ನವದೆಹಲಿ: ಇತ್ತೀಚಿನ ದಿನದಲ್ಲಿ ಡಿಜಿಟಲ್ ಪೇಮೆಂಟ್ (Digital payment) ಮೇಲೆ ಅವಲಂಬನೆ ಹೆಚ್ಚಾಗಿದೆ. ಕೆಲ ಸಂದರ್ಭಗಳಲ್ಲಿ ನೆಟ್ವರ್ಕ್ ಎರರ್, ಬ್ಯಾಂಕಿನ ಸರ್ವರ್ ಸಮಸ್ಯೆಯಾಗುವಾಗ ಹಣ ಟ್ರಾನ್ಫರ್ ಆಗದೆ ಅನೇಕರು ಇಕ್ಕಟ್ಟಿಗೆ ಸಿಲುಕಿದ್ದು ಇದೆ. ಅಂತೆಯೇ ವ್ಯಕ್ತಿಯೊಬ್ಬ ಸಮೋಸ ಖರೀದಿಸಿ ಬಳಿಕ ಡಿಜಿಟಲ್ ಪೇ ನಲ್ಲಿ ಹಣ ಹಾಕಲು ಸಾಧ್ಯವಾಗಲಿಲ್ಲ, ಆತ ತೆಗೆದುಕೊಂಡ ಸಮೋಸ ವಾಪಾಸ್ ನೀಡಿದರೂ ವ್ಯಾಪಾರಿ ಮಾತ್ರ ಹಣ ನೀಡಲೇ ಬೇಕೆಂದು ಪಟ್ಟು ಹಿಡಿದ ಘಟನೆ ಮಧ್ಯಪ್ರದೇಶದ (Madhya Pradesh) ಜಬಲ್ಪುರ (Jabalpur) ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಸಮೋಸ ಮಾರಾಟಗಾರ ಗ್ರಾಹಕನೊಂದಿಗೆ ದರ್ಪದಿಂದ ವರ್ತಿಸಿದ್ದು ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಅಕ್ಟೋಬರ್ 17ರ ಸಂಜೆ ಜಬಲ್ಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವೈರಲ್ ವಿಡಿಯೋ ದಲ್ಲಿ ಪ್ರಯಾಣಿಕನೊಬ್ಬನು ಸಮೋಸ ಬೇಕೆಂದು ವ್ಯಾಪಾರಿ ಬಳಿ ತಿಳಿಸಿದ್ದಾನೆ. ಅದನ್ನು ಪಾರ್ಸೆಲ್ ಪಡೆದು ತನ್ನ ಮೊಬೈಲ್ ನಿಂದ ಡಿಜಿಟಲ್ ಪೇಮೆಂಟ್ ಮಾಡಲು ಆತ ಹೊರಟಿದ್ದಾನೆ. ಆದರೆ ಪ್ರಯಾಣಿಕ ಎಷ್ಟೇ ಪ್ರಯತ್ನ ಪಟ್ಟರು ಕ್ಯಾಶ್ ಟ್ರಾನ್ಫರ್ ಆಗಲಿಲ್ಲ. ಅದೇ ಸಮಯಕ್ಕೆ ರೈಲು ಕೂಡ ಬಂದಿದ್ದರಿಂದ ಸಮೋಸ ಅಲ್ಲಿಯೇ ಬಿಟ್ಟು ಹಣ ಪೇಮೆಂಟ್ ಆಗುತ್ತಿಲ್ಲ ಎಂದು ಹೇಳಿ ಅಲ್ಲಿಂದ ಹೊರಡಲು ಮುಂದಾಗಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ:
ಇದಾದ ಬಳಿಕ ಸಮೋಸ ಮಾರಾಟಗಾರ ಕೋಪಗೊಂಡು ಸಮೋಸ ಹಣವನ್ನು ನೀಡುವಂತೆ ತಿಳಿಸಿದ್ದಾನೆ. ಬಳಿಕ ಪ್ರಯಾಣಿಕ ತನ್ನ ಪರಿಸ್ಥಿತಿ ತಿಳಿಸಿ ಮನವಿ ಮಾಡಿಕೊಂಡರು ಮಾರಾಟಗಾರ ಮಾತ್ರ ದರ್ಪದಿಂದಲೇ ವರ್ತಿಸಿ ಗ್ರಾಹಕನ ಟೀಶರ್ಟ್ ಹಿಡಿದು, ಹಣ ಕೊಟ್ಟೇ ಇಲ್ಲಿಂದ ಹೋಗು ಎಂದಿದ್ದಾನೆ. ಬಳಿಕ ಆತನ ಜೇಬಿಗೆ ಕೈ ಹಾಕಿ ಹಣ ಪಡೆಯಲು ಕೂಡ ಮುಂದಾಗಿದ್ದಾನೆ.
ಕೊನೆಗೆ ಪ್ರಯಾಣಿಕ ಏನು ಮಾಡುದೆಂದು ತೋಚದೆ ತನ್ನ ಸ್ಮಾರ್ಟ್ ವಾಚ್ ಅನ್ನು ಅಡವಿಡಲು ಮುಂದಾಗಿದ್ದಾನೆ. ಇವೆಲ್ಲವನ್ನು ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು ಬಳಿಕ ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಸಮೋಸಾ ಖರೀದಿ ಮಾಡಿ ಅದರ ಹಣ ನೀಡುವಂತೆ ಮಾರಾಟಗಾರನು ಗ್ರಾಹಕನಿಗೆ ಕಿರುಕುಳ ನೀಡಿದ್ದ ದೃಶ್ಯಗಳನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೊಗೆ ನಾನಾ ತರನಾಗಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಪರ ವಿರೋಧ ಚರ್ಚೆಗಳು ಕೂಡ ಏರ್ಪಟ್ಟಿದೆ. ಆತನು ಅಷ್ಟೊಂದು ದೈಹಿಕ ಕಿರುಕುಳ ನೀಡುವಾಗ ರೈಲ್ವೆ ನಿಲ್ದಾಣದ ಸಿಬಂದಿ ಏನು ಕ್ರಮ ಕೈಗೊಂಡಿಲ್ಲದ್ದು ಆಕ್ಷೇಪಣಾರ್ಹ ವಿಚಾರ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಜಬಲ್ಪುರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಆದೇಶದಂತೆ ಮಾರಾಟಗಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆತನ ಪರವಾನಗಿಯನ್ನು ಕೂಡ ರದ್ದುಗೊಳಿಸಿ ಶಿಸ್ತಿನ ಕ್ರಮ ಕೈಗೊಂಡಿದ್ದಾರೆ.