈ ಘಟನೆ ನಡೆದಿದ್ದು, ವ್ಯಾಪಕ ಆಘಾತವನ್ನುಂಟು ಮಾಡಿದೆ. ವಿಡಿಯೊ ವೈರಲ್ ಆದ ಬೆನ್ನಲ್ಲೇ ಪೋಷಕರು ಹಾಗೂ ಸ್ಥಳೀಯರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರೂರಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸುಮಾರು 30 ಮಕ್ಕಳು ತರಗತಿಯಲ್ಲಿ ಇದ್ದರು ಎನ್ನಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಕಲೈವಾಣಿ ಎಂದು ಗುರುತಿಸಲ್ಪಟ್ಟಿದ್ದು, ತರಗತಿಯೊಳಗೆ ಮಕ್ಕಳಿಗೆ ತನ್ನ ಕಾಲುಗಳನ್ನು ಒತ್ತುವಂತೆ ಸೂಚಿಸುತ್ತಾ ಮೇಜಿನ ಮೇಲೆ ಮಲಗಿರುವುದು ಕಂಡುಬಂದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಅದನ್ನು ಗಮನಿಸಿದರು. ಈ ಕುರಿತು ವಿಚಾರಣೆ ನಡೆಸಲು ಶಾಲೆಗೆ ಕೂಡಲೇ ಭೇಟಿ ನೀಡಿದರು. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸೂಕ್ತ ವಿಚಾರಣೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿಡಿಯೊ ವೀಕ್ಷಿಸಿ:
ಇತ್ತೀಚೆಗೆ ಕೇರಳ ರಾಜ್ಯದ ಕಾಸರಗೋಡಿನ ಸರ್ಕಾರಿ ಶಾಲೆಯೊಂದರಲ್ಲಿ ಬೇರೊಂದು ಘಟನೆ ನಡೆದಿತ್ತು. 10ನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಾಲಾ ಮುಖ್ಯೋಪಾಧ್ಯಾಯರು ಹಲ್ಲೆ ನಡೆಸಿದ ಪರಿಣಾಮ ಕಿವಿಯೋಲೆ ಛಿದ್ರಗೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೇರಳ ಶಿಕ್ಷಣ ಇಲಾಖೆ ತನಿಖೆ ಆದೇಶಿಸಿದೆ. ಆಗಸ್ಟ್ 11 ರಂದು ಕುಂದಮ್ಕುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ.
ಮತ್ತೊಂದು ಘಟನೆಯಲ್ಲಿ, ತ್ರಿಕ್ಕಾಕರದ ಕೊಚ್ಚಿನ್ ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿಯ ವಿದ್ಯಾರ್ಥಿಯೊಬ್ಬ ತಡವಾಗಿ ಬಂದಿದ್ದಕ್ಕಾಗಿ ಕತ್ತಲೆ ಕೋಣೆಯಲ್ಲಿ ಒಂಟಿಯಾಗಿ ಬಂಧಿಸಲ್ಪಟ್ಟಿದ್ದ. ಈ ವಿಚಾರ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಶಿಕ್ಷಣ ನಿರ್ದೇಶಕರಿಗೆ ತನಿಖೆ ನಡೆಸುವಂತೆ ನಿರ್ದೇಶಿಸಿದರು.
ಮೂರು ನಿಮಿಷ ತಡವಾಗಿ ಬಂದ ವಿದ್ಯಾರ್ಥಿಯನ್ನು ಮೊದಲು ಎರಡು ಸುತ್ತು ಓಡುವಂತೆ ಆದೇಶಿಸಲಾಯಿತು. ನಂತರ ಕತ್ತಲೆಯ ಕೋಣೆಗೆ ಹಾಕಿ ಬಂಧಿಸಲಾಯಿತು. “ನಾನು ಶಾಲೆಗೆ ತಲುಪಲು 2 ರಿಂದ 3 ನಿಮಿಷ ತಡವಾಯಿತು. ಇದಕ್ಕಾಗಿ ನನ್ನನ್ನು ಎರಡು ಸುತ್ತು ಓಡುವಂತೆ ತಾಕೀತು ಮಾಡಿದರು. ನನ್ನ ಪೋಷಕರು ಬಂದು ನನ್ನನ್ನು ಕರೆದುಕೊಂಡು ಹೋಗಬೇಕು ಅಥವಾ ನಾನು ಒಬ್ಬಂಟಿಯಾಗಿ ಕತ್ತಲೆ ಕೋಣೆಯಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರಾಂಶುಪಾಲರು ನನಗೆ ಹೇಳಿದರು. ಆ ತರಗತಿಯಲ್ಲಿ ಶಿಕ್ಷಕರು ಮಾತ್ರ ಇದ್ದರು” ಎಂದು ವಿದ್ಯಾರ್ಥಿ ಹೇಳಿದ್ದಾನೆ.
ಇದನ್ನೂ ಓದಿ: ವಿದ್ಯಾರ್ಥಿನಿಯ ಜೀವ ಉಳಿಸಿದ ಇನ್‌ಸ್ಟಾಗ್ರಾಮ್! ಹೇಗೆ ಅಂತೀರಾ?