ಲಖನೌ, ಜು. 18: ಮನೆಯ ಆಹಾರ ಬಿಟ್ಟು ಕೆಲವೊಮ್ಮೆ ಹೊರಗಿನ ಆಹಾರಕ್ಕೆ ನಾವು ಆದ್ಯತೆ ನೀಡುತ್ತೇವೆ. ಆದರೆ ಇಂತಹ ಆಹಾರ ಸೇವಿಸುವ ಮುನ್ನ ನೈರ್ಮಲ್ಯದ ಬಗ್ಗೆ ಸಾರ್ವಜನಿಕರು ಬಹಳಷ್ಟು ಭಾರಿ ಯೋಚನೆ ಮಾಡಬೇಕು ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಉತ್ತರ ಪ್ರದೇಶದ ಲಖನೌ ರೈಲು ನಿಲ್ದಾಣದಲ್ಲಿ ಮಾರಾಟಗಾರನೊಬ್ಬ ಶೌಚಾಲಯದಿಂದ ನೀರು ತಂದು ಲಿಂಬೆ ಹಣ್ಣಿನ ಶರಬತ್ತು ಮಾಡಿದ್ದಾನೆ. ಈ ಕ್ಲಿಪ್ (Viral Video) ಆಹಾರ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಕಳವಳವನ್ನು ಹುಟ್ಟು ಹಾಕಿದೆ.
ಇತ್ತೀಚೆಗೆ ಆಹಾರ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿರುವ ಅನೇಕ ಪ್ರಕರಣ ವರದಿಯಾಗುತ್ತಿವೆ. ಕೊಳಚೆ ನೀರಿನಲ್ಲಿ ತರಕಾರಿ ತೊಳೆಯುವುದು, ಸಿಹಿ ತಿಂಡಿಗಳಿಗೆ ರಾಸಾಯನಿಕ ಬಣ್ಣ ಅಳವಡಿಕೆ ಹೀಗೆ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ತರುವಂತೆ ಮಾಡುವ ಅನೇಕ ಘಟನೆ ನಡೆಯುತ್ತಿವೆ. ಹೀಗಾಗಿ ಬೀದಿ ಆಹಾರ ಮಾರಾಟಗಾರರ ಮೇಲೆ ನಿಗಾ ಇಡಲು ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನೇಕರು ಒತ್ತಾಯಿಸಿದ್ದಾರೆ.
ವಿಡಿಯೊ ನೋಡಿ:
ಲಖನೌ ರೈಲು ನಿಲ್ದಾಣದಲ್ಲಿ ಶಿಕಂಜಿ ಮಾರಾಟಗಾರನೊಬ್ಬ ಸಾರ್ವಜನಿಕ ಶೌಚಾಲಯದಿಂದ ಪಾತ್ರೆಗಳಲ್ಲಿ ನೀರನ್ನು ತುಂಬಿಸುತ್ತಿರುವುದು ಕಂಡು ಬಂದಿದೆ. ಇದೇ ನೀರನ್ನು ಬಳಸಿ ತಂಪು ಪಾನೀಯವನ್ನು ತಯಾರಿಸಿದ್ದಾನೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ತಮ್ಮ ದಣಿವು ನಿವಾರಿಸಿಕೊಳ್ಳಲು ಇಂತಹ ಪಾನೀಯವನ್ನು ಕುಡಿಯುತ್ತಾರೆ. ಅಂತಹ ಅಭ್ಯಾಸಗಳು ಗ್ರಾಹಕರಿಗೆ ಗಂಭೀರ ಆರೋಗ್ಯ ಅಪಾಯಗಳನ್ನುಂಟು ಮಾಡಬಹುದು ಎಂದು ಹಲವರು ಎಚ್ಚರಿಸಿದ್ದಾರೆ.
''ಇದು ಕೇವಲ ಕಾರಲ್ಲ, ಹಲವು ವರ್ಷಗಳ ಕಠಿಣ ಪರಿಶ್ರಮ''; ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರ್ ನೋಡಿ ಮಾಲಕ ಭಾವುಕ
"ಗ್ರಾಹಕರ ಆರೋಗ್ಯದ ಜತೆ ಚೆಲ್ಲಾಟವಾಡುವ ಇಂತಹ ಬೇಜವಾಬ್ದಾರಿ ವ್ಯಾಪಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು'' ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ʼʼಬೇಸಗೆಯ ದಿನಗಳಲ್ಲಿ ನಾವು ಇದನ್ನು ಕುಡಿಯುತ್ತೇವೆ. ಈ ವಿಡಿಯೊ ನಿಜವಾಗಿದ್ದರೆ ಈ ವ್ಯಾಪಾರಿಯನ್ನು ಸುಮ್ಮನೆ ಬಿಡಬಾರದುʼʼ ಎಂದು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ. "ವ್ಯಾಪಾರಿಗೆ ಈ ನೀರು ಬಳಸಲು ನಾಚಿಕೆಯಾಗುವುದಿಲ್ಲವೇ? ಇಂತಹ ಕೊಳಕು ಜನರು ಇದ್ದರಾ?'' ಎಂದು ಪ್ರಶ್ನಿಸಿದ್ದಾರೆ. ಆದರೆ ಈ ವೈರಲ್ ವಿಡಿಯೊದ ನೈಜತೆ ಬಗ್ಗೆ ಅಧಿಕಾರಿಗಳು ಅಥವಾ ರೈಲ್ವೆ ಇಲಾಖೆ ಇನ್ನು ಸ್ಪಷ್ಟನೆ ನೀಡಿಲ್ಲ..