ಫರೀದಾಬಾದ್: ಸೂರಜ್‌ಕುಂಡ್ (Surajkund ) ಜಾತ್ರೆಯಲ್ಲಿ ಸಂಭವಿಸಿದ ಭೀಕರ ಅಪಘಾತದ ವಿಡಿಯೋ (video) ವೊಂದು ಬೆಳಕಿಗೆ ಬಂದಿದೆ. ಗಾಳಿಯಲ್ಲಿ ವೇಗವಾಗಿ ಸುತ್ತುತ್ತಿದ್ದ 'ಸುನಾಮಿ (Tsunami)' ಉಯ್ಯಾಲೆಯು ಇದ್ದಕ್ಕಿದ್ದಂತೆ ಮುರಿದು ನೆಲಕ್ಕೆ ಅಪ್ಪಳಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆಯು ಶನಿವಾರ ಸಂಜೆ 6:15ರ ಸುಮಾರಿಗೆ ಸಂಭವಿಸಿದ್ದು, ಕನಿಷ್ಟ 15 ಜನರು ಉಯ್ಯಾಲೆಯಲ್ಲಿದ್ದಾಗ ಅದರ ಒಂದು ಭಾಗ ತುಂಡಾಗಿ ಕೆಳಗೆ ಬಿದ್ದಿದೆ. ಸುಮಾರು ಒಂದು ನಿಮಿಷದ ಈ ವಿಡಿಯೋದಲ್ಲಿ, ಜನರು ಕೆಳಗಿನಿಂದ ವಿಡಿಯೋ ಮಾಡುತ್ತಿರುವುದು ಮತ್ತು ಅಪಘಾತ ಸಂಭವಿಸುತ್ತಿದ್ದಂತೆ ಭಯದಿಂದ ಕಕ್ಕಾ-ಬಿಕ್ಕಿಯಾಗಿ ಓಡುತ್ತಿರುವುದನ್ನು ಕಾಣಬಹುದು. ಈ ದುರಂತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಪ್ರಾಸದ್ (Jagadhish Prasad) ಎಂಬುವವರು ಸಾವನ್ನಪ್ಪಿದ್ದು, ಗಾಯಾಳುಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ವಿಡಿಯೋ ನೋಡಿ
ರಕ್ಷಣಾ ಕಾರ್ಯಾಚರಣೆ ಮತ್ತು ತನಿಖೆ
ಜಿಲ್ಲಾ ಮ್ಯಾಜಿಸ್ಟ್ರೇಟ್ ಆಯುಷ್ ಸಿನ್ಹಾ ಅವರ ನೇತೃತ್ವದಲ್ಲಿ ಪೊಲೀಸ್ ಮತ್ತು ಇತರ ತಂಡಗಳು ತಕ್ಷಣವೇ ರಕ್ಷಣಾ ಕಾರ್ಯ ಕೈಗೊಂಡಿದ್ದು, ಅಪಘಾತದ ನಂತರ ಜಾತ್ರಾ ಮೈದಾನವನ್ನು ಖಾಲಿ ಮಾಡಲಾಗಿದೆ. ಅಷ್ಟೇಅಲ್ಲದೇ ಉಯ್ಯಾಲೆ ತುಂಡಾಗಿದ್ದು ಹೇಗೆ? ಅಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗಿದೆಯೇ? ಮತ್ತು ರೈಡ್ ನಡೆಸಲು ಅಧಿಕೃತ ಅನುಮತಿ ಇತ್ತೇ? ಎಂಬ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Viral Video: ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ! ಹೇಗೆ ಗೊತ್ತಾ?
ಮುಖ್ಯಮಂತ್ರಿ ನಾಯಬ್ ಸೈನಿ ಸಂತಾಪ
ಜನರ ಪ್ರಾಣ ಉಳಿಸಲು ಹೋಗಿ ಸಾವನ್ನಪ್ಪಿದ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ ಅವರ ಕುಟುಂಬಕ್ಕೆ ಹರಿಯಾಣ ಮುಖ್ಯಮಂತ್ರಿ ನಾಯಬ್ ಸೈನಿ ಅವರು ಸಂತಾಪ ಸೂಚಿಸಿದ್ದಾರೆ. "ಫರೀದಾಬಾದ್‌ನ ಸೂರಜ್‌ಕುಂಡ್ ಜಾತ್ರೆಯಲ್ಲಿ ನಡೆದ ಅಪಘಾತದಿಂದ ನನಗೆ ತುಂಬಾ ದುಃಖವಾಗಿದೆ. ಮೃತರ ಕುಟುಂಬಕ್ಕೆ ನನ್ನ ಭಾವಪೂರ್ಣ ಸಂತಾಪಗಳು. ಗಾಯಾಳುಗಳಿಗೆ ತಕ್ಷಣದ ಮತ್ತು ಸೂಕ್ತ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ," ಎಂದು ಅವರು ಸಾಮಾಜಿಕ ಜಾಲತಾಣ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೂ ಹರಿಯಾಣ ಡಿಜಿಪಿ ಅಜಯ್ ಸಿಂಘಾಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಸಂತ್ರಸ್ತರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಮತ್ತು ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸದಂತೆ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಸಹ ನೀಡಿದ್ದಾರೆ. ಜನವರಿ 31 ರಂದು ಆರಂಭವಾಗಿರುವ ಈ ಸೂರಜ್‌ಕುಂಡ್ ಜಾತ್ರೆಯು ಫೆಬ್ರವರಿ 15 ರವರೆಗೆ ನಡೆಯಲಿದೆ.