ಲಖನೌ, ಆ. 4: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎಂದು ಹಲವು ಪೋಷಕರು ದೂರುತ್ತಿರುತ್ತಾರೆ. ಹೀಗಾಗಿ ಖಾಸಗಿ ಶಾಲೆಯತ್ತ ಪೋಷಕರು ಗಮನ ಹರಿಸುತ್ತಿದ್ದಾರೆ. ಸರ್ಕಾರವು ಶಾಲೆಗಳಲ್ಲಿ ಆಧುನಿಕ ಸೌಲಭ್ಯಗಳನ್ನು ನೀಡಿದರೂ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೆಯೇ? ಎನ್ನುವ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಕನ್ನೌಜ್‌ನಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತರಗತಿ ವೇಳೆಯಲ್ಲಿ ನಿದ್ದೆ ಮಾಡಿದರೆ, ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಾರೆ. ಈ ಘಟನೆಯ ದೃಶ್ಯ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಮಕ್ಕಳ ಭವಿಷ್ಯದ ಬಗ್ಗೆ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
ಶಿಕ್ಷಕರು ತರಗತಿಯೊಳಗಿನ ಬೆಂಚ್ ಮೇಲೆ ಆರಾಮವಾಗಿ ಮಲಗಿದ್ದು, ಹಲವು ವಿದ್ಯಾರ್ಥಿಗಳು ಮೊಬೈಲ್ ಫೋನ್ ನೋಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸರ್ಕಾರಿ ಶಾಲೆಗಳಲ್ಲಿ ಶಿಸ್ತಿನ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಬೋಧನಾ ಸಮಯದಲ್ಲಿ ಶಿಕ್ಷಕರು ಸರಿಯಾದ ಮೇಲ್ವಿಚಾರಣೆ ನಡೆಸುತ್ತಾರ ಮತ್ತು ತರಗತಿ ನಿರ್ವಹಿಸುತ್ತಾರ? ಎಂದು ಪೋಷಕರು ಪ್ರಶ್ನಿಸಿದ್ದಾರೆ.
ವಿಡಿಯೊ ನೋಡಿ:
ಈ ದೃಶ್ಯದಲ್ಲಿ ಶಿಕ್ಷಕರು ತರಗತಿಯೊಳಗಿನ ಬೆಂಚ್ ಮೇಲೆ ಹಾಯಾಗಿ ಮಲಗಿರುವುದು ಕಂಡು ಬಂದಿದೆ. ಶಿಕ್ಷಕರೇ ಮಲಗಿದ ಮೇಲೆ ವಿದ್ಯಾರ್ಥಿಗಳನ್ನು ನಿಯಂತ್ರಿಸುವವರು ಯಾರು? ಹೀಗಾಗಿ ಅವರು ಮೊಬೈಲ್ ನೋಡುತ್ತ ಸಮಯ ಕಳೆದಿದ್ದಾರೆ. ಆದರೆ ವಿಡಿಯೊವನ್ನು ಯಾರು ರೆಕಾರ್ಡ್ ಮಾಡಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಈ ದೃಶ್ಯಗಳ ಸತ್ಯಾಸತ್ಯತೆ ದೃಢಪಟ್ಟಿಲ್ಲ.
ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರ್ ನೋಡಿ ಮಾಲಕ ಭಾವುಕ
ಈ ವಿಡಿಯೊವನ್ನು ʼಜಿಂಗಾಬಾದ್ʼ ಖಾತೆ ಮೂಲಕ ಶೇರ್ ಮಾಡಲಾಗಿದೆ. ಕ್ಲಿಪ್ ಅನ್ನು ಕನ್ನೌಜ್ ಪೊಲೀಸರಿಗೆ ಟ್ಯಾಗ್ ಮಾಡಲಾಗಿದ್ದು ಶಿಕ್ಷಕರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆಯು ಮತ್ತೊಮ್ಮೆ ತರಗತಿಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವ ಮತ್ತು ಶಾಲಾ ಸಮಯದಲ್ಲಿ ಶಿಕ್ಷಕರ ವರ್ತನೆಯ ಮಹತ್ವವನ್ನು ಎತ್ತಿ ತೋರಿಸಿದೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಒಬ್ಬರು, ʼʼಈ ಘಟನೆ ನಿಜವೆಂದು ಕಂಡು ಬಂದರೆ ಸರಿಯಾದ ಕ್ರಮ ಕೈಗೊಳ್ಳಿʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ʼʼಸರ್ಕಾರಿ ಹಾಗೂ ಖಾಸಗಿ ಶಾಲೆಯ ವ್ಯತ್ಯಾಸ ಇಷ್ಟೇʼʼ ಎಂದು ಟೀಕಿಸಿದ್ದಾರೆ.