ಲಖನೌ, ಸೆ. 25: ಸಾರ್ವಜನಿಕ ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ಅನೇಕ ಘಟನೆಗಳು ವರದಿಯಾಗುತ್ತಿರುತ್ತವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಒಂದೇ ಬೈಕ್‌ನಲ್ಲಿ ಆರು ಮಂದಿ ಶಾಲಾ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದ ಅಘಾತಕಾರಿ ವಿಡಿಯೊ ವೈರಲ್ (Viral News) ಆಗಿದೆ. ಇದರಲ್ಲಿ ಒಬ್ಬ ಬಾಲಕ ಇನ್ನೊಬ್ಬನ ಹೆಗಲ ಮೇಲೆ ಕುಳಿತುಕೊಂಡಿರುವುದು ಕಂಡುಬಂದಿದೆ. ಇವರೆಲ್ಲ ಅಪ್ರಾಪ್ತರು ಬೇರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ಈ ಘಟನೆ ನಡೆದಿದೆ. ಸದ್ಯ ಸಂಚಾರ ಪೊಲೀಸರು ಈ ವಿಡಿಯೊ ನೋಡಿ ಕ್ರಮ ಕೈಗೊಂಡಿದ್ದಾರೆ. ಸುಮಾರು 25,000 ರೂಪಾಯಿ ದಂಡ ವಿಧಿಸಿದ್ದು, ವಾಹನವನ್ನು ವಶಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದಾರೆ. ಈ ನಡವಳಿಕೆಗೆ ಪೋಷಕರನ್ನೂ ವಿಚಾರಿಸಿದ್ದು, ನೋಟಿಸ್ ನೀಡಲಾಗಿದೆ.
ವಿಡಿಯೊ ನೋಡಿ:
ಈ ವಿಡಿಯೊದಲ್ಲಿ ಒಬ್ಬ ಬಾಲಕ ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿದ್ದರೆ, ಇತರ ನಾಲ್ವರು ಅದರ ಮೇಲೆ ಕಿಕ್ಕಿರಿದು ಕುಳಿತಿರುವಂತೆ ಕಾಣುತ್ತದೆ. ಆರನೇ ವಿದ್ಯಾರ್ಥಿ ಮತ್ತೊಬ್ಬನ ಹೆಗಲ ಮೇಲೆ ಅಪಾಯಕಾರಿಯಾಗಿ ಕುಳಿತಿದ್ದಾನೆ. ವಿಡಿಯೊ ನೋಡಿದ ಮೀರತ್ ಸಂಚಾರ ಪೊಲೀಸರು ತಕ್ಷಣವೇ ತನಿಖೆ ನಡೆಸಿ, ಬೈಕ್ ಮಾಲಕನಿಗೆ 25,000 ರೂಪಾಯಿ ಭಾರಿ ದಂಡ ವಿಧಿಸಿದ್ದಾರೆ.
ಪಂಡಾಲ್‌ಗೆ ತರುತ್ತಿದ್ದಾಗ ಕೆಳಗೆ ಬಿದ್ದ ಗಣೇಶನ ಮೂರ್ತಿ; ಅಡಿಯಲ್ಲಿ ಸಿಲುಕಿದ ಹಲವರು
ಈ ಕುರಿತು ಮಾತನಾಡಿದ ಮೀರತ್ ಸಂಚಾರ ವಿಭಾಗದ ಎಸ್‌ಪಿ ರಾಜೇಶ್ ಕುಮಾರ್ ಶ್ರೀವಾಸ್ತವ್, ʼʼಮಕ್ಕಳು ಇಂತಹ ಅಪಾಯಕಾರಿ ವರ್ತನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವುದು ಗಂಭೀರ ಪರಿಣಾಮ ಬೀರಬಹುದು. ಇದಕ್ಕೆ ಪೋಷಕರೇ ಸಂಪೂರ್ಣ ಹೊಣೆ ಮತ್ತು ಅವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಎಚ್ಚರಿಕೆ ನೀಡಿದ್ದಾರೆ.