ಬೆಂಗಳೂರು, ಡಿ. 9: ಇತ್ತೀಚಿನ ಕೆಲವು ವರ್ಷದಲ್ಲಿ ಕೆಲಸಕ್ಕೆಂದು ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೆಹಲಿ, ಹೈದರಾಬಾದ್, ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಉದ್ಯೋಗ, ಶಿಕ್ಷಣ, ಇತರ ಕೆಲಸ ನಿಮಿತ್ತ ಬರುವವರು ಬಳಿಕ ಇಲ್ಲೇ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹೀಗೆ ಬಂದ ವಲಸಿಗರು ನಮ್ಮ ಕನ್ನಡ ಮಾತನಾಡುವ ವಿಚಾರಕ್ಕೆ ಅಸಮಾಧಾನ ಹೊಂದಿ ಸ್ಥಳೀಯರೊಂದಿಗೆ ವಾಗ್ವಾದಕ್ಕೆ ಇಳಿಯುವ ಘಟನೆ ಆಗಾಗ ವರದಿಯಾಗುತ್ತಲೇ ಇರುತ್ತದೆ. ಆದರೆ ಬೆಂಗಳೂರಿನಲ್ಲಿ ವಾಸಿಸುವ ದೆಹಲಿ ಮೂಲದ ಮಹಿಳೆಯೊಬ್ಬರು ಇದಕ್ಕೆ ವ್ಯತಿರಿಕ್ತ ಎಂಬಂತೆ ಕನ್ನಡ ಭಾಷೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಕನ್ನಡವನ್ನು ದ್ವೇಷಿಸುವ ಮನೋಭಾವವನ್ನು ನಾವು ತೊರೆಯಬೇಕು. ನಮಗೆ ನಾರ್ಥ್ ಮೈಂಡ್ ಸೆಟ್ ಗಾಢವಾಗಿ ಬೇರೂರಿದ್ದ ಕಾರಣ ಈ ಭಾಷೆಯನ್ನು ನಾವು ಕಲಿಯುತ್ತಿಲ್ಲ. ಆದರೆ ನಿಜವಾಗಿ ಈ ಭಾಷೆ ಕಲಿತರೆ ಇಲ್ಲಿನ ನಿತ್ಯದ ಬದುಕು ತುಂಬ ಚೆನ್ನಾಗಿರುತ್ತದೆ ಎಂದು ಅವರು ವಿಡಿಯೊ ಮೂಲಕ ಹೇಳಿದ್ದಾರೆ. ಸದ್ಯ ಅವರ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral video) ಆಗುತ್ತಿದೆ.
ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ ಯುವತಿಯೊಬ್ಬಳು ನನಗೆ ಕನ್ನಡ ಭಾಷೆ, ಇತರ ವಿಚಾರಗಳ ಬಗ್ಗೆ ಯಾವುದೆ ಆಸಕ್ತಿ ಇರಲಿಲ್ಲ ಎಂದಿದ್ದಳು. ಕನ್ನಡ ಬರದಿದ್ದರೆ ಬೆಂಗಳೂರಿಗೆ ಬರಬೇಡಿ ಎಂಬ ಕೆಲವು ಹೇಳಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ನಾನು ಕೇಳಿದ್ದೆ. ಹಾಗೆಂದ ಮಾತ್ರಕ್ಕೆ ನಾವ್ಯಾಕೆ ಕನ್ನಡ ಕಲಿಯಲೇ ಬೇಕು ಎಂದು ಅಂದುಕೊಂಡಿದ್ದೆ. ಕನ್ನಡ ಬರದಿದ್ದರೂ ಇಂಗ್ಲಿಷ್ ಭಾಷೆ ಬಳಸಿಕೊಂಡು ಡೈಲಿ ಲೈಫ್ ಲೀಡ್ ಮಾಡಬೇಕು ಎಂಬ ಮನೋಭಾವ ಇತ್ತು. ನನ್ನಂಥೆ ಅನೇಕರಿಗೆ ಇದೇ ರೀತಿಯ ಭಾವನೆ ಇದೆ. ಆದರೆ ಬೆಂಗಳೂರಿನಲ್ಲಿ ವಾಸಿಸಿದ್ದ ಬರೀ 60 ದಿನಗಳಲ್ಲಿ ನನ್ನ ಈ ದೃಷ್ಟಿಕೋನವು ಸಂಪೂರ್ಣವಾಗಿ ಬದಲಾಯಿತು ಎಂದು ವಿಡಿಯೊದಲ್ಲಿ ಅವರು ಹೇಳಿದ್ದಾರೆ.
ವಿಡಿಯೊ ನೋಡಿ:
ಸ್ಥಳೀಯ ಭಾಷೆಯನ್ನು ಕಲಿಯುವ ಅಗತ್ಯವನ್ನು ಇಲ್ಲಿ ಯಾರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕನ್ನಡ ಕಲಿಯುವ ಬಗ್ಗೆ ಇಲ್ಲಿ ಒತ್ತಡವೆನಿಲ್ಲ...ನಾವು ಅದನ್ನು ಕಲಿತರೆ ನಮ್ಮ ನಿತ್ಯದ ಜೀವನ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ನಾವು ಅವರನ್ನು ಕನ್ನಡದಲ್ಲೇ ಮಾತನಾಡಿಸಿದಾಗ ಅವರಿಗೆ ನಮ್ಮ ಬಗ್ಗೆ ಒಂದು ಆಪ್ತತೆ ಬೆಳೆಯುತ್ತದೆ. ಆಗ ಅವರು ನಮ್ಮನ್ನು ಗೌರವಿಸುತ್ತಾರೆ. ಪ್ರೀತಿ, ಕಾಳಜಿ, ಕನಿಕರ ಕೂಡ ತೋರಿಸುತ್ತಾರೆ ಎಂದು ಈ ಬಗ್ಗೆ ಆ ಮಹಿಳೆ ವಿಡಿಯೊ ಮೂಲಕ ವಿವರಿಸಿದ್ದಾರೆ. ಸ್ಥಳೀಯ ಭಾಷೆಯಲ್ಲಿ ಕೆಲವು ಪದಗಳನ್ನು ಮಾತನಾಡಲು ಪ್ರಯತ್ನಿಸಿದಾಗ ಕನ್ನಡ ಕಲಿಯಲು ಇಲ್ಲಿನ ಜನರು ಕೂಡ ಪ್ರೋತ್ಸಾಹ ನೀಡುತ್ತಾರೆ. ಇವೆಲ್ಲ ಕಂಡಾಗ ಬೆಂಗಳೂರಿನಲ್ಲಿ ಕನ್ನಡ ಬಲ್ಲವರು ಬದುಕುವುದು ತುಂಬಾ ಸುಲಭ ಎಂದು ನನಗೆ ಅರಿವಾಯಿತು ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ಇಂಡಿಗೋ ಪ್ರಯಾಣ ರದ್ದು; ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾದ ವಿಡಿಯೋ ವೈರಲ್
ಬಳಿಕ ಆ ಮಹಿಳೆ ಬೆಂಗಳೂರಿನ ಎಚ್‌ಎಸ್ಆರ್ ಲೇಔಟ್‌ನಲ್ಲಿರುವ ದೋಸೆ ಅಂಗಡಿಯಲ್ಲಿ ನಡೆದ ಒಂದು ಸಣ್ಣ ಘಟನೆ ಬಗ್ಗೆ ಹಂಚಿಕೊಂಡಿದ್ದಾರೆ. ಇಲ್ಲಿನ ದೋಸೆ ಅಂಗಡಿಯೊಂದಕ್ಕೆ ನಾಲ್ಕು ದಿನಗಳಿಂದ ನನಗೆ ಕಾರಣಾಂತರಗಳಿಂದ ಹೋಗಲಾಗಲಿಲ್ಲ. ಆದರೆ ಆ ಅಂಗಡಿಯ ಅಣ್ಣ ನೀವು ಏಕೆ ಬರಲಿಲ್ಲ ಎಂದು ನನಗೆ ಕೇಳಿದರು. ಇದನ್ನು ಕೇಳಿ ಖುಷಿಯಾಯಿತು. ಅಪರಿಚಿತಳಾದ ನನಗೂ ಒಂದು ಗುರುತು ದೊರೆತಂತಾಯಿತು ಎಂದು ಅವರು ವಿಡಿಯೊದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬರುವ ಹೊಸಬರು ಕನ್ನಡ ವಿರೋಧಿಸುವುದನ್ನು ಕೈ ಬಿಡಬೇಕು. ನೀವು ಈ ವಿಡಿಯೊ ಕಂಡ ಬಳಿಕವಾದರೂ ಭಾಷಾ ಸಮಸ್ಯೆಯನ್ನು ದೊಡ್ಡದು ಮಾಡಿ ಜಗಳವಾಡುವುದನ್ನು ಬಿಡಬೇಕು. ಕನ್ನಡ ಕಲಿಯುವ ಬಗ್ಗೆ ಜನರು ಹೇಳಿದರೆ ಅದನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈ ವಿಡಿಯೊವನ್ನು ನವೆಂಬರ್ 26ರಂದು ಪೋಸ್ಟ್ ಮಾಡಲಾಗಿದ್ದು, ಈಗಾಗಲೇ 1.2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೊ ಬಗ್ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಭಾಷೆ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದೀರಿ. ನಿಮ್ಮಂಥೆ ಎಲ್ಲರೂ ಇಲ್ಲಿನ ನೆಲ ಜಲ ಭಾಷೆಗೆ ಗೌರವ ನೀಡಿದರೆ ನಿಮಗೂ ಇಲ್ಲಿನವರು ಪ್ರೀತಿ ಕೊಟ್ಟು ಪ್ರೋತ್ಸಾಹ ನೀಡುತ್ತಾರೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.