ನವದೆಹಲಿ: ಬೀದಿನಾಯಿಗಳ ಮೇಲೆ ಜನರು ಕ್ರೂರವಾಗಿ ದಾಳಿ ಮಾಡುವ ಘಟನೆ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಕಟ್ಟಿಹಾಕಿ ಕೋಲುಗಳಿಂದ ಹೊಡೆದು ಕೊಂದ ಭಯಾನಕ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ದೆಹಲಿಯ ಕರವಾಲ್ ನಗರದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕ್ರೂರ ಕೃತ್ಯಕ್ಕಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.
ವರದಿಗಳ ಪ್ರಕಾರ, ದೆಹಲಿಯ ಕರವಾಲ್ ನಗರದ ಶಿವ ವಿಹಾರ್‌ನಲ್ಲಿ ಈ ಘಟನೆ ನಡೆದಿದೆ. ಈ ಕ್ರೌರ್ಯದ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಆದರೆ ಈ ಪ್ರದೇಶದ ನಿವಾಸಿಗಳು ಆರೋಪಿಗಳನ್ನು ಗುರುತಿಸಿ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಬೀದಿ ನಾಯಿಯ ಮೇಲೆ ವ್ಯಕ್ತಿಯ ಈ ಹೀನಕೃತ್ಯ ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ ಹಾಗೂ ಅಂಥವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪೊಲೀಸ್ ಕ್ರಮದ ಬಗ್ಗೆ ವರದಿಯಾಗಿಲ್ಲ. ಕರವಾಲ್ ನಗರದ ಬಿಜೆಪಿ ಶಾಸಕ ಮತ್ತು ಕೇಂದ್ರ ಸಚಿವ ಕಪಿಲ್ ಮಿಶ್ರಾ ಈ ಘಟನೆಯ ಬಗ್ಗೆ ಗಮನ ಹರಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ಬೀದಿ ನಾಯಿಯನ್ನು ಕೋಲಿನಿಂದ ಹೊಡೆದು ಕೊಂದ ದುರುಳ
ಬೀದಿನಾಯಿಗಳನ್ನು ಕ್ರೂರವಾಗಿ ಕೊಂದಂತಹ ಘಟನೆ ನಡೆದಿದ್ದು ಇದೆ ಮೊದಲಲ್ಲ. ಈ ಹಿಂದೆ ಉತ್ತರ ಪ್ರದೇಶದ ಆಗ್ರಾದಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿತ್ತು. ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಕೋಲಿನಿಂದ ಹೊಡೆದು ಕ್ರೂರವಾಗಿ ಕೊಂದಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದು ಈಗ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ಆಗಿ ಪ್ರಾಣಿಪ್ರಿಯರ ಕೆಂಗಣ್ಣಿಗೆ ಕಾರಣವಾಗಿತ್ತು.
ಶ್ಯಾಮ್ ನಗರ ಪ್ರದೇಶದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿತ್ತು. ವಿಡಿಯೊದಲ್ಲಿ ವ್ಯಕ್ತಿಯೊಬ್ಬ ದೊಡ್ಡದಾದ ದೊಣ್ಣೆಯನ್ನು ಹಿಡಿದುಕೊಂಡು ಬೀದಿ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಆತನ ಹೊಡೆತ ಸಹಿಸಲಾರದೇ ನಾಯಿ ನೋವಿನಿಂದ ಕೂಗುತ್ತಾ ಅಲ್ಲಿಂದ ಓಡಿದಾಗ ಆತ ಅದನ್ನು ಓಡಿಸಿಕೊಂಡು ಹೋಗಿ ಕೊಂದಿದ್ದಾನೆ. ಈ ದೃಶ್ಯ ಅಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಸತ್ತ ಸೊಳ್ಳೆಯನ್ನು ಸಂಗ್ರಹಿಸುವ ಹುಡುಗಿ; ವೈರಲ್ ಆಯ್ತು ವಿಲಕ್ಷಣ ಹವ್ಯಾಸದ ವಿಡಿಯೊ
ವರದಿ ಪ್ರಕಾರ, ನಾಯಿ ಶ್ಯಾಮ್ ನಗರದಲ್ಲಿ ವಾಸಿಸುವ ವಕೀಲ ಅಮಿತ್ ಮಿಶ್ರಾ ಮನೆಯ ಹೊರಗೆ ಮಲಗುತ್ತಿತಂತೆ. ಆಗ ನೆರೆಮನೆಯ ರಾಜ್ ಕುಮಾರ್ ಎಂಬಾತ ಇದ್ದಕ್ಕಿದ್ದಂತೆ ನಾಯಿಯ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ. ನಂತರ ಅಮಿತ್ ಮಿಶ್ರಾ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.