ಚೆನ್ನೈ, ಡಿ. 29: ವಲಸೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು (Tamil Nadu Police) ನಾಲ್ವರು ಹದಿಹರೆಯದ ಬಾಲಕರನ್ನು ಬಂಧಿಸಿದ್ದಾರೆ. ಚೆನ್ನೈನಿಂದ ತಿರುತ್ತಣಿಗೆ ತೆರಳುತ್ತಿದ್ದ ಉಪನಗರ ರೈಲಿನೊಳಗೆ ನಾಲ್ವರು ಹದಿಹರೆಯದ ಬಾಲಕರು ಒಡಿಶಾದ ವಲಸೆ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೊ ವೈರಲ್ (viral video) ಆಗಿದ್ದು, ಆರೋಪಿಗಳಲ್ಲಿ ಒಬ್ಬ ಇನ್‌ಸ್ಟಾಗ್ರಾಮ್ ರೀಲ್ ಆಗಿ ಹಲ್ಲೆಯ ವಿಡಿಯೊವನ್ನು ಹಂಚಿಕೊಂಡಿದ್ದಾನೆ. ಮಚ್ಚನ್ನು ಹಿಡಿದು ತಮಿಳು ಹಾಡನ್ನು ಹಿನ್ನೆಲೆ ಸಂಗೀತವಾಗಿ ಬಳಸಿದ್ದಾನೆ.
ಮತ್ತೊಂದು ವಿಡಿಯೊದಲ್ಲಿ ಆರೋಪಿಗಳು ಕಾರ್ಮಿಕನಿಗೆ ಮಚ್ಚಿನಿಂದ ಹೊಡೆಯುತ್ತಿರುವುದು ಕಂಡುಬಂದಿದೆ. ನಂತರ ದಾಳಿಕೋರರಲ್ಲಿ ಒಬ್ಬರು ವಿಜಯದ ಚಿಹ್ನೆಯೊಂದಿಗೆ ಕಾರ್ಮಿಕನ ಪಕ್ಕದಲ್ಲಿ ಪೋಸ್ ನೀಡಿದ್ದಾನೆ. ಈ ದಾಳಿಯಲ್ಲಿ ಕಾರ್ಮಿಕ ರಕ್ತಸಿಕ್ತನಾಗಿ ಗಂಭೀರ ಗಾಯಗೊಂಡಿದ್ದಾರೆ. ಪ್ರಸ್ತುತ ಅವರು ತಿರುವಳ್ಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ಲಿಂಕ್‌ಇಟ್‌ನಿಂದ ಕೇವಲ 6 ನಿಮಿಷಗಳಲ್ಲಿ ಆರ್ಡರ್ ಪಡೆದ ಅಮೆರಿಕದ ವ್ಯಕ್ತಿಗೆ ಅಚ್ಚರಿ
ಪ್ರಕರಣ ಸಂಬಂಧ 17 ವರ್ಷ ವಯಸ್ಸಿನ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ನಂತರ ಅವರಲ್ಲಿ ಮೂವರನ್ನು ಚೆಂಗಲ್ಪಟ್ಟುವಿನ ಬಾಲಾಪರಾಧಿ ಜೈಲಿಗೆ ಕಳುಹಿಸಲಾಯಿತು. ಆದರೆ ನಾಲ್ಕನೇ ಆರೋಪಿಯನ್ನು ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ಸಾರ್ವಜನಿಕರಿಗೆ ಸುರಕ್ಷಿತ ಭಾವನೆ ಮೂಡಿಸುವಂತೆ ತಮಿಳುನಾಡಿನ ಶಿವಗಂಗಾದ ಸಂಸದ ಕಾರ್ತಿ ಚಿದಂಬರಂ ರಾಜ್ಯ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಹಲ್ಲೆಯ ವಿಡಿಯೊ ಇಲ್ಲಿದೆ:
ʼʼನನ್ನ ಹಿಂದಿನ ಬೇಡಿಕೆಯನ್ನು ನಾನು ಪುನರುಚ್ಚರಿಸುತ್ತದ್ದೇನೆ. ತಮಿಳುನಾಡು ಪೊಲೀಸರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಸಮಯ ಬಂದಿದೆ. ರಾಜ್ಯವ್ಯಾಪಿ ಶೋ ಆಫ್ ಫೋರ್ಸ್ ಕಾರ್ಯಾಚರಣೆ ತಕ್ಷಣವೇ ಅಗತ್ಯವಾಗಿದೆ. ರಸ್ತೆಗಳಲ್ಲಿ ಚಲಿಸುವ ಎಲ್ಲ ವಾಹನಗಳ ತಪಾಸಣೆ ಮತ್ತು ಗುರುತಿನ ಪರಿಶೀಲನೆಗಳನ್ನು ನಡೆಸಬೇಕು. ರೌಡಿಸಂ ಇತಿಹಾಸ ಹೊಂದಿರುವವರು ವಾರಕ್ಕೆ ಮೂರು ಬಾರಿ ಹತ್ತಿರದ ಪೊಲೀಸ್ ಠಾಣೆಗೆ ಹಾಜರಾಗಬೇಕುʼʼ ಎಂದು ಚಿದಂಬರಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ, ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸರ್ಕಾರವನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳು, ರಾಜ್ಯದಲ್ಲಿ ಮಾದಕ ದ್ರವ್ಯ ಪಿಡುಗನ್ನು ನಿಯಂತ್ರಿಸುವಲ್ಲಿ ಡಿಎಂಕೆ ವಿಫಲವಾಗಿದೆ ಎಂದು ಆರೋಪಿಸಿದೆ.
ʼʼಡಿಎಂಕೆಯ ದ್ರಾವಿಡ ಮಾದರಿ ಸಾಧನೆಯಿದು. ಮಾದಕ ವಸ್ತುಗಳು ಬಾಲಾಪರಾಧಿಗಳ ಕೈಗೆ ಸಿಕ್ಕಾಗ ಹೀಗಾಗುತ್ತದೆ. ತಮಿಳುನಾಡು ಈಗ ಭಾರತದ ನ್ಯೂ ಆಮ್‌ಸ್ಟರ್ಡ್ಯಾಮ್ ಮತ್ತು ನಾರ್ಕೋಟಿಕ್ ರಾಜ್ಯವಾಗಿದೆ. ಈ ಹುಡುಗರನ್ನು ಬಾಲಾಪರಾಧಿಗಳೆಂದು ಪರಿಗಣಿಸಬಾರದು, ಅವರನ್ನು ವಯಸ್ಕರಂತೆ ಪರಿಗಣಿಸಬೇಕುʼʼ ಎಂದು ಎಐಎಡಿಎಂಕೆಯ ಕೋವೈ ಸತ್ಯನ್ ಹೇಳಿದರು.
ಡಿಎಂಕೆ ನಾಯಕ ಟಿಕೆಎಸ್ ಎಳಂಗೋವನ್ ಇದನ್ನು ಪ್ರತ್ಯೇಕ ಘಟನೆ ಎಂದು ಕರೆದರು. ʼʼಘಟನೆ ಬೆಳಕಿಗೆ ಬಂದಾಗ, ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ತಮಿಳುನಾಡಿನಾದ್ಯಂತ ಸಾವಿರಾರು ವಲಸೆ ಕಾರ್ಮಿಕರಿದ್ದು, ಅವರು ರಾಜ್ಯದಲ್ಲಿ ಸುರಕ್ಷಿತ ಭಾವನೆ ಹೊಂದಿದ್ದಾರೆʼʼ ಎಂದು ತಿಳಿಸಿದರು.