ಭೋಪಾಲ್, ಡಿ. 2: ಮೃಗಾಲಯ, ಅನಿಮಲ್ ಸಫಾರಿ ವೇಳೆ ಪ್ರವಾಸಿಗರು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನರಭಕ್ಷಕ ಕಾಡು ಪ್ರಾಣಿಗಳು ಯಾವ ಸಂದರ್ಭದಲ್ಲಿ ಮನುಷ್ಯನ ಮೇಲೆ ದಾಳಿ ಮಾಡುತ್ತವೆ ಎಂದು ಹೇಳಲಾಗದು. ಆದರೂ ಪ್ರವಾಸಿಗರು ಕೆಲವೊಮ್ಮೆ ನಿಯಮ ಉಲ್ಲಂಘಿಸಿ ಪ್ರಾಣಿಗಳ ಜತೆ ಹುಚ್ಚಾಟ ಮೆರೆದು ಪ್ರಾಣ ಕಳೆದುಕೊಂಡಿದ್ದೂ ಇದೆ. ಇದೀಗ ಮಧ್ಯ ಪ್ರದೇಶದ ಪನ್ನಾ ಹುಲಿ ಸಂರಕ್ಷಾಣ ಅರಣ್ಯದಲ್ಲಿ ಸಫಾರಿಯ ವೇಳೆ ಪ್ರವಾಸಿಗರು ಅತಿರೇಕದ ವರ್ತನೆ ತೋರಿದ್ದಾರೆ. ಹುಲಿಗಳ ಗುಂಪೊಂದು ಕಾಣಿಸಿಕೊಂಡಾಗ ಅವುಗಳನ್ನು ಅಡ್ಡಗಟ್ಟಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಘಟನೆಯ ವೀಡಿಯೊ ವೈರಲ್ (Viral Video) ಆಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ.
ಅಪಾಯಕಾರಿಯಾಗಿ ಹತ್ತಿರದಿಂದ ಹುಲಿಗಳ ಗುಂಪನ್ನು ವೀಕ್ಷಿಸುತ್ತಾ ಹುಚ್ಚಾಟ್ಟ ಮೆರೆದಿದ್ದು ಇದು ಪ್ರವಾಸಿಗರ ಸುರಕ್ಷತೆ ಮತ್ತು ಉದ್ಯಾನವನ ನಿರ್ವಹಣೆಯ ಬಗ್ಗೆ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಮಡ್ಲಾ ಗೇಟ್ ಬಳಿ ನಡೆದ ಈ ಘಟನೆಯಲ್ಲಿ, ಸಫಾರಿ ವೇಳೆ ಐದು ಹುಲಿಗಳ ಗುಂಪು ಕಾಣಿಸಿಕೊಂಡಿದೆ. ಈ ಹುಲಿಗಳು ತಮ್ಮ ದಾರಿಯಲ್ಲಿ ತಮ್ಮಷ್ಟಕ್ಕೆ ಸಾಗುತ್ತಿದ್ದಾಗ, ಅವುಗಳನ್ನು ಹತ್ತಿರದಿಂದ ನೋಡಲು ಮತ್ತು ಫೋಟೋ ತೆಗೆದು ಕೊಳ್ಳುವ ಉದ್ದೇಶದಿಂದ ಹಲವು ಪ್ರವಾಸಿ ಜಿಪ್ಸಿಗಳು ಒಂದರ ಹಿಂದೆ ಒಂದರಂತೆ ನಿಂತು ಹುಲಿಗಳ ಸಂಚಾರವನ್ನು ಸಂಪೂರ್ಣವಾಗಿ ತಡೆಹಿಡಿದಿದ್ದಾರೆ.
ವಿಡಿಯೊ ವೀಕ್ಷಿಸಿ:
ಹುಲಿಗಳು ವಾಹನಗಳ ಬಳಿ ಹಾದು ಹೋಗುತ್ತಿದ್ದಂತೆ, ಕೆಲವು ಪ್ರವಾಸಿಗರು ಸೆಲ್ಫಿ ತೆಗೆದು ಕೊಳ್ಳುವುದನ್ನು ವಿಡಿಯೊದಲ್ಲಿ ನೋಡಬಹುದು. ಹುಲಿಗಳು ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ, ನಿಲ್ಲಿಸಿದ ವಾಹನದಿಂದಾಗಿ ಅವುಗಳು ಗಲಿಬಿಲಿಗೊಂಡು, ಗೊಂದಲ ವ್ಯಕ್ತಪಡಿಸಿರುವುದು ಸ್ಪಷ್ಟವಾಗಿ ಕಾಣಿಸಿದೆ. ಕೊನೆಗೆ ಹುಲಿಗಳು ಹೇಗೋ ವಾಹನಗಳ ಪಕ್ಕದಿಂದ ಸಾಗಿ ಹುಲ್ಲುಗಾವಲಿಗೆ ತೆರಈವೆ. ಈ ವರ್ತನೆಯು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಗದಿ ಪಡಿಸಿರುವ ಮಾರ್ಗ ಸೂಚಿಗಳ ಸ್ಪಷ್ಟ ಉಲ್ಲಂಘನೆ ಎನಿಸಿಕೊಂಡಿದೆ.
ಅರೇ...ಇದೇನಿದು ಹಣ್ಣಿನ ಮೊಮೊಸ್? ವೈರಲ್ ಆಗ್ತಿದೆ ಈ ವಿಚಿತ್ರ ಖಾದ್ಯದ ವಿಡಿಯೊ
ವನ್ಯಜೀವಿ ತಜ್ಞರು ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ವರ್ತನೆ ಯಾವುದೇ ಕ್ಷಣದಲ್ಲಿ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಇಂತವರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ. ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂತವರಿಗೆ ಸರಿಯಾದ ಶಿಕ್ಷೆಯನ್ನು ನೀಡಬೇಕು ಎಂದು ಬರೆದುಕೊಂಡಿದ್ದಾರೆ. ಒಬ್ಬರು ಹುಲಿಗಳ ಗುಂಪು ದಾಳಿ ಮಾಡಿದ್ದರೆ ಎಲ್ಲರ ಪ್ರಾಣ ಕ್ಷಣ ಮಾತ್ರದಲ್ಲಿ ಹೋಗುತ್ತಿತ್ತು ಎಂದು ಕಮೆಂಟ್ ಮಾಡಿದ್ದಾರೆ.