ತೆಲಂಗಾಣ: ಆಂಧ್ರಪ್ರದೇಶದ ತೆನಾಲಿ ಹೆದ್ದಾರಿಯಲ್ಲಿ ಪೊಲೀಸರು ಮೂವರ ಯುವಕರ ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿಹಾಕಿ ನಡು ರಸ್ತೆಯಲ್ಲಿ ಕೂರಿಸಿ ಅವರಿಗೆ ಬೆತ್ತದಿಂದ ಥಳಿಸಿದ ಘಟನೆಯೊಂದು ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾನ್‌ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಪೊಲೀಸರು ಅವರಿಗೆ ತಕ್ಕ ಪಾಠ ಕಲಿಸಲು ಸಾರ್ವಜನಿಕವಾಗಿ ಥಳಿಸಿದ್ದಾರಂತೆ.ಆರೋಪಿಗಳಾದ ಚೆಬ್ರೋಲು ಜಾನ್ ವಿಕ್ಟರ್ (25), ಶೇಕ್ ಬಾಬುಲಾಲ್ (21) ಮತ್ತು ದೋಮ ರಾಕೇಶ್ (25) ಲಡ್ಡು ಎಂಬ ಪ್ರಸಿದ್ಧ ರೌಡಿಶೀಟರ್‌ನ ಸಹಚರರಾಗಿದ್ದು, ಒಂದು ತಿಂಗಳ ಹಿಂದೆ ಐತಾನಗರದಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿ ಕಾನ್‌ಸ್ಟೇಬಲ್ ಚಿರಂಜೀವಿಯ ಮೇಲೆ ಹಲ್ಲೆ ನಡೆಸಿದ್ದಾರಂತೆ.
ಕಾನ್‌ಸ್ಟೇಬಲ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಈ ಸಾರ್ವಜನಿಕವಾಗಿ ಶಿಕ್ಷೆ ವಿಧಿಸಿದ್ದಾರೆ ಎನ್ನಲಾಗಿದೆ. ಪೊಲೀಸರ ದೌರ್ಜನ್ಯದ ಈ ವಿಡಿಯೊವನ್ನು ವೈಎಸ್ಆರ್ ಪಕ್ಷದ ವಕ್ತಾರ ಅಂಬಟಿ ರಾಂಬಾಬು, ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಎಲ್ಲೆಡೆ ವೈರಲ್ ಆಗಿದೆ. ವೈರಲ್ ವಿಡಿಯೊದಲ್ಲಿ ಪೊಲೀಸೊಬ್ಬ ಕೋಲನ್ನು ಹಿಡಿದುಕೊಂಡು ಮೂವರು ಯುವಕರಿಗೆ ಥಳಿಸಿದ್ದಾನೆ. ಯುವಕರು "ಕ್ಷಮಿಸಿ, ಸರ್," ಎಂದು ಕಿರುಚಿದ್ರೂ ಪೊಲೀಸರು ಅವರ ಕಾಲುಗಳನ್ನು ಬೂಟುಗಳಿಂದ ಮೆಟ್ಟಿ ಥಳಿಸಿದ್ದಾರೆ.
ಮೂವರು ಯುವಕರಿಗೆ ಥಳಿಸಿದ ಪೊಲೀಸರು ವಿಡಿಯೊ ಇಲ್ಲಿದೆ ನೋಡಿ...
ಆಂಧ್ರಪ್ರದೇಶದ ಗುಂಟೂರಿನ ತೆನಾಲಿ ಹೆದ್ದಾರಿಯಲ್ಲಿ ಈ ಘಟನೆ ವರದಿಯಾಗಿದ್ದು, ಈ ವಿಡಿಯೊ ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ. ಕೆಲವರು ಪೊಲೀಸ್ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾನೂನಿಗೆ ಗೌರವ ನೀಡಬೇಕಾಗಿದ್ದ ಅಧಿಕಾರಿಗಳು ಈ ರೀತಿ ಸಾರ್ವಜನಿಕವಾಗಿ ಶಿಕ್ಷೆ ವಿಧಿಸಿದ್ದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮ್ಮ ಸ್ನೇಹಿತನಿಗಾಗಿ ಈ ಮಕ್ಕಳು ಮಾಡಿದ್ದೇನು ನೋಡಿ....ಹೃದಯಸ್ಪರ್ಶಿ ವಿಡಿಯೊ ವೈರಲ್!
ಪೊಲೀಸ್ ವರದಿ ಪ್ರಕಾರ, ಮೂವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಂತೆ! ವಿಕ್ಟರ್ ವಿರುದ್ಧ ಕೊಲೆ ಯತ್ನ ಸೇರಿದಂತೆ ಒಂಬತ್ತು ಪ್ರಕರಣಗಳಿವೆ ಎನ್ನಲಾಗಿದೆ. ರಾಕೇಶ್ ವಿರುದ್ಧ ಇದೇ ರೀತಿಯ ಗಂಭೀರ ಆರೋಪಗಳು ಸೇರಿದಂತೆ ಆರು ಪ್ರಕರಣಗಳು ಬಾಕಿ ಉಳಿದಿವೆ ಮತ್ತು ಕಾನ್‌ಸ್ಟೆಬಲ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಾಬುಲಾಲ್ ಭಾಗಿಯಾಗಿದ್ದಾನೆ ಎನ್ನಲಾಗಿದೆ.