ಮುಂಬೈ, ಫೆ. 22: ಇತ್ತೀಚೆಗೆ ಟೈಲರಿಂಗ್ ಮೆಷಿನ್ ಒಳಗೆ ಹಾವೊಂದು ಅವಿತುಕೊಂಡಿದ್ದ ದೃಶ್ಯ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ಈ ನಡುವೆ ಮತ್ತೊಂದು ಭಯಾನಕ ಘಟನೆ ಕಂಡು ಬಂದಿದ್ದು, 7 ಅಡಿ ಉದ್ದದ ಬೃಹತ್ ಹಾವೊಂದು ಏರ್ ಕಂಡೀಷನರ್ (AC) ಯೂನಿಟ್ ಮೇಲೆ ಪ್ರತ್ಯಕ್ಷವಾಗಿದೆ. ಮುಂಬೈಯ (Mumbai) ಏರ್ ಇಂಡಿಯಾ ಗೇಟ್ ಸಂಖ್ಯೆ 3ರಲ್ಲಿ ಈ ಘಟನೆ ನಡೆದಿದೆ. ಈ ಮೂಲಕ ಅಲ್ಲಿನ ಸ್ಥಳೀಯರಲ್ಲಿ ಕೆಲ ಕಾಲ ಆತಂಕದ ವಾತಾವರಣ ಮೂಡಿತು. ಅಂತಿಮವಾಗಿ ವನ್ಯಜೀವಿ ರಕ್ಷಕರು ಹಾವನ್ನು ಸುರಕ್ಷಿತವಾಗಿ ಕಾಪಾಡುವಲ್ಲಿ ಯಸಸ್ವಿಯಾಗಿದ್ದಾರೆ.
ಮುಂಬೈನ ವಿಲೇ ಪಾರ್ಲೆ ಪೂರ್ವದಲ್ಲಿರುವ ಹವಾನಿಯಂತ್ರಣ ಘಟಕದ ಮೇಲೆ ಹಾವು ಕಾಣಿಸಿಕೊಂಡಿದೆ. ಗುರುವಾರ ಏರ್ ಇಂಡಿಯಾ ಗೇಟ್ ಸಂಖ್ಯೆ 3ರ ಬಳಿ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಹೊರಾಂಗಣ ಎಸಿ ಘಟಕದ ಮೇಲಿನ ಕಿರಿದಾದ ಅಂಚಿನಲ್ಲಿ ಹಾವು ಇರುವುದನ್ನು ಸ್ಥಳೀಯರು ಗಮನಿಸಿ ಬೆಚ್ಚಿ ಬಿದ್ದಿದ್ದಾರೆ.
ವಿಡಿಯೊ ನೋಡಿ:
ಕಟ್ಟಡವೊಂದರ ಹೊರಭಾಗದ ಎಸಿ ಯೂನಿಟ್ ಮೇಲೆ ಈ ಹಾವು ಆಶ್ರಯ ಪಡೆದಿತ್ತು. ಕಿಟಕಿಯ ಮೇಲೆ ಸಣ್ಣ ಜಾಗದಲ್ಲಿ ಸುರುಳಿ ಸುತ್ತಿಕೊಂಡು ಮಲಗಿತ್ತು. ಛಾಯಾಗ್ರಾಹಕ ಕರಣ್ ಸೋಲಂಕಿ ಈ ವಿಡಿಯೊವನ್ನು ರೆಕಾರ್ಡ್ ಮಾಡಿದ್ದು ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ, ಹಾವಿನ ಗಾತ್ರದ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಲಗಿದ ವಿಶೇಷ ಚೇತನ ವ್ಯಕ್ತಿಯ ಮೇಲೆ ಕಾನ್‌ಸ್ಟೇಬಲ್‌ನಿಂದ ಹಲ್ಲೆ
ಮಾಹಿತಿ ತಿಳಿದ ನಂತರ, ಆಶಾ: ದಿ ಹೋಪ್ ಫಾರ್ ಅನಿಮಲ್ಸ್ ವೆಲ್‌ಫೇರ್ ಟ್ರಸ್ಟ್‌ನ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿತು. ವನ್ಯಜೀವಿ ರಕ್ಷಣಾ ಪ್ರೋಟೋಕಾಲ್‌ಗಳನ್ನು ಬಳಸಿಕೊಂಡು, ತಂಡವು ಪ್ರಾಣಿಗಳಿಗೆ ಮತ್ತು ಪ್ರದೇಶದ ಯಾವುದೇ ನಿವಾಸಿಗಳಿಗೆ ಹಾನಿಯಾಗದಂತೆ ಹಾವನ್ನು ಎಚ್ಚರಿಕೆಯಿಂದ ರಕ್ಷಿಸಿದೆ. ಬಳಿಕ ಅರಣ್ಯ ಇಲಾಖೆಯ ಮಾರ್ಗಸೂಚಿಯಂತೆ ಅದನ್ನು ಜನವಸತಿ ಇಲ್ಲದ ಸುರಕ್ಷಿತ ಪರಿಸರಕ್ಕೆ ಬಿಡಲಾಗಿದೆ.