ಮುಂಬೈ,ಮೇ 29: ಇತ್ತೀಚೆಗೆ ಆಹಾರ ಸುರಕ್ಷತೆಯನ್ನು ಪಾಲಿಸದೇ ಇರುವ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿವೆ. ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸದೇ ಇರುವುದು, ನೈರ್ಮಲ್ಯ ಕಾಪಾಡದೇ ಇರುವುದು ಹೀಗೆ ಹಲವು ಪ್ರಕರಣಗಳು ದಿನ ನಿತ್ಯ ವರದಿಯಾಗುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ ರೈಲಿನ ಶೌಚಾಲಯದೊಳಗೆ ಸಿಬ್ಬಂದಿಯೊಬ್ಬ ಊಟದ ತಟ್ಟೆ ಯನ್ನಿಟ್ಟು ತೊಳೆದ ವಿಡಿಯೊವೊಂದು ವೈರಲ್ (Viral News) ಆಗಿದೆ. ಈ ದೃಶ್ಯ ನೋಡಿದ ಅನೇಕರು ಜನರ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಂಬೈ-ಎರ್ನಾಕುಲಂ ಡುರೊಂಟೊ ಎಕ್ಸ್‌ಪ್ರೆಸ್‌ನಲ್ಲಿ ಈ ಘಟನೆ ಕಂಡು ಬಂದಿದೆ. ಸಿಬ್ಬಂದಿಯೂ ರೈಲಿನ ಶೌಚಾಲಯ ಪ್ರದೇಶ ದೊಳಗೆ ತಟ್ಟೆಗಳನ್ನು ಇಟ್ಟು ತೊಳೆಯುತ್ತಿದ್ದಾನೆ. ರೈಲು ಸಂಖ್ಯೆ 12223 ಡುರೊಂಟೊ ಎಕ್ಸ್‌ಪ್ರೆಸ್‌ನ ಮೊದಲ ಎಸಿ ಕೋಚ್‌ನಲ್ಲಿ ನಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. "ಟ್ರುತ್ ಆನ್ ಟ್ರ್ಯಾಕ್" ಖಾತೆಯು ಈ ವೀಡಿಯೊವನ್ನು ಹಂಚಿಕೊಂಡಿದ್ದು ಅಡುಗೆ ಸಿಬ್ಬಂದಿ ಶೌಚಾಲಯದದೊಳಗೆ ಪಾತ್ರೆಗಳು ಮತ್ತು ಬಡಿಸುವ ವಸ್ತುಗಳನ್ನು ತಾತ್ಕಾಲಿಕವಾಗಿ ಇಡುವ ಸ್ಥಳವಾಗಿ ಬಳಸುತ್ತಿದ್ದಾನೆ ಎಂದು ಹೇಳಿಕೊಂಡಿದೆ.
ವಿಡಿಯೋ ನೋಡಿ:
ಇತ್ತೀಗಷ್ಟೇ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಪ್ರಯಾಣಿಕರ ಆಹಾರ ಕಾಳಜಿಯ ಬಗ್ಗೆ ಪ್ರಶ್ನೆ ಮಾಡುವಂತ ಘಟನೆ ನಡೆದಿತ್ತು. ವಿಮಾನ ನಿಲ್ದಾಣದ ಪ್ರಯಾಣಿಕರ ಲಾಂಜ್ ಒಳಗೆ ಬೀದಿ ನಾಯಿಯೊಂದು ಓಡಾಡುತ್ತಿರುವುದು ಕಂಡು ಬಂದಿದ್ದು ನಾಯಿಯೂ ಮೇಜಿನ ಮೇಲೆ ಕುಳಿತು ಉಳಿದ ಆಹಾರವನ್ನು ತಿನ್ನುತ್ತಿತ್ತು. ಇದೀಗ ರೈಲು ಪ್ರಯಾಣದಲ್ಲಿ ಈ ದೃಶ್ಯ ಕಂಡು ಬಂದಿದ್ದು ಪ್ರಯಾಣಿಕರ ಆರೋಗ್ಯ ಜೊತೆ ಚೆಲ್ಲಾಟ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ.
Viral News: ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ವೈರಲ್ ಆಗಿರುವ ದೃಶ್ಯಗಳಲ್ಲಿ IRCTC ಸಿಬ್ಬಂದಿಯೊಬ್ಬರು ರೈಲಿನ ವಾಶ್‌ರೂಮ್ ಒಳಗೆ ಶೌಚಾಲಯದ ಸೀಟಿನ ಮೇಲೆ ಪಾತ್ರೆಗಳನ್ನು ಹೊಂದಿರುವ ಬುಟ್ಟಿಯನ್ನು ಇಡುವುದನ್ನು ತೋರಿಸಲಾಗಿದೆ. ಇದೀಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮಕ್ಕೆ (IRCTC) ತಕ್ಷಣದ ಮಾಹಿತಿ ಕೋರಿ ನೋಟಿಸ್ ಜಾರಿ ಮಾಡಿದೆ.
ಪ್ರಯಾಣಿಕರು ಭಾರಿ ಹಣ ನೀಡಿ ಪ್ರಯಾಣಿಸುವ ಅತ್ಯಂತ ದುಬಾರಿ ಎಸಿ ಬೋಗಿಯಲ್ಲಿ ಈ ಘಟನೆ ನಡೆದಿದೆ.ಅಲ್ಲಿ ಪ್ರಯಾಣಿಕರು ಸಾಮಾನ್ಯವಾಗಿ ಉತ್ತಮ ಸೇವಾ ಮಾನ ದಂಡಗಳು ಮತ್ತು ಸ್ವಚ್ಛತೆಯನ್ನು ನಿರೀಕ್ಷಿಸುತ್ತಾರೆ. ವಿಡಿಯೋ ಚಿತ್ರೀಕರಿಸಿದ ಪ್ರಯಾಣಿಕ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನೆ ಮಾಡಿದಾಗ ಸಿಬ್ಬಂದಿ ಮೌನವಾಗಿದ್ದಾನೆ.
ಈ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ಇಂತಹ ದುಷ್ಕರ್ಮಿಗಳನ್ನು ಬಿಡಬಾರದು. ಇಡೀ ತಂಡವನ್ನು ಮೇಲ್ವಿಚಾರಕರು, ವ್ಯವಸ್ಥಾಪಕರು ಸೇರಿದಂತೆ ಶಿಕ್ಷೆಗೆ ಒಳಪಡಿಸಬೇಕು ಎಂದಿದ್ದಾರೆ. ಬಳಕೆದಾರ ರೊಬ್ಬರು ಇದೇನು...? ಜನರಿಗೆ ಸೇವೆ ಸಲ್ಲಿಸುತ್ತಿರುವ ನಿಮ್ಮ ಟೆಂಡರ್ ಗುತ್ತಿಗೆದಾರರೇ ಎಲ್ಲಾ ಟೆಂಡರ್‌ಗಳನ್ನು ಆದಷ್ಟು ಬೇಗ ರದ್ದುಗೊಳಿಸಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.