ಮುಂಬೈ, ಜು. 25: ಮಹಾರಾಷ್ಟ್ರದ ಪುಣೆಯಲ್ಲಿ ಶುಕ್ರವಾರ (ಜುಲೈ 24) ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ (Stundents Protest) ಭಾವಿ ಪತಿ, ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಕೊಲೆಗೈದ ಸಿಯಾ ಗೋಯಲ್ (Siya Goyal) ಹೆಸರಿರುವ ಕೆಲವು ವಿಶಿಷ್ಟ ಪ್ಲಾಕಾರ್ಡ್‌ಗಳು ಕಾಣಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿಯಾ ಫೋಟೊ ಬಳಸಿ ಧರ್ಮೇಂದ್ರ ಪ್ರದಾನ್ ಅವರನ್ನು ಬೆದರಿಸುವ ಉದ್ಧಟತನ ತೋರಲಾಗಿದೆ.
ಪ್ರತಿಭಟನಾಕಾರರೊಬ್ಬರು ಹಿಡಿದಿದ್ದ ಪೋಸ್ಟರ್‌ನಲ್ಲಿ ಸಿಯಾ ಗೋಯಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳಿದ್ದವು. ಮಾಧ್ಯಮದೊಂದಿಗೆ ಮಾತನಾಡಿದ ಪ್ರತಿಭಟನಾಕಾರ, "ಸಿಯಾ ಗೋಯಲ್ ಮಾತ್ರ ನರೇಂದ್ರ ಮೋದಿ ಜಿ ಅವರನ್ನು ಸರಿಪಡಿಸಲು ಸಾಧ್ಯ ಹಾಗೂ ನರೇಂದ್ರ ಮೋದಿ ಮಾತ್ರ ಸಿಯಾ ಗೋಯಲ್ ಅವರನ್ನು ಸರಿಪಡಿಸಲು ಸಾಧ್ಯ" ಎಂದು ಹೇಳಿದ್ದಾನೆ.
ವೈರಲ್ ವಿಡಿಯೊ ಇಲ್ಲಿದೆ:
ಇನ್ನೋರ್ವ ಪ್ರತಿಭಟನಾಕಾರ ಹಿಡಿದಿದ್ದ ಪೋಸ್ಟರ್‌ನಲ್ಲಿ "ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿ, ಸಿಯಾ ಗೋಯಲ್ ಇದನ್ನು ಆಗ್ರಹಿಸುತ್ತಿದ್ದಾರೆ" ಎಂದು ಬರೆಯಲಾಗಿತ್ತು. ಮತ್ತೊಂದರಲ್ಲಿ ಸಿಯಾ ಗೋಯಲ್ ಹಾಗೂ ಧರ್ಮೇಂದ್ರ ಪ್ರಧಾನ್ ಅವರ ವಿವಾಹದ ಚಿತ್ರಣವಿತ್ತು. ಇವೆಲ್ಲವೂ ದೇಶದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳ ಕುರಿತಾದ ವ್ಯಂಗ್ಯ ಹಾಗೂ ಹಾಸ್ಯಾಸ್ಪದ ಟೀಕೆಗಳಾಗಿದ್ದು, ಇವುಗಳನ್ನು ಅಕ್ಷರಶಃ ತೆಗೆದುಕೊಳ್ಳಬಾರದು ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಈ ಪೋಸ್ಟರ್‌ಗಳ ವಿಡಿಯೊ ಮತ್ತು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತರಹೇವಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಶಿಕ್ಷಣ ಸುಧಾರಣೆ ಮತ್ತು ನಿರುದ್ಯೋಗದ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿಯ ಭಾಗವಾಗಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಆರಂಭದಲ್ಲಿ ಆನ್‌ಲೈನ್ ವ್ಯಂಗ್ಯ ಪ್ರಚಾರವಾಗಿ ಶುರುವಾದ ಈ ಚಳವಳಿ, ಈಗ ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತಾ, ಹೈದರಾಬಾದ್, ತಿರುವನಂತಪುರಂ ಮತ್ತು ಪುಣೆ ಸೇರಿ ಹಲವು ಪ್ರಮುಖ ನಗರಗಳಲ್ಲಿ ಬೃಹತ್ ಪ್ರತಿಭಟನೆಯಾಗಿ ರೂಪುಗೊಂಡಿದೆ. ಕಠಿಣ ಪರೀಕ್ಷಾ ಅಕ್ರಮ ತಡೆ ಕಾಯ್ದೆ ರೂಪಿಸಬೇಕು ಮತ್ತು ಸಂತ್ರಸ್ತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ.
ವಿದ್ಯಾರ್ಥಿ ನಾಯಕನಿಂದ ವಿವಾದಿತ ಸಚಿವನವರೆಗೆ; ಧರ್ಮೇಂದ್ರ ಪ್ರಧಾನ್ ರಾಜಕೀಯ ಜರ್ನಿ ಇಲ್ಲಿದೆ
ಧಾರಾಕಾರ ಮಳೆಯ ನಡುವೆಯೂ ನೂರಾರು ಯುವಕರು ಭಾಗವಹಿಸಿದ್ದ ಈ ಮೆರವಣಿಗೆಯಲ್ಲಿ ʼಸೈಮನ್ ಕಮ್ ಬ್ಯಾಕ್ʼ, ʼಚಹಾ ಮಾರಿ, ದೇಶವಲ್ʼ ಮುಂತಾದ ಹಲವು ಸರ್ಕಾರಿ ವಿರೋಧಿ ಬರಹಗಳು ಕಂಡುಬಂದವು. ಅಲ್ಲದೆ "ಕೇವಲ ಪ್ರಶ್ನೆಪತ್ರಿಕೆಯಷ್ಟೇ ಅಲ್ಲ, ಇಡೀ ವ್ಯವಸ್ಥೆಯೇ ಸೋರಿಕೆಯಾಗಿದೆ" ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.